ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ: ಮೂವರು ಸಾವು, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Tamil Nadu Rains: ಕೊಡೈಕೆನಾಲ್‌ನ ಸಿಲ್ವರ್ ಕ್ಯಾಸ್ಕೇಡ್ ಜಲಪಾತ ಭಾರೀ ಮಳೆಯಿಂದಾಗಿ ಧುಮ್ಮಿಕ್ಕುತ್ತಿದೆ. ಜೊತೆಗೆ ಮಳೆಯಿಂದ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬೀಡಲಾಗುತ್ತಿದೆ. ತೂತುಕುಡಿ ಪಟ್ಟಣದಲ್ಲಿ ಜನಜೀವನ ಅವ್ಯವ್ಯಸ್ತವಾಗಿದೆ.

ತಮಿಳುನಾಡಿನಲ್ಲಿ ಮುಂದುವರಿದ ಭಾರಿ ಮಳೆ: ಮೂವರು ಸಾವು, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದಲ್ಲಿ ಸಿಲುಕಿದ್ದ ವೃದ್ಧರೊಬ್ಬರನ್ನು ರಕ್ಷಿಸಲಾಯಿತು
Image Credit source: PTI

Updated on: Dec 19, 2023 | 7:58 AM

ಚೆನ್ನೈ, ಡಿಸೆಂಬರ್ 19: ದಕ್ಷಿಣ ತಮಿಳುನಾಡಿನಲ್ಲಿ ಮಂಗಳವಾರವೂ ಭಾರೀ ಮಳೆ (Tamil Nadu Rain) ಮುಂದುವರಿದಿದೆ. ಮಳೆ ಸಂಬಂಧಿತ ಅವಘಡಗಳಿಂದ ಮೂವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾದ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ ಮತ್ತು ತೆಂಕಶಿಗೆ ಇಂದು ಭಾರತೀಯ ಹವಾಮಾನ ಇಲಾಖೆ (IMD) ಹಳದಿ ಅಲರ್ಟ್ ಘೋಷಿಸಿದೆ. ಉತ್ತರ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ಐಎಂಡಿ ತಿಳಿಸಿದೆ. ದಕ್ಷಿಣ ತಮಿಳುನಾಡಿನಲ್ಲಿ ಸುಮಾರು 39 ಪ್ರದೇಶಗಳು ಭಾರೀ ಮಳೆಗೆ ಸಾಕ್ಷಿಯಾಗಿದೆ.

ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಿಂದಾಗಿ ಭತ್ತದ ಗದ್ದೆಗಳು, ರಸ್ತೆಗಳು ಮತ್ತು ಸೇತುವೆಗಳು ಮುಳುಗಿವೆ ಮತ್ತು ಅನೇಕ ವಸತಿ ಕಾಲೋನಿಗಳು ಜಲಾವೃತಗೊಂಡಿವೆ. ಕೆರೆಗಳ ಕೋಡಿ ಒಡೆದು ನೀರು ಹರಿದಿದೆ. ಪ್ರವಾಹದ ಪರಿಣಾಮ ಹಲವಾರು ಸ್ಥಳಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮಳೆಯಿಂದಾಗಿ ವಿದ್ಯುತ್ ಪೂರೈಕೆಯನ್ನು ಮುಂಚಿತವಾಗಿ ಸ್ಥಗಿತಗೊಳಿಸಲಾಗಿದೆ. ಹಲವಾರು ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸಂಪರ್ಕಕ್ಕೆ ಅಡ್ಡಿಯಾಗಿದೆ. ಸಾರ್ವಜನಿಕ ಸಾರಿಗೆ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಗಂಟೆಗೆ 40-45 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಇದು ಗಂಟೆಗೆ 55 ಕಿಲೋಮೀಟರ್‌ಗಳವರೆಗೆ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ದಕ್ಷಿಣ ತಮಿಳುನಾಡು ಕರಾವಳಿಯ ಮನ್ನಾರ್ ಕೊಲ್ಲಿ, ಕೊಮೊರಿನ್ ಪ್ರದೇಶ, ಲಕ್ಷದ್ವೀಪ ಪ್ರದೇಶ ಮತ್ತು ಪಕ್ಕದ ಆಗ್ನೇಯ ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಅತ್ತ ಕೊಡೈಕೆನಾಲ್‌ನ ಸಿಲ್ವರ್ ಕ್ಯಾಸ್ಕೇಡ್ ಜಲಪಾತ ಭಾರೀ ಮಳೆಯಿಂದಾಗಿ ಧುಮ್ಮಿಕ್ಕುತ್ತಿದೆ. ಜೊತೆಗೆ ಮಳೆಯಿಂದ ಡ್ಯಾಂಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬೀಡಲಾಗುತ್ತಿದೆ. ತೂತುಕುಡಿ ಪಟ್ಟಣದಲ್ಲಿ ಜನಜೀವನ ಅವ್ಯವ್ಯಸ್ತವಾಗಿದೆ. ಮಳೆಯಿಂದಾಗಿ ಜನರು ಪರದಾಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಚೆನ್ನೈನ ರಸ್ತೆಯಲ್ಲಿ 2ರಿಂದ 3ಅಡಿಗಳಷ್ಟು ನೀರು ನಿಂತಿತ್ತು. ವಾಹನ ಸವಾರರು ಪರದಾಡಿದರು. ಕನ್ಯಾಕುಮಾರಿಯಲ್ಲಿ ಪ್ರವಾಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ನೂರಾರು ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿತ್ತು. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.

ಇದನ್ನೂ ಓದಿ: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು: ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ

ಇತ್ತೀಚೆಗಷ್ಟೇ ತಮಿಳುನಾಡಿನ ಜನತೆ ಮಿಚಾಂಗ್ ಚಂಡಮಾರುತಕ್ಕೆ ತತ್ತರಿಸಿ ಹೋಗಿತ್ತು. ಅದರ ಪರಿಣಾಮದಿಂದ ಜನರು ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಮಳೆಯ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಪ್ರಮುಖ ನಗರಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ