AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್​ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ರಾವ್​ ಬಂಧನ

ಜನವರಿ 3ರಂದು, ಕೊತೆಗುಡಂ ಜಿಲ್ಲೆಯ ಉದ್ಯಮಿ ರಾಮಕೃಷ್ಣ, ಅವರ ಪತ್ನಿ ಮತ್ತು ಅವಳಿ ಪುತ್ರಿಯರು ಪಾಲೋಂಚಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಉದ್ಯಮಿ ಒಂದು ಸೆಲ್ಫೀ ವಿಡಿಯೋ ಮಾಡಿ, ವಾನಮ ರಾಘವೇಂದ್ರ ರಾವ್​ ತನ್ನ ಪತ್ನಿಯ ವಿರುದ್ಧ ಮಾನಹಾನಿಯಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾನೆ ಎಂದು ಆರೋಪಿಸಿದ್ದರು.

ಉದ್ಯಮಿ ಕುಟುಂಬದ ಭೀಕರ ಆತ್ಮಹತ್ಯೆ ಪ್ರಕರಣ; ತೆಲಂಗಾಣ ಆಡಳಿತ ಪಕ್ಷ ಟಿಆರ್​ಎಸ್ ಶಾಸಕನ ಪುತ್ರ ವನಮಾ ರಾಘವೇಂದ್ರ ರಾವ್​ ಬಂಧನ
ಬಂಧಿತ ರಾಘವೇಂದ್ರ ರಾವ್​
Follow us
TV9 Web
| Updated By: Lakshmi Hegde

Updated on: Jan 08, 2022 | 11:40 AM

ತೆಲಂಗಾಣದ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (TRS) ಶಾಸಕ  ವನಮಾ ವೆಂಕಟೇಶ್ವರ ರಾವ್​ ಅವರ ಪುತ್ರ ವನಮಾ ರಾಘವೇಂದ್ರ ರಾವ್(Vanama Raghavendra Rao)​​ನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕೊತೆಗುಡಂ ಜಿಲ್ಲೆಯ ಖ್ಯಾತ ಉದ್ಯಮಿ ಮತ್ತು ಅವರ ಕುಟುಂಬದ ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದಡಿ ರಾಘವೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ ಆತ ಪರಾರಿಯಾಗಿದ್ದ. ಶುಕ್ರವಾರ ರಾತ್ರಿ ರಾಘವೇಂದ್ರರನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪ ಹೊತ್ತಿದ್ದ ರಾಘವೇಂದ್ರ ರಾವ್​ರನ್ನು ಟಿಆರ್​ಎಸ್​ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಈಗಾಗಲೇ ಅಮಾನತು ಮಾಡಲಾಗಿದೆ.

ಜನವರಿ 3ರಂದು, ಕೊತೆಗುಡಂ ಜಿಲ್ಲೆಯ ಉದ್ಯಮಿ ರಾಮಕೃಷ್ಣ, ಅವರ ಪತ್ನಿ ಮತ್ತು ಅವಳಿ ಪುತ್ರಿಯರು ಪಾಲೋಂಚಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮೊದಲು ಉದ್ಯಮಿ ಒಂದು ಸೆಲ್ಫೀ ವಿಡಿಯೋ ಮಾಡಿ, ವನಮಾ ರಾಘವೇಂದ್ರ ರಾವ್​ ತನ್ನ ಪತ್ನಿಯ ವಿರುದ್ಧ ಮಾನಹಾನಿಯಾಗುವಂತಹ ಅವಹೇಳನಕಾರಿ ಮಾತುಗಳನ್ನು ಆಡಿದ್ದಾನೆ. ಈ ಅವಮಾನ ಸಹಿಸಲಾಗದೆ ಆತ್ಮಹತ್ಯೆ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದರು. ಅಷ್ಟೇ ಅಲ್ಲ, ನನ್ನ ಮತ್ತು ಸೋದರಿಯ ನಡುವೆ ಆಸ್ತಿ ವಿವಾದ ಇತ್ತು. ಇದನ್ನು ರಾಘವೇಂದ್ರ ರಾವ್​ ದುರುಪಯೋಗಪಡಿಸಿಕೊಂಡಿದ್ದಾನೆ. ಸೋದರಿಯೊಂದಿಗೆ ಅನ್ಯೋನ್ಯವಾಗಿ ವರ್ತಿಸಿ ನಮಗೆ ಅನ್ಯಾಯವಾಗುವಂತೆ ಮಾಡಿದ್ದಾನೆ ಎಂದೂ ರಾಮಕೃಷ್ಣ ಹೇಳಿದ್ದರು. ವಿಡಿಯೋವನ್ನು ಪೊಲೀಸರು ಕೋರ್ಟ್​ಗೆ ಸಲ್ಲಿಸಿದ್ದರು. ಇನ್ನು ರಾಮಕೃಷ್ಣ ಕುಟುಂಬ ಭಯಾನಕವಾಗಿ ಮೃತಪಟ್ಟಿತ್ತು. ಮನೆಯಲ್ಲಿದ್ದ ಗ್ಯಾಸ್​ ಸಿಲಿಂಡರ್​​ನ್ನು ತೆರೆದಿಟ್ಟು, ನಂತರ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿಕೊಂಡು ಸತ್ತಿದ್ದರು. ಆದರೆ ರಾಮಕೃಷ್ಣರ ಕೊನೇ ಮಗಳಿಗೆ ಜೀವವಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಅಲ್ಲಿ ಪೊಲೀಸರು ಹೇಳಿಕೆ ಪಡೆದಿದ್ದಾರೆ.

ಸೆಲ್ಫೀ ವಿಡಿಯೋ ಆಧಾರದ ಮೇಲೆ ಪೊಲೀಸರು ರಾಘವೇಂದ್ರ ರಾವ್ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದರು. ಆದರೆ ಅಂದಿನಿಂದಲೂ ಅವರು ಕಾಣೆಯಾಗಿದ್ದರು. ಅವರನ್ನು ಪತ್ತೆ ಮಾಡಲು ಪೊಲೀಸರು ತಂಡ ರಚನೆ ಮಾಡಿದ್ದರು. ಈ ಬೆನ್ನಲ್ಲೇ ಬಿಜೆಪಿ ಹಾಗೂ ಇತರ ವಿರೋಧ ಪಕ್ಷಗಳೂ ರಾಘವೇಂದ್ರ ರಾವ್​ ವಿರುದ್ಧ ಪ್ರತಿಭಟನೆ ಶುರು ಮಾಡಿದ್ದವು.  ಆತನನ್ನು ಅರೆಸ್ಟ್ ಮಾಡಿ ಎಂದು ಆಗ್ರಹಿಸಿ ಧರಣಿ ಕುಳಿತಿದ್ದರು. ಕೊತೆಗುಡಂ ಜಿಲ್ಲೆಯ ಬಂದ್​ಗೆ ಕೂಡ ಕರೆ ನೀಡಲಾಗಿತ್ತು. ರಾಘವೇಂದ್ರ ರಾವ್​ ವಿರುದ್ಧ ರೌಡಿ ಶೀಟ್​ ತೆರೆಯಬೇಕು ಎಂದೂ ಆಗ್ರಹಿಸಿದ್ದರು. ಇನ್ನೊಂದೆಡೆ ತಮ್ಮ ಪುತ್ರನ ಬಗ್ಗೆ ನೊಂದು ಕೊಂಡು ಬಹಿರಂಗ ಪತ್ರ ಬರೆದಿದ್ದ ಶಾಸಕ ವನಮಾ ವೆಂಕಟೇಶ್ವರ್​ ರಾವ್​, ರಾಮಕೃಷ್ಣ ಕುಟುಂಬ ಆತ್ಮಹತ್ಯೆ ಕೇಸ್​​ನಲ್ಲಿ ರಾಘವೇಂದ್ರ ರಾವ್ ಹೆಸರು ಕೇಳುತ್ತಿದೆ. ಅದರ ಬಗ್ಗೆ ತನಿಖೆ ನಡೆಸಲು ನಮ್ಮ ಕುಟುಂಬ ಸಂಪೂರ್ಣವಾಗಿ, ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಕೊವಿಡ್ ಬಗ್ಗೆ ಡಿಕೆ ಶಿವಕುಮಾರ್​ಗೆ ಮಾಹಿತಿಯ ಕೊರತೆ ಇದೆ; ಆರೋಗ್ಯ ಸಚಿವ ಡಾ.ಕೆ.ಸುಧಾಕರ್