ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್ಗೆ ಭೇಟಿ ನೀಡಿದ್ದಾಗ ಅಲ್ಲಿ ಉಂಟಾಗಿರುವ ಭದ್ರತಾ ಲೋಪ (PM Security Breach in Punjab) ನಿಜಕ್ಕೂ ಕಳವಳಕಾರಿ ಎಂದು ಆಂಧ್ರಪ್ರದೇಶದ ತೆಲುಗು ದೇಸಂ ಪಾರ್ಟಿ (ಟಿಡಿಪಿ) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು(Chandrababu Naidu) ಹೇಳಿದ್ದಾರೆ. ಪ್ರಧಾನಿಯವರ ಭದ್ರತೆ ಎಂಬುದು ರಾಷ್ಟ್ರದ ಕಾಳಜಿ. ಹೀಗಾಗಿ ಪಂಜಾಬ್ನಲ್ಲಿ ನಡೆದ ಘಟನೆ ಒಪ್ಪತಕ್ಕಂಥದ್ದಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಬುಧವಾರ (ಜ.5) ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನ ಫಿರೋಜ್ಪುರಕ್ಕೆ ಭೇಟಿ ಕೊಡುವವರು ಇದ್ದರು. ಆದರೆ ಭಟಿಂಡಾ ಏರ್ಪೋರ್ಟ್ನಿಂದ ಫಿರೋಜ್ಪುರಕ್ಕೆ ಹೋಗುವ ಮಾರ್ಗದಲ್ಲಿ ರೈತರು ಪ್ರತಿಭಟನೆ ನಡೆಸಿದ ಪರಿಣಾಮ ಅವರು ಹುಸ್ಸೇನಿವಾಲಾ ಸಮೀಪ ಫ್ಲೈಓವರ್ ಮೇಲೆ 15-20 ನಿಮಿಷ ಕಾದು ನಂತರ ವಾಪಸ್ ಬರುವಂತಾಯ್ತು. ಇದು ಭಾರತದ ಇತಿಹಾಸದಲ್ಲೇ ದೊಡ್ಡ ಮಟ್ಟದ ಭದ್ರತಾ ಲೋಪ ಎನ್ನಲಾಗಿದ್ದು, ಪ್ರತಿಪಕ್ಷಗಳ ನಾಯಕರೂ ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿ ನಾಯಕರಂತೂ, ಕಾಂಗ್ರೆಸ್ ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದೆ ಎಂದೇ ಆರೋಪಿಸಿದೆ.
The recent security breach during @narendramodi Ji’s visit to Punjab is deeply concerning. Prime Minister’s security is nation’s concern.
— N Chandrababu Naidu (@ncbn) January 8, 2022
ಪ್ರಧಾನಿ ಮೋದಿಯವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಪ್ರತಿಭಟನೆ ನಡೆಸಿ, ರಸ್ತೆ ಬ್ಲಾಕ್ ಮಾಡಿದ್ದರ ಜವಾಬ್ದಾರಿಯನ್ನು ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ರೈತ ಸಂಘಟನೆ ಹೊತ್ತಿದೆ. ಪ್ರಧಾನಿ ಮೋದಿ ರಸ್ತೆ ಮೂಲಕ ಬರುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ನಂತರ ಪೊಲೀಸರು ಹೇಳಿದರೂ ನಾವು ಅವರು ಸುಳ್ಳು ಹೇಳುತ್ತಾರೆ ಎಂದೇ ಭಾವಿಸಿದೆವು. ನಮಗೆ ಮೋದಿಯವರ ಕಾರನ್ನು ತಡೆಯುವ ಉದ್ದೇಶವಾಗಲಿ, ಯೋಜನೆಯಾಗಲೀ ಇರಲಿಲ್ಲ. ಫಿರೋಜ್ಪುರದಲ್ಲಿ ಅವರು ರ್ಯಾಲಿ ನಡೆಸುವ ಜಾಗದಿಂದ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಅದರಲ್ಲೂ ಫಿರೋಜ್ಪುರದಲ್ಲಿ ಹೆಲಿಪ್ಯಾಡ್ ನೋಡಿ, ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕವೇ ಬರಲಿದ್ದಾರೆ ಎಂದುಕೊಂಡಿದ್ದೆವು ಎಂದು ಬಿಕೆಯು ಮುಖ್ಯಸ್ಥ ಸುರ್ಜಿತ್ ಸಿಂಗ್ ಪೂಲ್ ತಿಳಿಸಿದ್ದಾರೆ.
ಇನ್ನು ಪ್ರಧಾನಿ ಭದ್ರತೆ ಲೋಪ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ಗೆ ಭೇಟಿ ನೀಡಿದಾಗಿನ ಪ್ರಯಾಣ ದಾಖಲೆಯನ್ನು ಸಂರಕ್ಷಿಸಿಡುವಂತೆ ಸುಪ್ರೀಂಕೋರ್ಟ್, ಪಂಜಾಬ್-ಹರ್ಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ಗೆ ಸೂಚಿಸಿದೆ. ಜನವರಿ 10ಕ್ಕೆ ಮುಂದಿನ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್, ಅಲ್ಲಿಯವರೆಗೂ ಕೇಂದ್ರ ಗೃಹ ಇಲಾಖೆ ಹಾಗೂ ಪಂಜಾಬ್ ಸರ್ಕಾರ ಪ್ರಕರಣದ ತನಿಖೆ ನಡೆಸುವದಕ್ಕೆ ಸ್ಟೇ ನೀಡಿದೆ. ಸದ್ಯ ಭದ್ರತಾ ಲೋಪ ತನಿಖೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (NIA)ದ ಏಳು ಸದಸ್ಯರನ್ನೊಳಗೊಂಡ ತಂಡವನ್ನು ರಚಿಸಿದ್ದು, ಪಂಜಾಬ್ ಸರ್ಕಾರ ಮೂವರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿದೆ.
ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ; ಫಿರೋಜ್ಪುರ ಎಸ್ಎಸ್ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್ಎಸ್ಪಿ
Published On - 3:18 pm, Sat, 8 January 22