Assembly Election 2022: 5 ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಇಂದು; ಮಧ್ಯಾಹ್ನ 3.30ಕ್ಕೆ ವೇಳಾಪಟ್ಟಿ ಪ್ರಕಟ
ಭಾರತದ ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಇಂದು ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು ಗೋವಾ, ಮಣಿಪುರ, ಉತ್ತರಾಖಂಡ್, ಉತ್ತರಪ್ರದೇಶ, ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಿಸಲಿದ್ದಾರೆ ಎಂದು ಎಎನ್ಐ ತಿಳಿಸಿದೆ.
ಭಾರತದ ಚುನಾವಣಾ ಆಯೋಗ (ECI-Election Commission Of India)ದ ಉನ್ನತ ಅಧಿಕಾರಿಗಳು ಇಂದು ಮಧ್ಯಾಹ್ನ 3.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, 5 ರಾಜ್ಯಗಳಾದ ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆ (Assembly Elections 2022) ದಿನಾಂಕವನ್ನು ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಶೀಘ್ರದಲ್ಲೇ ನಡೆಯಲಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್ನಲ್ಲಿ 2022ರ ಕೊನೆಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ಚುನಾವಣಾ ಆಯೋಗ 5 ರಾಜ್ಯಗಳ ಚುನಾವಣೆ ದಿನಾಂಕವನ್ನು ಮಾತ್ರ ಘೋಷಿಸಲಿದೆ ಎಂದು ಎಎನ್ಐ ತಿಳಿಸಿದೆ.
ದೇಶದಲ್ಲಿ ಕೊವಿಡ್ 19 ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅದರ ಮಧ್ಯೆ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಹೀಗಾಗಿ ಯಾವ್ಯಾವ ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಚುನಾವಣಾ ಆಯೋಗದ ಉನ್ನತ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಈ ಸಭೆಯಲ್ಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಮತ್ತು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವಾ ಕೂಡ ಪಾಲ್ಗೊಂಡಿದ್ದರು. ಡಿ.30ರಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ನಿಗದಿತ ಸಮಯದಲ್ಲೇ ಚುನಾವಣೆ ನಡೆಸಲು ಎಲ್ಲ ರಾಜಕೀಯ ಪಕ್ಷಗಳೂ ಒಲವು ತೋರಿಸಿವೆ. ಹೀಗಾಗಿ ವಿಧಾನಸಭೆ ಚುನಾವಣೆ ನಡೆಯಲಿರುವ ಉತ್ತರಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ, ಪಂಜಾಬ್ಗಳಲ್ಲಿ ಕೊರೊನಾ ಲಸಿಕೆ ನೀಡಿಕೆ ವೇಗ ಹೆಚ್ಚಿಸುವಂತೆ ನಾವು ಹೇಳಿದ್ದೇವೆ. ಚುನಾವಣೆಯ ಹೊತ್ತಿಗೆ ಮೊದಲ ಡೋಸ್ ನೀಡಕೆಯಾದರೂ ಶೇ.100ರಷ್ಟು ಮುಕ್ತಾಯಗೊಂಡಿರಬೇಕು ಎಂಬುದು ನಮ್ಮ ಬೇಡಿಕೆ ಎಂದು ತಿಳಿಸಿದ್ದರು.
ಇದೀಗ ನಡೆಯಲಿರುವ ಐದೂ ರಾಜ್ಯಗಳ ಚುನಾವಣೆಗಳು ತುಂಬ ನಿರ್ಣಾಯಕವೆನಿಸಿದೆ. ಅದರಲ್ಲೂ ಉತ್ತರಪ್ರದೇಶ ಮತ್ತು ಪಂಜಾಬ್ ತುಂಬ ಕುತೂಹಲ ಮೂಡಿಸಿರುವ ರಾಜ್ಯಗಳು. ಈ ಐದು ರಾಜ್ಯಗಳಲ್ಲಿ ಪಂಜಾಬ್ ಹೊರತು ಪಡಿಸಿ ಉಳಿದೆಲ್ಲ ರಾಜ್ಯಗಳಲ್ಲೂ ಸದ್ಯ ಬಿಜೆಪಿ ಸರ್ಕಾರವೇ ಇದೆ. ಹೀಗಾಗಿ ಬಿಜೆಪಿಗೆ ಆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ ಜತೆ, ಪಂಜಾಬ್ನಲ್ಲಿ ಸರ್ಕಾರ ರಚಿಸುವ ಒತ್ತಡವಿದೆ. ಕಾಂಗ್ರೆಸ್ ಕೂಡ ತನ್ನ ಪ್ರಯತ್ನ ಮಾಡುತ್ತಿದೆ. ಅದರಲ್ಲೂ 403 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ದೊಡ್ಡ ರಾಜ್ಯ ಉತ್ತರ ಪ್ರದೇಶ ಇನ್ನಷ್ಟು ಕೇಂದ್ರ ಬಿಂದುವಾಗಿದೆ. ಪ್ರಧಾನಿ ಮೋದಿ ಈ ಬಾರಿ ಇಲ್ಲಿ ಭರ್ಜರಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಬರೀ, ಬಿಜೆಪಿ-ಕಾಂಗ್ರೆಸ್ಗಳಲ್ಲದೆ, ಆಪ್, ಸಮಾಜವಾದಿ ಪಕ್ಷ, ಬಹುಜನಸಮಾಜ ಪಾರ್ಟಿಗಳೂ ಕೂಡ ಉತ್ತರಪ್ರದೇಶ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿವೆ.
ಇದನ್ನೂ ಓದಿ: ಪ್ರಧಾನಿ ಭದ್ರತೆ ಲೋಪ; ಫಿರೋಜ್ಪುರ ಎಸ್ಎಸ್ಪಿಯನ್ನು ದೂಷಿಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ ಭಟಿಂಡಾ ಎಸ್ಎಸ್ಪಿ