ತೆಲಂಗಾಣದಲ್ಲಿ ಸುರಂಗ ಕುಸಿತ; ನಾಪತ್ತೆಯಾಗಿದ್ದ ನಾಲ್ವರು ಪತ್ತೆ

ಶನಿವಾರ ರಾತ್ರಿ ಹೇಳಿಕೆ ನೀಡಿರುವ ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ, 18 ಸಂಸ್ಥೆಗಳು, 54 ಅಧಿಕಾರಿಗಳು ಮತ್ತು 703 ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದೆ. ಭಾಗಶಃ ಕುಸಿದ ಎಸ್‌ಎಲ್‌ಬಿಸಿ ಸುರಂಗದೊಳಗೆ 1 ವಾರದವರೆಗೆ ಸಿಲುಕಿಕೊಂಡಿದ್ದ 8 ಜನರನ್ನು ಹೊರತೆಗೆಯಲು ನಡೆಸಲಾದ ರಕ್ಷಣಾ ಕಾರ್ಯಾಚರಣೆ ಶನಿವಾರ ಪ್ರಗತಿ ಸಾಧಿಸಿತು. ಇದೀಗ ನಾಪತ್ತೆಯಾದವರಲ್ಲಿ ನಾಲ್ವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗಿದೆ. ಆದರೆ ತೆಲಂಗಾಣ ಸಚಿವರೊಬ್ಬರು ಅವರು ಬದುಕುಳಿಯುವ ಸಾಧ್ಯತೆಗಳು ಕೇವಲ ಶೇ. 1ರಷ್ಟಿದೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಸುರಂಗ ಕುಸಿತ; ನಾಪತ್ತೆಯಾಗಿದ್ದ ನಾಲ್ವರು ಪತ್ತೆ
Telangana Tunnel

Updated on: Mar 02, 2025 | 3:29 PM

ಹೈದರಾಬಾದ್ (ಮಾರ್ಚ್ 2): ತೆಲಂಗಾಣದಲ್ಲಿ ಸುರಂಗ ಕುಸಿತವಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರೆದಿದೆ. ಶನಿವಾರ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಣಾ ತಂಡವು ತೆಲಂಗಾಣದ ನಾಗರ್ಕರ್ನೂಲ್‌ನಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗದೊಳಗೆ ಸಿಲುಕಿದ್ದ 8 ಜನರಲ್ಲಿ ನಾಲ್ವರು ಎಲ್ಲಿದ್ದಾರೆ ಎಂಬುದನ್ನು ಪತ್ತೆಹಚ್ಚಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು ಸಂಜೆ ಸುರಂಗ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅವರು ರಕ್ಷಣಾ ಕಾರ್ಯಾಚರಣೆಯ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.

ತೆಲಂಗಾಣ ರಾಜ್ಯ ಅಬಕಾರಿ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರ ಪ್ರಕಾರ,ಇತರ ನಾಲ್ವರು ಜನರು ಸುರಂಗ ಕೊರೆಯುವ ಯಂತ್ರದ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಅವರನ್ನು ಹೊರಗೆ ತರಲು ಸ್ವಲ್ಪ ಸಮಯ ಬೇಕಾಗಬಹುದು. ನಾಲ್ವರನ್ನು ಪತ್ತೆಹಚ್ಚಲಾಗಿದ್ದರೂ ಅವರು ಬದುಕುಳಿಯುವ ಸಾಧ್ಯತೆಗಳು ಬಹಳ ಕಡಿಮೆ ಎನ್ನಲಾಗಿದೆ.

ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತವಾಗಿ 48 ಗಂಟೆ; ದುರಂತದಲ್ಲಿ ಸಿಲುಕಿದ್ದ 8 ಜನ ಬದುಕುಳಿಯುವ ಸಾಧ್ಯತೆ ಕಡಿಮೆ

ಭಾಗಶಃ ಕುಸಿದ ಎಸ್‌ಎಲ್‌ಬಿಸಿ ಸುರಂಗದೊಳಗೆ ಸಿಲುಕಿರುವ ವ್ಯಕ್ತಿಗಳು ಪತ್ತೆಯಾದ ಸ್ಥಳಗಳಲ್ಲಿ ಹೂಳು ತೆಗೆಯುವ ಪ್ರಯತ್ನಗಳನ್ನು ತೀವ್ರಗೊಳಿಸಲಾಗಿದ್ದು, ಸಿಬ್ಬಂದಿ ಮತ್ತು ಸಲಕರಣೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ಸುರಂಗದ ಕುಸಿತದಿಂದ ಹಾನಿಗೊಳಗಾದ ಕನ್ವೇಯರ್ ಬೆಲ್ಟ್ ಅನ್ನು ಸೋಮವಾರದೊಳಗೆ ದುರಸ್ತಿ ಮಾಡುವ ನಿರೀಕ್ಷೆಯಿದೆ.


ಫೆಬ್ರವರಿ 22ರಂದು ಸುರಂಗ ಕುಸಿತವಾಗಿತ್ತು. ಆ ಸುರಂಗದಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಮನೋಜ್ ಕುಮಾರ್ (ಉತ್ತರ ಪ್ರದೇಶ), ಶ್ರೀನಿವಾಸ್ (ಉತ್ತರ ಪ್ರದೇಶ), ಸನ್ನಿ ಸಿಂಗ್ (ಜಮ್ಮು ಮತ್ತು ಕಾಶ್ಮೀರ), ಗುರುಪ್ರೀತ್ ಸಿಂಗ್ (ಪಂಜಾಬ್), ಮತ್ತು ಜಾರ್ಖಂಡ್ ರಾಜ್ಯದ ಸಂದೀಪ್ ಸಾಹು, ಜೆಗ್ತಾ ಕ್ಸೆಸ್, ಸಂತೋಷ್ ಸಾಹು, ಅನುಜ್ ಸಾಹು ಎಂದು ಗುರುತಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ