Corbevax: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಾರ್ಬ್ವ್ಯಾಕ್ಸ್ ಲಸಿಕೆ ನೀಡಲು ಅನುಮತಿ
Covid Vaccine for Children: ಕಾರ್ಬ್ವ್ಯಾಕ್ಸ್ ಭಾರತದ ಮೂರನೇ ಸ್ವದೇಶಿ ಕೋವಿಡ್-19 ಲಸಿಕೆಯಾಗಿದ್ದು, ಎರಡು ಡೋಸ್‌ಗಳಲ್ಲಿ ನೀಡಲಾಗುವುದು. ಇದು ಭಾರತದಲ್ಲಿ 12 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಬಳಸಲು ಅನುಮೋದಿಸಲಾದ ಮೂರನೇ ಲಸಿಕೆಯಾಗಿದೆ.
ನವದೆಹಲಿ: 12ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹೈದರಾಬಾದ್ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿ ಬಯೋಲಾಜಿಕಲ್ ಇ (Biological E) ಸಿದ್ಧಪಡಿಸಿರುವ ಕೊರೊನಾವೈರಸ್ ಲಸಿಕೆ ‘ಕಾರ್ಬ್ವ್ಯಾಕ್ಸ್’ (Corbevax) ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಇಂದು ಅನುಮತಿ ನೀಡಿದೆ. ಕಾರ್ಬ್ವ್ಯಾಕ್ಸ್ ಭಾರತದ ಮೂರನೇ ಸ್ವದೇಶಿ ಕೋವಿಡ್-19 ಲಸಿಕೆಯಾಗಿದ್ದು, ಎರಡು ಡೋಸ್‌ಗಳಲ್ಲಿ ನೀಡಲಾಗುವುದು. ಇದು ಭಾರತದಲ್ಲಿ 12 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳಲ್ಲಿ ಬಳಸಲು ಅನುಮೋದಿಸಲಾದ ಮೂರನೇ ಲಸಿಕೆಯಾಗಿದೆ.
ಕಾರ್ಬ್ವ್ಯಾಕ್ಸ್ ಲಸಿಕೆಯು 12 ರಿಂದ 18 ವಯಸ್ಸಿನವರಿಗೆ DCGI ಯ ವಿಷಯ ತಜ್ಞರ ಸಮಿತಿಯಿಂದ (SEC) ತುರ್ತು ಬಳಕೆಯ ಅಧಿಕಾರವನ್ನು (EUA) ಪಡೆದುಕೊಂಡಿದೆ ಎಂದು ANI ತಿಳಿಸಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಾರ್ಬ್ವ್ಯಾಕ್ಸ್ನ ವೈದ್ಯಕೀಯ ಅಧ್ಯಯನದ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿ ಡೇಟಾವನ್ನು ಪರಿಶೀಲಿಸಿದ ಬಳಿಕ ತುರ್ತು ಬಳಕೆಗೆ ಶಿಫಾರಸು ಮಾಡಲಾಗಿದೆ.
ತೆರಿಗೆಯನ್ನು ಹೊರತುಪಡಿಸಿ ಈ ಕಾರ್ಬ್ವ್ಯಾಕ್ಸ್ ಕೊರೊನಾ ಲಸಿಕೆಯ ನಿರೀಕ್ಷಿತ ವೆಚ್ಚ 145 ರೂ. ಇರಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಲಸಿಕೆಯ ಕುರಿತು ಮಾತನಾಡಿದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಎಜಿಐ) ಮುಖ್ಯಸ್ಥ ಡಾ. ಎನ್. ಕೆ. ಅರೋರಾ, ಕಾರ್ಬ್ವ್ಯಾಕ್ಸ್ ಲಸಿಕೆ ಸುರಕ್ಷಿತವಾಗಿದೆ ಮತ್ತು ಇತರ ಕೆಲವು ವೆಕ್ಟರ್ ಲಸಿಕೆಗಳಿಗೆ ಹೋಲಿಸಿದರೆ ಉತ್ತಮ ಇಮ್ಯುನೊಜೆನಿಸಿಟಿ ಹಾಗೂ ಹೆಚ್ಚಿನ ಪ್ರತಿಕಾಯ ಮಟ್ಟವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಈ ಕಾರ್ಬ್ವ್ಯಾಕ್ಸ್ ಲಸಿಕೆ ಬೇರೆಲ್ಲ ಕೊವಿಡ್ ಲಸಿಕೆಗಳಿಗಿಂತ ಬಹಳ ಕಡಿಮೆ ದರದಲ್ಲಿ ಲಭ್ಯವಾಗುವುದರಿಂದ ಹೆಚ್ಚು ನಿರೀಕ್ಷೆ ಮೂಡಿಸಿದೆ. ಹೈದರಾಬಾದ್ನ ಬಯಾಲಾಜಿಕಲ್ ಇ ಕಂಪನಿಯ ಕಾರ್ಬ್ವ್ಯಾಕ್ಸ್ ಈಗಾಗಲೇ ಭಾರತದಲ್ಲಿ ಲಭ್ಯವಿರುವ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್-ವಿ ಲಸಿಕೆಗಳಿಗಿಂತಲೂ ಅತ್ಯಂತ ಕಡಿಮೆ ದರದ ಕೊವಿಡ್ ಲಸಿಕೆಯಾಗಿದೆ. ಕಾರ್ಬ್ವ್ಯಾಕ್ಸ್ ಲಸಿಕೆಯ 1 ಡೋಸ್ಗೆ ತೆರಿಗೆಗಳನ್ನು ಹೊರತುಪಡಿಸಿ 145 ರೂ. ತಗುಲುತ್ತದೆ. ಬಯಾಲಾಜಿಕಲ್ ಇ ಕಂಪನಿ ಈಗಾಗಲೇ 250 ಮಿಲಿಯನ್ ಕಾರ್ಬ್ವ್ಯಾಕ್ಸ್ ಲಸಿಕೆಗಳನ್ನು ಉತ್ಪಾದನೆ ಮಾಡಿದೆ. ಉಳಿದ ಡೋಸ್‌ಗಳನ್ನು ಕೆಲವೇ ವಾರಗಳಲ್ಲಿ ಉತ್ಪಾದಿಸುವ ಗುರಿಯನ್ನು ಹೊಂದಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈಗಾಗಲೇ ಕಾರ್ಬ್ವ್ಯಾಕ್ಸ್ ಲಸಿಕೆಯನ್ನು ಅನುಮೋದಿಸಿದೆ. ಕಳೆದ ವರ್ಷ, ಈ ಕೊವಿಡ್ ಲಸಿಕೆಯ ಡೋಸ್‌ಗಳನ್ನು ಖರೀದಿಸಲು ಹೈದರಾಬಾದ್ ಮೂಲದ ಕಂಪನಿಗೆ ಕೇಂದ್ರ ಸರ್ಕಾರವು 1,500 ಕೋಟಿ ರೂ. ಮುಂಗಡ ಹಣ ಪಾವತಿ ಮಾಡಿದೆ. ಕಾರ್ಬ್ವ್ಯಾಕ್ಸ್ ಲಸಿಕೆಯನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್‌ಗಳೊಂದಿಗೆ ಇಂಟ್ರಾಮಸ್ಕುಲರ್ ರೂಟ್ ಮೂಲಕ ನೀಡಲಾಗುತ್ತದೆ.
ಒಂದು ಡೋಸ್ ಲಸಿಕೆಗೆ ಕೇವಲ 200 ರೂಪಾಯಿ; ಭರವಸೆ ಮೂಡಿಸಿದ ಕಾರ್ಬ್ವ್ಯಾಕ್ಸ್ ಲಸಿಕೆಯತ್ತ ಸರ್ಕಾರದ ಗಮನ