ತೆಲಂಗಾಣ: ಹಿಂದೂ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ವ್ಯಕ್ತಿಗೆ ಪೊಲೀಸ್ ವ್ಯಾನ್‌ನೊಳಗೆ ನುಗ್ಗಿ ಹಿಗ್ಗಾಮುಗ್ಗ ಥಳಿತ
ಘಟನೆಯ ವಿಡಿಯೊದಲ್ಲಿ ದಾಳಿಕೋರರು ಪೊಲೀಸ್ ವಾಹನವನ್ನು ಸುತ್ತುವರಿದು ನರೇಶ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಪೊಲೀಸರು ನೋಡು ನೋಡುತ್ತಿದ್ದಂತೆಯೇ ಬಂದೆರಗಿದ ಗುಂಪು ನರೇಶ್ನ್ನು ಎಳೆದು ಹಾಕಿ, ಹಿಗ್ಗಾ ಮುಗ್ಗ ಥಳಿಸಿ ಬಟ್ಟೆಯನ್ನು ಹರಿದು ಹಾಕಿದೆ.
ಹೈದರಾಬಾದ್: ಹಿಂದೂ ದೇವರು (Hindu gods) ಮತ್ತು ದೇವತೆಗಳ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ವ್ಯಾನ್‌ನೊಳಗೆ ಥಳಿಸಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. 42 ವರ್ಷದ ಬೈರಿ ನರೇಶ್ ಅವರು ಕಾನೂನು ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರನ್ನು ಥಳಿಸಲು ಗುಂಪು ಬರಬಹುದು ಎಂದು ಹೇಳಲಾಗಿತ್ತು. ದಾಳಿಯ ಭೀತಿಯಿಂದ ನರೇಶ್ ಪೊಲೀಸರಿಗೆ ಕರೆ ಮಾಡಿದ್ದಾರೆ. ಯಾವುದೇ ತೊಂದರೆಯಾಗದಂತೆ ಅವರನ್ನು ಕರೆದೊಯ್ಯಲು ಪೊಲೀಸರು ಬಂದಾಗ ಗುಂಪು ಬಂದು ಪೊಲೀಸ್ ವಾಹನದೊಳಗೆ ಥಳಿಸಿದೆ. ಪೊಲೀಸರು ಆತನನ್ನು ರಕ್ಷಿಸಲು ಪ್ರಯತ್ನಿಸಿದರು, ಆದರೆ ಗುಂಪು ನರೇಶ್ನ್ನು ಎಳೆದು ಹಾಕಿ ಹಲ್ಲೆ ನಡೆಸಿದೆ.
ಘಟನೆಯ ವಿಡಿಯೊದಲ್ಲಿ ದಾಳಿಕೋರರು ಪೊಲೀಸ್ ವಾಹನವನ್ನು ಸುತ್ತುವರಿದು ನರೇಶ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಪೊಲೀಸರು ನೋಡು ನೋಡುತ್ತಿದ್ದಂತೆಯೇ ಬಂದೆರಗಿದ ಗುಂಪು ನರೇಶ್ನ್ನು ಎಳೆದು ಹಾಕಿ, ಹಿಗ್ಗಾ ಮುಗ್ಗ ಥಳಿಸಿ ಬಟ್ಟೆಯನ್ನು ಹರಿದು ಹಾಕಿದೆ.
ತೆಲಂಗಾಣದ ಹನಮಕೊಂಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಬಲಪಂಥೀಯ ಸಂಘಟನೆಗಳು ಈ ಕೃತ್ಯವೆಸಗಿದೆ ಎಂದು ಹೇಳಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಎಲ್ಲಾ ದಾಳಿಕೋರರನ್ನು ಬಂಧಿಸಲಾಗಿದೆ ಎಂದು ವಾರಂಗಲ್ ಪೊಲೀಸ್ ಆಯುಕ್ತ ಎ ವಿ ರಂಗನಾಥ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಹಿಂದೂ ದೇವರು ಅಯ್ಯಪ್ಪ ಸ್ವಾಮಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನಾಸ್ತಿಕ ಸಂಘದ ನರೇಶ್ ಅವರನ್ನು ಡಿಸೆಂಬರ್ 31 ರಂದು ಬಂಧಿಸಲಾಯಿತು. ಆತನನ್ನು ಜೈಲಿಗೆ ಕರೆದೊಯ್ಯುತ್ತಿದ್ದಾಗ ಹಲ್ಲೆಗೆ ಯತ್ನ ನಡೆದಿದೆ. ಜೈಲಿನಲ್ಲಿದ್ದಾಗಲೂ ಅವರ ಹೇಳಿಕೆಗಳಿಂದ ಕೋಪಗೊಂಡ ಜನರು ತಮ್ಮ ಮೇಲೆ ಹಲ್ಲೆ ನಡೆಸಬಹುದೆಂಬ ಭಯವಿತ್ತು. ಆತನನ್ನು ಏಕಾಂತವಾಗಿ ಸೆರೆಮನೆಯಲ್ಲಿ ಇರಿಸಲಾಗಿದೆ ಎಂದು ಆತನ ಪತ್ನಿ ದೂರಿದ್ದು, ಜೈಲು ಅಧಿಕಾರಿಗಳು ಈ ಆರೋಪ ನಿರಾಕರಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:06 pm, Tue, 28 February 23