ರಾಜ್ಯಪಾಲರಿಂದ ಏಕಪಕ್ಷೀಯ ನಿರ್ಧಾರ: ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸಚಿವ ಸಂಪುಟದಿಂದ ವಜಾ

ರಾಜಭವನದ ಅಧಿಕೃತ ಹೇಳಿಕೆಯಲ್ಲಿ ಬಾಲಾಜಿ ಅವರು ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು ಹೇಳಿದೆ.

ರಾಜ್ಯಪಾಲರಿಂದ ಏಕಪಕ್ಷೀಯ ನಿರ್ಧಾರ: ಜೈಲಿನಲ್ಲಿರುವ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಸಚಿವ ಸಂಪುಟದಿಂದ ವಜಾ
ಸೆಂಥಿಲ್ ಬಾಲಾಜಿImage Credit source: Twitter/ @V_Senthilbalaji
Follow us
ರಶ್ಮಿ ಕಲ್ಲಕಟ್ಟ
|

Updated on: Jun 29, 2023 | 8:34 PM

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ (RN Ravi) ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಅವರನ್ನು ಸಂಪರ್ಕಿಸದೆಯೇ ಜೈಲಿನಲ್ಲಿರುವ ಸಚಿವ ವಿ ಸೆಂಥಿಲ್ ಬಾಲಾಜಿ  (V Senthil Balaji)ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ರಾಜ್ಯಪಾಲರ ಈ ವಿವಾದಾತ್ಮಕ ನಡೆಯನ್ನು ಡಿಎಂಕೆ ಸರ್ಕಾರ ತೀವ್ರವಾಗಿ ಖಂಡಿಸಿದೆ. ಉದ್ಯೋಗಕ್ಕಾಗಿ ನಗದು ಹಗರಣ ಸೇರಿದಂತೆ ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿನಲ್ಲಿರುವ ಮತ್ತು ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಬಾಲಾಜಿ ಅವರನ್ನು ಸ್ಟಾಲಿನ್ ಅವರು ಖಾತೆಯಿಲ್ಲದೆ ಸಚಿವರಾಗಿ ಉಳಿಸಿಕೊಂಡಿದ್ದರು. ಆದರೆ ಇದೀಗ ರಾಜ್ಯಪಾಲ ರವಿ ಅವರ ಏಕಪಕ್ಷೀಯ ಕ್ರಮದಿಂದ ಈ ನಿರ್ಧಾರವನ್ನು ರದ್ದುಗೊಳಿಸಲಾಗಿದೆ.

ರಾಜಭವನದ ಅಧಿಕೃತ ಹೇಳಿಕೆಯಲ್ಲಿ ಬಾಲಾಜಿ ಅವರು ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿದಂತೆ ಹಲವಾರು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು ಹೇಳಿದೆ.

ತಮಿಳುನಾಡು ಸರ್ಕಾರ ಈ ಕ್ರಮವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಈ ತಿಂಗಳ ಆರಂಭದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿದ್ದ ಬಾಲಾಜಿಯ ನ್ಯಾಯಾಂಗ ಬಂಧನವನ್ನು ಚೆನ್ನೈನ ನ್ಯಾಯಾಲಯವು ಜುಲೈ 12 ರವರೆಗೆ ವಿಸ್ತರಿಸಿದೆ.

ಬಂಧನಕ್ಕೆ ಮುನ್ನ ವೈದ್ಯಕೀಯ ತಪಾಸಣೆಗಾಗಿ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಅಲ್ಲಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅದಕ್ಕೂ ಮುನ್ನ ಎದೆನೋವು, ಅಸೌಖ್ಯದಿಂದ ಬಳಲುತ್ತಿದ್ದ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇದನ್ನೂ ಓದಿ: Opposition Party Meet: ಪ್ರತಿಪಕ್ಷಗಳ ಮುಂದಿನ ಸಮಾವೇಶ ಬೆಂಗಳೂರಿನಲ್ಲಿ; ಶರದ್ ಪವಾರ್ ಘೋಷಣೆ

ರಾಜ್ಯ ಸಾರಿಗೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದಂತೆ ಬಾಲಾಜಿಯನ್ನು ಬಂಧಿಸಿದ ಸಂಸ್ಥೆ, ಮದ್ರಾಸ್ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಕೂಡ ಬಾಲಾಜಿ ಅವರನ್ನು ಸ್ಥಳಾಂತರಿಸಲು ಅನುಮತಿ ನೀಡಿತ್ತು.

ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಯ ನಡುವೆ ಹಲವಾರು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದು ಆಗಾಗ್ಗೆ ಜಗಳ ನಡೆಯುತ್ತಲೇ ಇದೆ. ರಾಜ್ಯಪಾಲ ರವಿ ಅವರ ಅಸಾಂವಿಧಾನಿಕ ನಡವಳಿಕೆ ಮತ್ತು ಅಸೆಂಬ್ಲಿ ಅಂಗೀಕರಿಸಿದ ಗಣನೀಯ ಸಂಖ್ಯೆಯ ಮಸೂದೆಗಳಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಡಿಎಂಕೆ ಕಳೆದ ವರ್ಷ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ