Video: ಪೋಷಕರೆದುರೇ ಜಿಪ್ ಲೈನ್ ರೈಡ್ ವೇಳೆ ಬಿದ್ದು ಪ್ರಾಣಬಿಟ್ಟ ಬಾಲಕ

ಉತ್ತರ ಪ್ರದೇಶದ ಆಗ್ರಾ ಚೌಪಟ್ಟಿಯಲ್ಲಿ ಜಿಪ್‌ಲೈನಿಂಗ್ ಸವಾರಿಯ ವೇಳೆ ಸುರಕ್ಷತಾ ಲೋಪದಿಂದಾಗಿ 15 ವರ್ಷದ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿದ್ದ ಪೋಷಕರ ಕಣ್ಣೆದುರೇ ಈ ಘಟನೆ ನಡೆದಿದ್ದು, ಇದರ ಲೈವ್ ವಿಡಿಯೋ ವೈರಲ್ ಆಗಿದೆ. ನಿರ್ಲಕ್ಷ್ಯದ ಆರೋಪದ ಮೇಲೆ ಕಂಪನಿ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

Video: ಪೋಷಕರೆದುರೇ ಜಿಪ್ ಲೈನ್ ರೈಡ್ ವೇಳೆ ಬಿದ್ದು ಪ್ರಾಣಬಿಟ್ಟ ಬಾಲಕ
ಬಾಲಕ ಸಾವು
Image Credit source: TV9 Hindi

Updated on: May 25, 2026 | 11:35 AM

ಆಗ್ರಾ, ಮೇ 25: ಮನರಂಜನೆ ಮತ್ತು ಸಾಹಸದ ಆಟ(Game)ವೊಂದು ಹದಿನೈದು ವರ್ಷದ ಬಾಲಕನ ಪಾಲಿಗೆ ಯಮಪಾಶವಾದ ಅತ್ಯಂತ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾದಲ್ಲಿ ಸಂಭವಿಸಿದೆ. ತಾಜ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ‘ಆಗ್ರಾ ಚೌಪಟ್ಟಿ’ಯಲ್ಲಿ ಜಿಪ್‌ಲೈನಿಂಗ್ ಸವಾರಿಯ ವೇಳೆ ಬಾಲಕನೊಬ್ಬ ಎತ್ತರದಿಂದ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ. ಈ ಹೃದಯವಿದ್ರಾವಕ ಘಟನೆಯ ಲೈವ್ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.

ನಡೆದಿದ್ದೇನು?
ವರದಿಗಳ ಪ್ರಕಾರ, 15 ವರ್ಷದ ಹದಿಹರೆಯದ ಬಾಲಕನೊಬ್ಬ ತನ್ನ ಪೋಷಕರೊಂದಿಗೆ ಆಗ್ರಾ ಚೌಪಟ್ಟಿಗೆ ಭೇಟಿ ನೀಡಿದ್ದ. ಅಲ್ಲಿ ಅತ್ಯಂತ ಉತ್ಸಾಹದಿಂದ ಜಿಪ್‌ಲೈನಿಂಗ್ ಸಾಹಸಕೆಕಂದು ಹೊರಟಿದ್ದ. ಆದರೆ, ತಾಂತ್ರಿಕ ದೋಷ ಅಥವಾ ಸುರಕ್ಷತಾ ಲೋಪ ಸಂಭವಿಸಿದೆ. ಪರಿಣಾಮವಾಗಿ, ಆತ ಗಾಳಿಯಲ್ಲೇ ನಿಯಂತ್ರಣ ಕಳೆದುಕೊಂಡು ನೇರವಾಗಿ ಕೆಳಗೆ ಬಿದ್ದಿದ್ದಾನೆ. ಅಲ್ಲಿಯೇ ಇದ್ದ ಪ್ರತ್ಯಕ್ಷದರ್ಶಿಯೊಬ್ಬರು ಈ ಇಡೀ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ. ಅತ್ಯಂತ ದುರದೃಷ್ಟಕರ ಸಂಗತಿಯೆಂದರೆ, ಬಾಲಕನ ಪೋಷಕರು ಸ್ಥಳದಲ್ಲೇ ಇದ್ದು, ಅವರ ಕಣ್ಣೆದುರೇ ಮಗ ತಳಮಳಿಸುತ್ತಾ ಪ್ರಾಣ ಬಿಟ್ಟಿದ್ದಾನೆ.

ಸುರಕ್ಷತಾ ಮಾನದಂಡಗಳ ಉಲ್ಲಂಘನೆ: ಸಾರ್ವಜನಿಕರ ಆಕ್ರೋಶ
ಈ ಭೀಕರ ಅಪಘಾತವು ಚೌಪಟ್ಟಿಯಲ್ಲಿ ಜಿಪ್‌ಲೈನಿಂಗ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಕಂಪನಿ ಮತ್ತು ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸಿದೆ. ಇಂತಹ ಅಪಾಯಕಾರಿ ಸಾಹಸ ಕ್ರೀಡೆಗಳಿಗೆ ಬೇಕಾದ ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಕಂಪನಿಯು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಇಲ್ಲಿದೆ

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇಲೆ ಜಿಪ್‌ಲೈನಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ಕಂಪನಿಯ ಮ್ಯಾನೇಜರ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಜೊತೆಗೆ ಕಂಪನಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.

ಮತ್ತಷ್ಟು ಓದಿ: Video: ಬಾಲಕಿ ಗೇಮ್ ಆಡುತ್ತಿದ್ದಾಗ ಏಕಾಏಕಿ ಮೊಬೈಲ್ ಸ್ಫೋಟ

 

ಪೊಲೀಸರು ಬಾಲಕನ ಮೃತದೇಹವನ್ನು ವಶಕ್ಕೆ ಪಡೆದು, ಪಂಚನಾಮ ಪ್ರಕ್ರಿಯೆ ಮುಗಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಘೋರ ಅಪಘಾತದಿಂದಾಗಿ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಆಗ್ರಾ ಚೌಪಟ್ಟಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಭೀತಿ ಆವರಿಸಿದೆ. ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಬಾಲಕನ ಸಾವಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us