ನವದೆಹಲಿ, ಡಿಸೆಂಬರ್ 19: ಕೇಂದ್ರ ಸರ್ಕಾರ ಶತಮಾನದಷ್ಟು ಹಳೆಯದಾದ ಟೆಲಿಗ್ರಾಫ್ ಕಾಯ್ದೆಯ ಬದಲು 2023ರ ದೂರಸಂಪರ್ಕ ಮಸೂದೆ (Telecommunications Bill 2023) ಜಾರಿಗೊಳಿಸಲು ಮುಂದಾಗಿದೆ. ಸರ್ಕಾರ ನಿನ್ನೆ ಸೋಮವಾರ (ಡಿ. 18) ಲೋಕಸಭೆಯಲ್ಲಿ ಈ ಹೊಸ ಮಸೂದೆ ಮಂಡನೆ ಮಾಡಿದೆ. ಪರಿಣಿತರ ಪ್ರಕಾರ, ಈ ಮಸೂದೆ ಹೊಸ ಕಾಲಕ್ಕೆ ಅನುಗುಣವಾಗಿರುವ ಕಾನೂನುಗಳನ್ನು ಪ್ರಸ್ತಾಪಿಸಿದೆ. ದೇಶದಲ್ಲಿ ಇಂಟರ್ನೆಟ್ ಕ್ರಾಂತಿ ಹೆಚ್ಚಿಸಲಿದೆ, ಸರ್ಕಾರಕ್ಕೆ ಹೆಚ್ಚಿನ ಬಲ ಕೊಡಲಿದೆ, ಟೆಲಿಕಾಂ ನೀತಿಗಳಲ್ಲಿ ಸುಧಾರಣೆ ತರಲು ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಕ್ಯಾಬಿನೆಟ್ ಈ ಮಸೂದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಲೋಕಸಭೆಯಲ್ಲೂ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಇದು ಕಾಯ್ದೆಯಾಗಿ ಜಾರಿಗೆ ಬರುತ್ತದೆ.
ಟೆಲಿಕಮ್ಯುನಿಕೇಶನ್ಸ್ ಬಿಲ್ನಲ್ಲಿ ಇರುವ ಪ್ರಮುಖ ಅಂಶಗಳಲ್ಲಿ ಒಂದು ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ (satellite spectrum allocation) ವಿಚಾರ. 2ಜಿ, 3ಜಿ, 4ಜಿ, 5ಜಿ ಇತ್ಯಾದಿ ಸ್ಪೆಕ್ಟ್ರಂಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಆದರೆ, ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಈ ವಿಧಾನಕ್ಕೆ ತಿಲಾಂಜಲಿ ಹೇಳಿ, ಆಡಳಿತಾತ್ಮಕ ಹಂಚಿಕೆ ವಿಧಾನ (administrative allocation) ಅನುಸರಿಸಲು ನಿರ್ಧರಿಸಲಾಗಿದೆ. ಅಂದರೆ, ಈ ಸ್ಪೆಕ್ಟ್ರಂ ಬಳಕೆಗೆ ಸರ್ಕಾರವೇ ಶುಲ್ಕ ನಿಗದಿ ಮಾಡುತ್ತದೆ.
ಭಾರ್ತಿ ಏರ್ಟೆಲ್ ಹಾಗೂ ಇಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸಂಸ್ಥೆಗಳೂ ಕೂಡ ಆಡಳಿತಾತ್ಮಕವಾಗಿ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಏರ್ಟೆಲ್ನ ಒನ್ವೆಬ್, ಸ್ಟಾರ್ಲಿಂಕ್, ಅಮೇಜಾನ್ನ ಕ್ಯೂಪರ್, ರಿಲಾಯನ್ಸ್ನ ಜಿಯೋ ಸೆಟಿಲೈಟ್ ಕಮ್ಯೂನಿಕೇಶನ್ಸ್ ಮೊದಲಾದ ಕಂಪನಿಗಳಿಗೆ ಸಹಾಯವಾಗಲಿದೆ.
ಇದನ್ನೂ ಓದಿ: CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ
ಅಲ್ಲದೇ, ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಸೇವೆಯ ವೆಚ್ಚ ಕಡಿಮೆ ಆಗುತ್ತದೆ. ಹಾಗು ಬಹಳ ಬೇಗ ಈ ಸೇವೆ ಭಾರತದ ಮೂಲೆಮೂಲೆ ತಲುಪಲು ಸಾಧ್ಯವಾಗುತ್ತದೆ. ಹರಾಜು ಪ್ರಕ್ರಿಯೆ ಅನುಸರಿಸಿದರೆ ಸೆಟಿಲೈಟ್ ಬ್ರಾಡ್ಬ್ಯಾಂಡ್ ಸೇವೆಗಳ ವೆಚ್ಚ ಹೆಚ್ಚಾಗುತ್ತದೆ. ಜೊತೆಗೆ ಸಮಯವೂ ಹೆಚ್ಚು ವ್ಯಯವಾಗುತ್ತದೆ.
2023ರ ಟೆಲಿಕಮ್ಯೂನಿಕೇಶನ್ಸ್ ಬಿಲ್ನಲ್ಲಿ ಇರುವ ಇನ್ನೊಂದು ಪ್ರಮುಖ ಅಂಶವೆಂದರೆ ಅದು ಸರ್ಕಾರಕ್ಕೆ ಕೊಟ್ಟಿರುವ ಹೆಚ್ಚಿನ ನಿಯಂತ್ರಣ ಅಧಿಕಾರ. ರಾಷ್ಟ್ರೀಯ ಭದ್ರತಾ ಅಪಾಯದ ಸ್ಥಿತಿ ಬಂದರೆ ಯಾವುದೇ ದೂರಸಂಪರ್ಕ ಸೇವೆ ಅಥವಾ ನೆಟ್ವರ್ಕ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುವ, ಅಥವಾ ರದ್ದು ಮಾಡುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.
ಬಳಕೆದಾರರ ಹಿತದೃಷ್ಟಿಯಿಂದ ವಾಟ್ಸಾಪ್ ಇತ್ಯಾದಿ ಇಂಟರ್ನೆಟ್ ಆಧಾರಿತ ಕರೆ ಮತ್ತು ಮೆಸೇಜಿಂಗ್ ಆ್ಯಪ್ಗಳನ್ನು ಟೆಲಿಕಮ್ಯೂನಿಕೇನ್ಸ್ ವ್ಯಾಖ್ಯಾನದ ಪರಿಧಿಗೆ ತರಲಾಗಿದೆ.
ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಜನ್ಮಸ್ಥಳ ಅಭಿವೃದ್ಧಿ ಯೋಜನೆ ಕೈಗೊಂಡ ನಿತೀಶ್ ಕುಮಾರ್, ಏನಿದು ಅಜೆಂಡಾ?
ಇದರ ಜೊತೆ ಕರಡು ಮಸೂದೆಯಲ್ಲಿ ಇನ್ನೂ ಕೆಲ ಮಹತ್ವದ ಸುಧಾರಣಾ ಕ್ರಮಗಳು ಪ್ರಸ್ತಾಪವಾಗಿವೆ. ಪ್ರವೇಶ ಶುಲ್ಕ, ಪರವಾನಗಿ ಶುಲ್ಕ, ದಂಡ ಇತ್ಯಾದಿಯನ್ನು ಮನ್ನಾ ಮಾಡುವಂತಹ ಅಧಿಕಾರವನ್ನು ಸರ್ಕಾರಕ್ಕೆ ಕೊಡಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ, ಟೆಲಿಕಾಂ ನೆಟ್ವರ್ಕ್ಗಳ ಲಭ್ಯತೆ ಹೆಚ್ಚುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಲಾಭ ಆಗುತ್ತದೆ.
ಇನ್ನು, ಒಂದು ಕಂಪನಿ ತನ್ನ ಪರವಾನಿಗೆಯನ್ನು ಮರಳಿಸಿದರೆ ಲೈಸೆನ್ಸ್ ಶುಲ್ಕದ ರೀಫಂಡ್ ಇತ್ಯಾದಿ ವಿಚಾರದಲ್ಲಿ ನಿಯಮಗಳನ್ನು ಸುಲಭಗೊಳಿಸುವ ಪ್ರಸ್ತಾಪವು ಈ ಮಸೂದೆಯಲ್ಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ