ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಬುಧವಾರ ತನ್ನ ಸಹಪಾಠಿಗಳ ಮುಂದೆ ಸರ್ಕಾರಿ ಶಾಲೆಯ ತರಗತಿಯೊಳಗೆ ಶಿಕ್ಷಕನೊಬ್ಬ ಬಾಲಕನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿದಂಬರಂ ಸಮೀಪದ ಸರ್ಕಾರಿ ನಂದನಾರ್ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಈ ಘಟನೆಯನ್ನು 12 ನೇ ತರಗತಿಯ ಸಹಪಾಠಿಗಳು ಚಿತ್ರೀಕರಿಸಿದ್ದಾರೆ. ಹಿಂದಿನ ಕ್ಲಾಸ್ ತಪ್ಪಿಸಿಕೊಂಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಕೋಪಗೊಂಡು ಶಿಕ್ಷಕರು ಥಳಿಸಿದ್ದಾರೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಯನ್ನು ಮಂಡಿಯೂರಿ ಕೂರುವಂತೆ ಹೇಳಲಾಯಿತು ನಂತರ ಶಿಕ್ಷಕ ಆ ವಿದ್ಯಾರ್ಥಿಯ ಕೂದಲನ್ನು ಹಿಡಿದೆಳೆದು ನಿರಂತರವಾಗಿ ಬೆತ್ತದಿಂದ ಹೊಡೆದಿದ್ದಾರೆ. ತಪ್ಪನ್ನು ಪುನರಾವರ್ತಿಸುವುದಿಲ್ಲ ಎಂದು ವಿದ್ಯಾರ್ಥಿಯ ಮನವಿ ಮಾಡುತ್ತಿದ್ದರೂ ಶಿಕ್ಷಕ ಹೊಡೆಯುವುದನ್ನು ನಿಲ್ಲಿಸಿಲ್ಲ.
ಘಟನೆಯ ಬಗ್ಗೆ ತಿಳಿದ ಕಡಲೂರು ಜಿಲ್ಲಾಧಿಕಾರಿ ಕೆ ಬಾಲಸುಬ್ರಹ್ಮಣ್ಯಂ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದು, ವಿಚಾರಣೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
“ನಾವು ವರದಿಯನ್ನು ಸ್ವೀಕರಿಸಿದ ತಕ್ಷಣ, ನಾನು ಇಲಾಖೆಗೆ ವಿಚಾರಣೆ ನಡೆಸಲು ತಿಳಿಸಿದೆ. ವಿದ್ಯಾರ್ಥಿಯು ಮೊದಲ ತರಗತಿಗೆ ಹಾಜರಿದ್ದು ಭೌತಶಾಸ್ತ್ರ ಎರಡನೇ ಪಿರಿಯಡ್ ತಪ್ಪಿಸಿಕೊಂಡಿದ್ದ ಎಂದು ಬಾಲಸುಬ್ರಮಣ್ಯಂ ಹೇಳಿದ್ದಾರೆ. 6-12ನೇ ತರಗತಿಯ ಸುಮಾರು 500 ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ.
ಇದನ್ನೂ ಓದಿ: ‘ಯಾರಿಂದ ತೊಂದರೆ ಆಗಿದೆ ಅನ್ನೋದು ಗೊತ್ತು’; ‘ಕೋಟಿಗೊಬ್ಬ 3’ ರದ್ದಾಗಿದ್ದಕ್ಕೆ ಸುದೀಪ್ ವಿಡಿಯೋ ಸಂದೇಶ