Tamil Nadu Rains: ಭಾರೀ ಮಳೆಗೆ ತತ್ತರಿಸಿದ ತಮಿಳುನಾಡು: ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ಭಾರೀ ಮಳೆಯಿಂದಾಗಿ ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನಿಯೋಜಿಸಿದ್ದಾರೆ. ಪ್ರತಿ ಪೀಡಿತ ಜಿಲ್ಲೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಚೆನ್ನೈ, ಡಿಸೆಂಬರ್ 18: ಭಾರೀ ಮಳೆಯಿಂದಾಗಿ (Tamil Nadu Rains) ದಕ್ಷಿಣ ತಮಿಳುನಾಡಿನ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಹ (Flood) ಪರಿಸ್ಥಿತಿ ಉಂಟಾಗಿದೆ. ತಿರುನೆಲ್ವೇಲಿ, ಟುಟಿಕೋರಿನ್, ತೆಂಕಶಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ರೈಲು, ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತೂತುಕುಡಿ ಜಿಲ್ಲೆಯ ತಿರುಚೆಂದೂರಿನಲ್ಲಿ ಭಾನುವಾರ ಮಧ್ಯರಾತ್ರಿ 1:30 ರವರೆಗೆ ಕೇವಲ 15 ಗಂಟೆಗಳ ಅವಧಿಯಲ್ಲಿ 60 ಸೆಂ.ಮೀ ಮಳೆಯಾಗಿದೆ.
ತಿರುನಲ್ವೇಲಿ ಜಿಲ್ಲೆಯ ಪಾಲಯಂಕೊಟ್ಟೈನಲ್ಲಿ 26 ಸೆಂ.ಮೀ, ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ ಮಳೆಯಾಗಿದೆ. ಧಾರಾಕಾರ ಮಳೆಯಿಂದಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಶಾಲೆಗಳು, ಕಾಲೇಜುಗಳು, ಬ್ಯಾಂಕ್‌ಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು ಮುಚ್ಚಿರಲಿವೆ.
ಪಾಪನಾಸಂ, ಪೆರುಂಜನಿ ಮತ್ತು ಪೆಚುಪರೈ ಅಣೆಕಟ್ಟುಗಳಿಂದ ನೀರು ಬಿಡುತ್ತಿರುವುದರಿಂದ ತಿರುನಲ್ವೇಲಿ, ತೂತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳ ಹಲವೆಡೆ ಪ್ರವಾಹ ಉಂಟಾಗಿದೆ. ತಾಮರಪರಣಿ ನದಿ ಉಕ್ಕಿ ಹರಿಯುತ್ತಿದೆ. ಅಣೆಕಟ್ಟುಗಳಲ್ಲಿನ ನೀರಿನ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕೊಮೊರಿನ್ ಪ್ರದೇಶದಲ್ಲಿ ಚಂಡಮಾರುತವು ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಇದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ನಿಯೋಜಿಸಿದ್ದಾರೆ. ಪ್ರತಿ ಪೀಡಿತ ಜಿಲ್ಲೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಸಂಕಷ್ಟದಲ್ಲಿರುವ ಪ್ರದೇಶಗಳಲ್ಲಿ ಪರಿಹಾರ ಕೇಂದ್ರಗಳು ಮತ್ತು ದೋಣಿಗಳನ್ನು ಸಿದ್ಧಪಡಿಸುವಂತೆ ಮತ್ತು ಅಗತ್ಯವಿದ್ದಲ್ಲಿ ಜನರನ್ನು ಬೇಗನೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸ್ಟಾಲಿನ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಭಾರೀ ಮಳೆಗೆ ಮತ್ತೆ ತತ್ತರಿಸಿದ ತಮಿಳುನಾಡು: ಹಲವೆಡೆ ಶಾಲಾ ಕಾಲೇಜುಗಳಿಗೆ ರಜೆ
ತಲಾ 50 ಸದಸ್ಯರನ್ನು ಒಳಗೊಂಡ ಎರಡು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ತಿರುನಲ್ವೇಲಿ ಮತ್ತು ಟುಟಿಕೋರಿನ್ ಜಿಲ್ಲೆಗಳಿಗೆ ಧಾವಿಸಿದ್ದು, ಮೂರು ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್ಡಿಆರ್ಎಫ್) ಕನ್ಯಾಕುಮಾರಿ ಜಿಲ್ಲೆಯಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗಳಿಗೆ ನೆರವಾಗಲು ಮಳೆ, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 4,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬಲವಾಗಿ ಸೂಚಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ