
ಚೆನ್ನೈ, ನವೆಂಬರ್ 3: ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (DMK) ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೂ (Tamil Nadu Assembly Elections) ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್ ಭಾರತಿ ಅವರು ಪಕ್ಷದ ಸಂಸದ ಹಾಗೂ ಹಿರಿಯ ವಕೀಲ ಎನ್.ಆರ್ ಎಲಾಂಗೊ ಅವರ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
2ನೇ ಹಂತದ SIR ಕುರಿತು ಚುನಾವಣಾ ಆಯೋಗ ಘೋಷಿಸಿದ ಬಳಿಕ ಡಿಎಂಕೆ ಮುಖ್ಯಸ್ಥ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ತಮಿಳುನಾಡು ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಲು ಈ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಇಂದು ಅರ್ಜಿ ಸಲ್ಲಿಸಲಾಗಿದೆ.
ಇದನ್ನೂ ಓದಿ: SIR in India: ಭಾರತದಲ್ಲಿ ಈ ಹಿಂದೆ ಮತದಾರರ ಪರಿಷ್ಕೃತ ಪಟ್ಟಿ ಯಾವಾಗ ನಡೆದಿತ್ತು? ಇದರ ಅಗತ್ಯವೇನು?
“ತಮಿಳುನಾಡಿನ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಮತ್ತು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಉದ್ದೇಶದಿಂದ ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿರುವ ಎಸ್‌ಐಆರ್ ವಿರುದ್ಧ ಒಗ್ಗೂಡಿ ಧ್ವನಿ ಎತ್ತುವುದು ಎಲ್ಲಾ ಪಕ್ಷಗಳ ಕರ್ತವ್ಯ” ಎಂದು ಸಿಎಂ ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಗೊಂದಲಗಳು ಮತ್ತು ಅನುಮಾನಗಳಿಗೆ ಸಂಬಂಧಿಸಿದಂತೆ 2026ರ ವಿಧಾನಸಭಾ ಚುನಾವಣೆಯ ನಂತರ ನಿಧಾನವಾಗಿ ಮತ್ತು ಯಾವುದೇ ಸಮಸ್ಯೆಗಳಿಲ್ಲದೆ ಎಸ್‌ಐಆರ್ ನಡೆಸಬೇಕು ಎಂಬ ನಮ್ಮ ಬೇಡಿಕೆಯನ್ನು ಚುನಾವಣಾ ಆಯೋಗ ಅಂಗೀಕರಿಸದ ಕಾರಣದಿಂದ ಸರ್ವಪಕ್ಷ ಸಭೆಯಲ್ಲಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ನಾವು ನಿರ್ಣಯವನ್ನು ಅಂಗೀಕರಿಸಿದ್ದೇವೆ” ಎಂದು ನಿನ್ನೆ ನಡೆದ ಸರ್ವ ಪಕ್ಷ ಸಭೆಯ ಬಳಿಕ ಸಿಎಂ ಸ್ಟಾಲಿನ್ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ಮತದಾರರ ಪಟ್ಟಿಗೆ ಆಧಾರ್ ದಾಖಲೆ ನೀಡಬಹುದಾ? ಚುನಾವಣಾ ಆಯೋಗದ ಸ್ಪಷ್ಟನೆ ಇಲ್ಲಿದೆ
ತಮಿಳುನಾಡು ಮತ್ತು ಇತರ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಚುನಾವಣಾ ಆಯೋಗವು SIR ಘೋಷಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಿದ್ಧತೆಗಾಗಿ ತಮಿಳುನಾಡು ಶೀಘ್ರದಲ್ಲೇ ತನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಾಕ್ಷಿಯಾಗಲಿದೆ ಎಂದು ಚುನಾವಣಾ ಆಯೋಗ (EC) ಕಳೆದ ತಿಂಗಳು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ