ತಮಿಳುನಾಡಿನಲ್ಲಿ 2 ಬಸ್ಸುಗಳು ಮುಖಾಮುಖಿ ಡಿಕ್ಕಿ; 6 ಸಾವು, 28 ಮಂದಿಗೆ ಗಾಯ

Bus accident at Tenkasi district, Tamil Nadu: ಎರಡು ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ತೇಂಕಾಸಿ ಜಿಲ್ಲೆಯಲ್ಲಿ ಸಂಭವಿಸಿದ ಈ ಅಪಘಾತದಲ್ಲಿ 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತೇಂಕಾಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲವರ ಸ್ಥಿತಿ ಗಂಭೀರವಾದ್ದರಿಂದ ಸಾವಿನ ಸಂಖ್ಯೆ ಹೆಚ್ಚಬಹುದು.

ತಮಿಳುನಾಡಿನಲ್ಲಿ 2 ಬಸ್ಸುಗಳು ಮುಖಾಮುಖಿ ಡಿಕ್ಕಿ; 6 ಸಾವು, 28 ಮಂದಿಗೆ ಗಾಯ
ಬಸ್ ಅಪಘಾತ

Updated on: Nov 24, 2025 | 1:04 PM

ಚೆನ್ನೈ, ನವೆಂಬರ್ 24: ತಮಿಳುನಾಡಿನ ತೇಂಕಾಸಿ ಜಿಲ್ಲೆಯಲ್ಲಿ (Tenkasi) ಎರಡು ಖಾಸಗಿ ಬಸ್ಸುಗಳು ಮುಖಾಮುಖಿಯಾಗಿ ಢಿಕ್ಕಿಯಾಗಿ ಭಾರೀ ಸಾವು ನೋವು ಸಂಭವಿಸಿದೆ. ಈ ಭೀಕರ ಅಪಘಾತ (Tenkasi bus accident) ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ, 28 ಮಂದಿಗೆ ಗಾಯಗಳಾಗಿವೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮುಖಾಮುಖಿ ಡಿಕ್ಕಿ ಹೊಡೆದ ಎರಡು ಬಸ್ಸುಗಳಲ್ಲಿ ಒಂದು ಬಸ್ಸು ಮದುರೈನಿಂದ ಸೆಂಕೊಟ್ಟೈಗೆ ತೆರಳುತ್ತಿತ್ತು. ಮತ್ತೊಂದು ಬಸ್ಸು ತೇಂಕಾಸಿಯಿಂದ ಕೋವಿಲ್​ಪಟ್ಟಿಗೆ ಹೋಗುತ್ತಿತ್ತು. ತೇಂಕಾಸಿ ಮದುರೈ ರಸ್ತೆಯಲ್ಲಿರುವ ಅಚ್ಚಂಪಟ್ಟಿ ಸಮೀಪದ ಇಡೈಯಕ್ಕಲ್​ನ ದುರೈಸಾಮಿಪುರಂ ಎಂಬಲ್ಲಿ ಎರಡೂ ಬಸ್ಸುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ.

ಇದನ್ನೂ ಓದಿ: ಜಿ20 ಆತಿಥ್ಯ ಇಷ್ಟು ಕಷ್ಟ ಅಂತ ಗೊತ್ತಿದ್ದರೆ ಓಡಿ ಹೋಗುತ್ತಿದ್ದೆ: ಪ್ರಧಾನಿ ಮೋದಿಗೆ ತಮಾಷೆ ಮಾಡಿದ ಸೌತ್ ಆಫ್ರಿಕಾ ಅಧ್ಯಕ್ಷ

ಎರಡು ಬಸ್ಸುಗಳಲ್ಲಿ ಎಷ್ಟು ಪ್ರಯಾಣಿಕರು ಇದ್ದರು ಎನ್ನುವ ಮಾಹಿತಿ ತಿಳಿದುಬಂದಿಲ್ಲ. ಆದರೆ, ಪ್ರಾಥಮಿಕ ಮಾಹಿತಿ ಪ್ರಕಾರ 6 ಮಂದಿ ಸಾವನ್ನಪ್ಪಿದ್ದಾರೆ. 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅನೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ತೇಂಕಾಸಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತ ನಡೆದ ಕೂಡಲೇ ಸ್ಥಳೀಯ ಗ್ರಾಮಸ್ಥರು ನೆರವಿಗೆ ಧಾವಿಸಿದ್ದಾರೆ. ಆಂಬುಲೆನ್ಸ್​ಗಳು ಕೂಡ ಸಮಯಕ್ಕೆ ಸರಿಯಾಗಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿವೆ. ಅನೇಕ ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಇದನ್ನೂ ಓದಿ: ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ

ಕಳೆದ ಮೂರ್ನಾಲ್ಕು ದಿನಗಳಿಂದ ತೇಂಕಾಸಿ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಪ್ರವಾಹದಿಂದ ಭರ್ತಿಯಾಗಿವೆ. ಅನೇಕ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟವಾಯಿತು ಎಂದೆನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ