ನವದೆಹಲಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಇಲಾಖೆ ಟಿಕೆಟ್ ಬುಕಿಂಗ್ ಮಾಡಲು ಹೊಸ ಆ್ಯಪ್ ಒಂದನ್ನು ಪರಿಚಯಿಸಿದೆ. ಐಆರ್‌ಸಿಟಿಸಿ (IRCTC) ಟಿಕೆಟ್‌ಗಳನ್ನು ಬುಕಿಂಗ್ ಮಾಡಲು ತನ್ನ ಹೊಸ ಅಪ್ಲಿಕೇಶನ್ ‘ಕನ್‌ಫರ್ನ್ ಟಿಕೆಟ್’ (Confirm Ticket) ಆ್ಯಪ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಮೊಬೈಲ್ ಅಪ್ಲಿಕೇಶನ್ ಅನ್ನು ವಿಶೇಷವಾಗಿ ತತ್ಕಾಲ್ ಬುಕಿಂಗ್‌ಗಾಗಿ ಪ್ರಾರಂಭಿಸಲಾಗಿದೆ. ತತ್ಕಾಲ್ನಲ್ಲಿ (Tatkal) ಟಿಕೆಟ್ ಬುಕ್ ಮಾಡುವವರು ಈ ಆ್ಯಪ್ ಬಳಸಿ ತಮ್ಮ ಟಿಕೆಟ್ ಕನ್ಫರ್ಮ್ ಆಗಿದೆಯೇ? ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಅಮರ್ ಉಜಾಲಾ ವರದಿಯ ಪ್ರಕಾರ, ಪ್ರಯಾಣಿಕರು ತಮ್ಮ ಮನೆಯಲ್ಲೇ ಕುಳಿತು ತುರ್ತು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಕನ್ಫರ್ಮ್ ಟಿಕೆಟ್ ಅಪ್ಲಿಕೇಶನ್ ಪ್ರಯಾಣಿಕರಿಗೆ ವಿವಿಧ ರೈಲುಗಳ ಸೀಟ್ ಲಭ್ಯತೆಯನ್ನು ವೀಕ್ಷಿಸಲು ಸಹಾಯ ಮಾಡುತ್ತದೆ. ಅಲ್ಲದೆ ನಿರ್ದಿಷ್ಟ ಮಾರ್ಗದಲ್ಲಿ ಲಭ್ಯವಿರುವ ಎಲ್ಲಾ ತತ್ಕಾಲ್ ಟಿಕೆಟ್‌ಗಳನ್ನು ಸಹ ಈ ಆ್ಯಪ್ ತೋರಿಸುತ್ತದೆ. ಈ ಅಪ್ಲಿಕೇಶನ್‌ನಲ್ಲಿ ವಿವರಗಳನ್ನು ಪಡೆಯಲು ಪ್ರಯಾಣಿಕರು ಇನ್ನು ಮುಂದೆ ರೈಲು ಸಂಖ್ಯೆಗಳನ್ನು ನಮೂದಿಸುವ ಅಗತ್ಯವಿಲ್ಲ. ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು.
ಕನ್ಫರ್ಮ್ ಟಿಕೆಟ್ ಆ್ಯಪ್ ಮೂಲಕ ಉಚಿತವಾಗಿ ಟಿಕೆಟ್ ಕ್ಯಾನ್ಸಲ್ ಕೂಡ ಮಾಡಬಹುದು. ಅಷ್ಟೇ ಅಲ್ಲದೆ, ಕನ್ಫರ್ಮ್ ಟಿಕೆಟ್ ಆ್ಯಪ್ಗೆ ಲಾಗಿನ್ ಮಾಡುವಾಗ ವೈಯಕ್ತಿಕ ಮಾಹಿತಿಯನ್ನು ಸೇವ್ ಮಾಡಲು ಈ ಆ್ಯಪ್ ಅನುಮತಿ ನೀಡುತ್ತದೆ. ಪ್ರಯಾಣಿಕರು ಆ್ಯಪ್ನಲ್ಲಿ ತನ್ನ ಪರ್ಸನಲ್ ಮಾಹಿತಿಯನ್ನು ಸೇವ್ ಮಾಡುವುದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು. ಇದರಿಂದ ಪ್ರತಿ ಬಾರಿಯೂ ಮಾಹಿತಿಯನ್ನು ಮರು-ನಮೂದಿಸುವ ಅಗತ್ಯ ಇರುವುದಿಲ್ಲ.
ಆದರೆ, ತತ್ಕಾಲ್ ಬುಕಿಂಗ್ ರೈಲಿನ ಸೀಟುಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ. ಪಾವತಿ ಮಾಡಿದ ನಂತರ ಟಿಕೆಟ್ ಲಭ್ಯವಾದರೆ ಟಿಕೆಟ್ ಕನ್ಫರ್ಮ್ ಆಗುತ್ತದೆ.
IRCTC ವೆಬ್‌ಸೈಟ್‌ನಲ್ಲಿ ಲಭ್ಯವಿದೆ:
ಕನ್ಫರ್ಮ್ ಟಿಕೆಟ್ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಮತ್ತು IRCTC ನೆಕ್ಸ್ಟ್ ಜನರೇಷನ್ ಆಪ್ ಮೂಲಕ ಡೌನ್‌ಲೋಡ್ ಮಾಡಬಹುದು. IRCTC ವೆಬ್‌ಸೈಟ್ www.irctc.co.in ನಲ್ಲಿಯೂ ವಿವರಗಳನ್ನು ನಮೂದಿಸಲಾಗಿದೆ. ಆದರೆ, ಕನ್ಫರ್ಮ್ ಟಿಕೆಟ್ ಅಪ್ಲಿಕೇಶನ್ ಮೂಲಕ ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ.
ಇದನ್ನೂ ಓದಿ: ಭಾರತೀಯ ರೈಲ್ವೆಯಿಂದ ಶುಕ್ರವಾರ 300 ಕ್ಕೂ ಹೆಚ್ಚು ರೈಲುಗಳು ರದ್ದು; ವಿವರಗಳು ಇಲ್ಲಿವೆ
Published On - 6:10 pm, Mon, 21 February 22