100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಮಾಜಿ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ
ಖಾಸಗಿ ಶಾಲೆಗಳಿಗೆ ಸರ್ಕಾರಿ ಸಮ್ಮತಿ ಮತ್ತು ಆಡಳಿತಾತ್ಮಕ ಅನುಮೋದನೆ ನೀಡಲು 100 ಕೋಟಿ ರೂ.ಗೂ ಅಧಿಕ ಮೊತ್ತದ ಲಂಚ ಪಡೆದ ಆರೋಪದ ಪ್ರಕರಣದಲ್ಲಿ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಹಾಗೂ ಡಿಎಂಕೆ ಹಿರಿಯ ನಾಯಕ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು ಅಕ್ಟೋಬರ್ 26ರಂದು ಪೊಲೀಸರು ಬಂಧಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೆಲವೇ ಗಂಟೆಗಳಲ್ಲಿ ಗ್ರೇಟರ್ ಚೆನ್ನೈ ಪೊಲೀಸರ ಸಿಸಿಬಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.

ಚೆನ್ನೈ, ಅಕ್ಟೋಬರ್ 26: ಖಾಸಗಿ ಶಾಲೆಗಳ ಮಂಜೂರಾತಿ ಮತ್ತು ಸರ್ಕಾರಿ ಸಮ್ಮತಿ ನೀಡುವ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ 100 ಕೋಟಿ ರೂ. ಅಕ್ರಮ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಮಾಜಿ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅನ್ಬಿಲ್ ಮಹೇಶ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ಕೆಲವೇ ಅವಧಿಯಲ್ಲಿ ಗ್ರೇಟರ್ ಚೆನ್ನೈ ಪೊಲೀಸರ ಸಿಸಿಬಿ ಅವರನ್ನು ವಶಕ್ಕೆ ಪಡೆದುಕೊಂಡಿದೆ.
1,000ಕ್ಕೂ ಹೆಚ್ಚು ಶಾಲೆಗಳಿಂದ ಲಂಚ:
2021ರಿಂದ 2026ರವರೆಗೆ ಶಾಲಾ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಅನ್ಬಿಲ್ ಮಹೇಶ್ ಅವರು ಕಾಯಂ ಮಾನ್ಯತೆ ಮತ್ತು ಮೂಲಸೌಕರ್ಯ ಅನುಮೋದನೆಗಳ ನೆಪದಲ್ಲಿ 1,000ಕ್ಕೂ ಹೆಚ್ಚು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳಿಂದ ಪಾರ್ಟಿ ಫಂಡ್ ಎಂಬ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚೆನ್ನೈ ಸಿಸಿಬಿ ಪೊಲೀಸರು ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ (ಪಿಸಿಎ) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಡಿಎಂಕೆ, ಎಐಎಡಿಎಂಕೆ, ಬಿಜೆಪಿ ನಡುವೆ ಗುಪ್ತ ಒಪ್ಪಂದ’; ತಮಿಳುನಾಡು ಸಿಎಂ ಜೋಸೆಫ್ ವಿಜಯ್ ವಾಗ್ದಾಳಿ
ಈ ಹಗರಣದಲ್ಲಿ ನಡೆದಿರುವ ಶಂಕಿತ ಅಕ್ರಮ ಹಣ ವರ್ಗಾವಣೆ ಜಾಲದ ತನಿಖೆಗಾಗಿ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ತನಿಖೆ ಆರಂಭಿಸಿದೆ. ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಕೆ ಮಾಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಆರಂಭದಲ್ಲಿ ಬಿ.ಟಿ. ಅರಸಕುಮಾರ್ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಆ ನಂತರ ಅನ್ಬಿಲ್ ಮಹೇಶ್ ಅವರಿಗೆ ಸೇರಿದ ಚೆನ್ನೈ ಮತ್ತು ತಿರುಚಿರಾಪಳ್ಳಿಯ 9 ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿ, ಆಸ್ತಿ ಪತ್ರಗಳು, ಬ್ಯಾಂಕ್ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿತ್ತು.
#WATCH | Chennai: Tamil Nadu School Education Minister and DMK leader Anbil Mahesh Poyyamozhi was brought to the Chennai Police Commissioner’s office in connection with an alleged ₹100-crore private school approval scam. https://t.co/ZCTL3aBFom
— ANI (@ANI) October 26, 2026
ಕಳೆದೆರಡು ತಿಂಗಳಲ್ಲಿ ಸಿಸಿಬಿ ತನಿಖಾಧಿಕಾರಿಗಳು ಮಾಜಿ ಸಚಿವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿ, ಅವರ ಹೇಳಿಕೆಗಳನ್ನು ಪ್ರಮುಖ ಸಾಕ್ಷ್ಯಗಳಾಗಿ ದಾಖಲಿಸಿಕೊಂಡಿದ್ದಾರೆ. ಕಳೆದೆರಡು ತಿಂಗಳಲ್ಲಿ ಅನ್ಬಿಲ್ ಮಹೇಶ್ ಅವರನ್ನು ಸಿಸಿಬಿ ಪೊಲೀಸರು ದಿನವಿಡೀ ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಹಗರಣಕ್ಕೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳೊಂದಿಗೆ ಅವರ ಸಂಪರ್ಕ, ಪಕ್ಷದ ದೇಣಿಗೆ ರೂಪದಲ್ಲಿ ನಡೆದ ಶಂಕಿತ ಹಣ ವರ್ಗಾವಣೆ ಹಾಗೂ ಶಾಲಾ ಆಡಳಿತ ಮಂಡಳಿಗಳ ಬ್ಯಾಂಕ್ ವಹಿವಾಟುಗಳ ಬಗ್ಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




