ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ -PNB) ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಷ್ಟಪಟ್ಟು ದುಡಿದ ಹಣವನ್ನು ಲಾಕರ್‌ನಲ್ಲಿ (Bank Locker) ಇಟ್ಟಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ತಾವು ಲಾಕರ್‌ನಲ್ಲಿಟ್ಟಿದ್ದ ಹಣ ನಾಶವಾಗಿದೆ ಎಂದು ಗ್ರಾಹಕರು ಅಲವತ್ತುಕೊಂಡಿದ್ದಾರೆ. ತಮ್ಮ ಹಣವನ್ನು ವಾಪಸ್ ಕೊಡುವಂತೆ ಬ್ಯಾಂಕ್ ಸಿಬ್ಬಂದಿಯನ್ನು ಅವರು ಆಕ್ರೋಶದಿಂದ ಕೇಳಿದ್ದಾರೆ. ಈ ಘಟನೆ ನಡೆದಿರುವುದು ರಾಜಸ್ಥಾನದ (Rajasthan) ಉದಯಪುರದಲ್ಲಿ. ಆ ಪ್ರಸಂಗ ಏನು ಅಂತ ನೋಡೋದಾದರೆ
ವಿವರ ಹೀಗಿದೆ.. ಸುನೀತಾ ಮೆಹ್ತಾ ಎಂಬ ಮಹಿಳೆ ಕಾಲಾಜಿ ಗೊರಜಿಯಲ್ಲಿರುವ ಪಿಎನ್‌ಬಿ ಶಾಖೆಯಲ್ಲಿ ರೂ. 2 ಲಕ್ಷದವರೆಗೆ ಹಣವನ್ನು ಲಾಕರ್‌ನಲ್ಲಿ ಇಟ್ಟಿದ್ದರು. ಇತ್ತೀಚೆಗೆ ಆಕೆಗೆ ಹಣದ ಅಗತ್ಯವಿತ್ತು. ಹಾಗಾಗಿ ತಾವು ಲಾಕರ್‌ನಲ್ಲಿಟ್ಟಿದ್ದ ಹಣವನ್ನು ಬ್ಯಾಗ್ ಸಮೇತ ಹಾಗೆಯೇ ಮನೆಗೆ ತಂದಿದ್ದಾರೆ. ಹಣ ತಂದಿದ್ದ ಬ್ಯಾಗ್ ತೆರೆದು ನೋಡಿದಾಗ ಕೆಲ ಕರೆನ್ಸಿ ನೋಟುಗಳು ಪುಡಿಪುಡಿಯಾಗಿರುವುದು ಕಂಡು ಬಂದಿದೆ.
ನೋಟುಗಳು ವಿರೂಪಗೊಂಡು ನಾಶವಾಗಿರುವುದನ್ನು ಕಂಡು ಆ ಮಹಿಳೆ ಕಂಗಾಲಾಗಿದ್ದಾರೆ. ಸುಮಾರು 15 ಸಾವಿರ ರೂಪಾಯಿವರೆಗಿನ ಎಲ್ಲಾ ಕರೆನ್ಸಿ ನೋಟುಗಳು ಸಂಪೂರ್ಣ ನಾಶವಾಗಿವೆ. ಇನ್ನು ಕೆಲವು ನೋಟುಗಳು ಭಾಗಶಃ ಹಾಳಾಗಿವೆ. ಯಾಕೆ ಹೀಗೆ ಎಂದು ನೋಡಿದಾಗ ಗೆದ್ದಲು ತಿಂದು (Termites) ಹಾಳಾಗಿರುವುದು ಪತ್ತೆಯಾಗಿದೆ.
ಕೂಡಲೇ, ಪುಡಿಪುಡಿಯಾಗಿರುವ ಆ ಹಣವನ್ನೇ ತೆಗೆದುಕೊಂಡು ಬ್ಯಾಂಕ್ ಗೆ ತೆರಳಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸ್ಥಿಯಲ್ಲಿದ್ದ ತಮ್ಮ ಹಣವನ್ನು ಕೂಡಲೇ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದಾರೆ. ಕೊನೆಗೆ, ಸಂತ್ರಸ್ತ ಮಹಿಳೆಗೆ ಆಕೆ ಕಳೆದುಕೊಂಡ ಮೊತ್ತವನ್ನು ಬ್ಯಾಂಕ್ ಹಿಂದಿರುಗಿಸಿದೆ.
ಈ ಬೆಳವಣಿಗೆಯಿಂದ ಬ್ಯಾಂಕ್ ಅಧಿಕಾರಿಗಳೂ ಬೆಚ್ಚಿಬಿದ್ದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಲಾಕರ್ ನಲ್ಲಿ ಇಚ್ಚಿಟ್ಟಿದ್ದ ಬಹುತೇಕ ಕರೆನ್ಸಿ ನೋಟುಗಳು ಚೆಲ್ಲಾಪಿಲ್ಲಿಯಾಗಿ, ಹರಿದಿದ್ದು, ನಿರುಪಯುಕ್ತವಾಗಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಈ ಸುದ್ದಿ ಸ್ಥಳೀಯವಾಗಿ ಸಂಚಲನ ಮೂಡಿಸುತ್ತಿದ್ದಂತೆ ಗ್ರಾಹಕರು ಬ್ಯಾಂಕ್‌ಗೆ ಬಂದು ನೋಡಿಕೊಂಡು ಹೋಗಿದ್ದಾರೆ. ಜನ ಸಹ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.