ಭಯೋತ್ಪಾದಕರ ಗುಂಡಿಗೆ ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಕಾರ್ಯಕರ್ತ ಬಲಿ, ಹೆಚ್ಚುತ್ತಿವೆ ಉಗ್ರರ ದಾಳಿಗಳು
ಅಪ್ನಿ ಪಾರ್ಟಿ ಆ ಭಾಗದಲ್ಲಿ ಒಂದು ಶಕ್ತಿಯಾಗಿ ಗುರುತಿಸಿಕೊಳ್ಳಲು ವಿಫಲವಾಗಿದ್ದರೂ, ಅದರ ಉಪಸ್ಥಿತಿ, ಪಾರಂಪರಿಕ ಪ್ರಾದೇಶಿಕ ಪಕ್ಷಗಳಿಗೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವಂಥ ಅನಿವಾರ್ಯತೆ ಸೃಷ್ಟಿಸಿತು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಅಪ್ನಿ ಪಕ್ಷದ ಕಾರ್ಯಕರ್ತನೊಬ್ಬರನ್ನು ಉಗ್ರಗಾಮಿಗಳು ಗುರುವಾರ ಸಾಯಂಕಾಲ ಗುಂಡಿಟ್ಟು ಕೊಂದಿದ್ದು ಕಳೆದ 10 ದಿನಗಳಲ್ಲಿ ಭಯೋತ್ಪಾದಕರ ಅಟ್ಟಹಾಸ ಮೆರೆದಿರುವ ನಾಲ್ಕನೇ ಘಟನೆ ಇದಾಗಿದೆ. ಗುಲಾಮ್ ಹಸನ್ ಲೋನಿ ಹೆಸರಿನ ವ್ಯಕ್ತಿಯನ್ನು ದಕ್ಷಿಣ ಕಾಶ್ಮೀರದ ದೇವ್ಸಾರ್ ಎಂಬಲ್ಲಿ ಇಂದು ಸಾಯಂಕಾಲ ಕೊಲ್ಲಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜೆ&ಕೆ ಅಪ್ನಿ ಪಾರ್ಟಿಯ ಮುಖ್ಯಸ್ಥ ಅಲ್ತಾಫ್ ಬುಖಾರಿ ಅವರು ಹತ್ಯೆಯನ್ನು ಖಂಡಿಸಿದ್ದಾರೆ. ಮಾರ್ಚ್ 2020 ರಲ್ಲಿ ಅಪ್ನಿ ಪಾರ್ಟಿ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಆ ಪಕ್ಷದ ಕಾರ್ಯಕರ್ತನೊಬ್ಬನನ್ನು ಉಗ್ರಗಾಮಿಗಳು ಕೊಂದಿದ್ದಾರೆ. ಜಮ್ಮು ಮತ್ತು ಕಾಶ್ಮೀರನಲ್ಲಿ ಪಾರಂಪರಿಕ ಪ್ರಾದೇಶಿಕ ಮುಖ್ಯವಾಹಿನಿ ಪಕ್ಷಗಳಿಗೆ ಒಂದು ಪರ್ಯಾಯ ರಾಜಕೀಯ ಸಂಘಟನೆಯಾಗಿ ಜೆ&ಕೆ ಅಪ್ನಿ ಪಾರ್ಟಿಯನ್ನು ಕೇಂದ್ರದ ಅಘೋಷಿತ ಬೆಂಬಲದೊಂದಿಗೆ ಸ್ಥಾಪಿಸಲಾಗಿದೆ. ಪಕ್ಷದ ಅಧ್ಯಕ್ಷ ಅಲ್ತಾಫ್ ಬುಖಾರಿ ಮೊದಲು ಮಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿಯ ಸದಸ್ಯರಾಗಿದ್ದರು.
ಅಪ್ನಿ ಪಾರ್ಟಿ ಆ ಭಾಗದಲ್ಲಿ ಒಂದು ಶಕ್ತಿಯಾಗಿ ಗುರುತಿಸಿಕೊಳ್ಳಲು ವಿಫಲವಾಗಿದ್ದರೂ, ಅದರ ಉಪಸ್ಥಿತಿ, ಪಾರಂಪರಿಕ ಪ್ರಾದೇಶಿಕ ಪಕ್ಷಗಳಿಗೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸುವಂಥ ಅನಿವಾರ್ಯತೆ ಸೃಷ್ಟಿಸಿತು. ಆಗಸ್ಟ್ 5, 2019ರಲ್ಲಿ ಕೇಂದ್ರ ಸರ್ಕಾರ 370 ನೇ ವಿಧಿ ರದ್ದುಗೊಳಿಸಿದ್ದನ್ನು ನಖಶಿಖಾಂತ ವಿರೋಧಿಸಿದ್ದ ಪ್ರಾದೇಶಿಕ ಪಕ್ಷಗಳು ಸ್ಥಳೀಯ ಚುನಾವಣೆಗಳಲ್ಲಿ ಬಾಗವಹಿಸುವ ಮೂಲಕ ರಾಜ್ಯದಲ್ಲಿ ರಾಜಕೀಯ ಮನ್ವಂತರವನ್ನು ಅಂಗೀಕರಿಸಿದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಅಪ್ನಿ ಪಾರ್ಟಿ ಕಾರ್ಯಕರ್ತನ ಹತ್ಯೆ ಮುಖ್ಯವಾಹಿನಿ ರಾಜಕೀಯ ಕಾರ್ಯಕರ್ತರಲ್ಲಿ ಆಘಾತವನ್ನುಂಟು ಮಾಡಿದೆ. ಎರಡು ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ್ನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದ್ದ ಪ್ರಾದೇಶಿಕ ಪಕ್ಷಗಳು ಪುನಃ ಚಿಗಿತುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದ್ದ ಸಮಯದಲ್ಲಿ ಭಯೋತ್ಪಾದಕರು ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ಹತ್ಯೆಗೈಯುತ್ತಿರುವುದು ಅವರಲ್ಲಿ ಕಳವಳ ಮೂಡಿಸಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರ ಮೇಲೆ ಉಗ್ರಗಾಮಿಗಳಿಂದ ನಡೆಯುತ್ತಿರುವ ದಾಳಿಗಳಲ್ಲಿ ಹೆಚ್ಚಳ ಕಂಡುಬಂದಿದೆ. ಕಾಶ್ಮೀರ್ನಲ್ಲಿ ಬಿಜೆಪಿಯ ಪ್ರಭಾವ ಜಾಸ್ತಿಯಿಲ್ಲ. ತನ್ನ ಪಕ್ಷದ 23 ಕಾರ್ಯಕರ್ತರನ್ನು ಭಯೋತ್ಪಾದಕರು ಕಳೆದ ಎರಡು ವರ್ಷಗಳಲ್ಲಿ ಕೊಂದಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಬಳಿ 3 ಡ್ರೋನ್ಗಳ ಅನುಮಾನಾಸ್ಪದ ಹಾರಾಟ; ದಾಳಿ ಮಾಡುತ್ತಿದ್ದಂತೆಯೇ ಪಾಕಿಸ್ತಾನದತ್ತ ಪಯಣ