ಕೊರೊನಾ ಲಸಿಕೆ ಬದಲು ರೇಬಿಸ್ ಇಂಜೆಕ್ಷನ್ ನೀಡಿದ ಆಸ್ಪತ್ರೆ ಸಿಬ್ಬಂದಿ!; ವೈದ್ಯೆ ಅಮಾನತು
ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ಮೆಡಿಕಲ್ ಸೆಂಟರ್ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ನಿರ್ಲಕ್ಷ್ಯ ವಹಿಸಿದ ವೈದ್ಯ ಹಾಗೂ ನರ್ಸ್ ಅನ್ನು ಅಮಾನತು ಮಾಡಲಾಗಿದೆ.
ಥಾಣೆ: ಭಾರತದಲ್ಲಿ ಉಚಿತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದ ಬಹುತೇಕ ಜನರು ಈಗಾಗಲೇ ಲಸಿಕೆ ಪಡೆದಿದ್ದಾರೆ. ಆದರೆ, ಮಹಾರಾಷ್ಟ್ರದ ಥಾಣೆಯಲ್ಲಿ ವ್ಯಕ್ತಿಯೋರ್ವನಿಗೆ ಕೊವಿಡ್ ಲಸಿಕೆ ಬದಲು ಆ್ಯಂಟಿ ರೇಬಿಸ್ ಲಸಿಕೆ ನೀಡಲಾಗಿದೆ. ಇದರಿಂದ ಆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ಗಳನ್ನು ಅಮಾನತು ಮಾಡಲಾಗಿದೆ.
ಮಹಾರಾಷ್ಟ್ರದ ಥಾಣೆಯ ಜಿಲ್ಲೆಯ ಮೆಡಿಕಲ್ ಸೆಂಟರ್ನಲ್ಲಿ ಈ ಎಡವಟ್ಟು ನಡೆದಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಆ್ಯಂಟಿ ರೇಬಿಸ್ ಲಸಿಕೆ ನೀಡಿರುವ ವಿಷಯ ಗೊತ್ತಾಗುತ್ತಿದ್ದಂತೆ ನಿರ್ಲಕ್ಷ್ಯ ವಹಿಸಿದ ವೈದ್ಯ ಹಾಗೂ ನರ್ಸ್ ಅನ್ನು ಅಮಾನತು ಮಾಡಲಾಗಿದೆ. ಇಲ್ಲಿನ ಸ್ಥಳೀಯರಾದ ರಾಜಕುಮಾರ್ ಯಾದವ್ ಕಲ್ವಾದಲ್ಲಿರುವ ಸರ್ಕಾರಿ ಮೆಡಿಕಲ್ ಸೆಂಟರ್ನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ತೆರಳಿದ್ದರು. ಆದರೆ, ಅಲ್ಲಿ ಆ್ಯಂಟಿ ರೇಬಿಸ್ ಲಸಿಕೆಯ ಕ್ಯೂನಲ್ಲಿ ನಿಂತ ಅವರಿಗೆ ವೈದ್ಯರು ಯಾವ ಪ್ರಶ್ನೆಯನ್ನೂ ಕೇಳದೆ ಆ್ಯಂಟಿ ರೇಬಿಸ್ ಲಸಿಕೆ ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡ ಬಳಿಕ ಎರಡನೇ ಲಸಿಕೆಗೆ ಯಾವಾಗ ಬರಬೇಕೆಂದು ಕೇಳಿದಾಗ ಅಲ್ಲಿನ ಸಿಬ್ಬಂದಿ ಆತನಿಗೆ ನೀಡಿದ್ದು ರೇಬಿಸ್ ಲಸಿಕೆ ಎಂದು ತಿಳಿಸಿದ್ದಾರೆ. ಇದರಿಂದ ಆಘಾತಗೊಂಡ ಆ ವ್ಯಕ್ತಿ ಬೇರೆ ವೈದ್ಯರ ಬಳಿ ಹೋಗಿ ವಿಷಯ ತಿಳಿಸಿದ್ದಾರೆ. ಆ ವ್ಯಕ್ತಿ ಆರೋಗ್ಯದಿಂದಿದ್ದು, ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ. ಆದರೆ, ಯಾವ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದಾರೆ ಎಂಬುದನ್ನು ವಿಚಾರಿಸದೆ ನಿರ್ಲಕ್ಷ್ಯ ತೋರಿದ್ದಕ್ಕೆ ವೈದ್ಯರನ್ನು ಅಮಾನತು ಮಾಡಲಾಗಿದೆ.
ತನಗೆ ತಪ್ಪು ಲಸಿಕೆ ನೀಡಿದ ಬಗ್ಗೆ ರಾಜಕುಮಾರ್ ಯಾದವ್ ಆಸ್ಪತ್ರೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಜೆಕ್ಷನ್ ನೀಡಿದ ವೈದ್ಯೆ ಮತ್ತು ನರ್ಸ್ ಅನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಮೈಲಿಗಲ್ಲು ಸಾಧನೆ ಸನಿಹದಲ್ಲಿ ಭಾರತ: ದೇಶದಲ್ಲಿ ಕೊವಿಡ್ ವಿರುದ್ಧ ಸಂಪೂರ್ಣ ಲಸಿಕೆ ಪಡೆದವರು ಸುಮಾರು ಶೇ 25