ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ವಾಹನಗಳು ಹರಿದು, ಹಿಂಸಾಚಾರ (Lakhimpur Kheri Violence:)ನಡೆದ ಪ್ರಕರಣವನ್ನು ಸುಮೊಟೊ ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್ (Supreme Court), ಲಖಿಂಪುರ ಖೇರಿಯಲ್ಲಿ ರೈತರು ಮೃತಪಟ್ಟಿದ್ದಾರೆ. ಅಷ್ಟು ದೊಡ್ಡ ಮಟ್ಟದ ಹಿಂಸಾಚಾರ ನಡೆದಿದೆ. ಆದರೆ ಈ ಬಗ್ಗೆ ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ಕ್ರಮ ತೃಪ್ತಿದಾಯಕವಾಗಿಲ್ಲ ಎಂದು ಹೇಳಿದೆ. ಇನ್ನು ಉತ್ತರಪ್ರದೇಶ ಸರ್ಕಾರ (Uttar Pradesh Government)ದ ಪರ ವಾದ ಮಂಡಿಸಿ, ಘಟನೆಯ ಸ್ಥಿತಿ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಹಿರಿಯ ವಕೀಲ ಹರೀಶ್ ಸಾಲ್ವೆ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾಗೆ ನೋಟಿಸ್ ನೀಡಲಾಗಿದೆ. ಅವರು ನಾಳೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೊಮ್ಮೆ ನಾಳೆ ಬೆಳಗ್ಗೆ ಅವರು ಬಾರದೇ ಇದ್ದರೆ, ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಹರೀಶ್ ಸಾಲ್ವೆ ಹೇಳಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ವರು ರೈತರಾಗಿದ್ದಾರೆ. ಈ ಪ್ರಕರಣವನ್ನು ಸುಮೊಟೊ ವಿಚಾರಣೆಗೆ ಸುಪ್ರೀಂಕೋರ್ಟ್ ಕೈಗೆತ್ತಿಕೊಂಡಿದೆ. ನಿನ್ನೆಯ ವಿಚಾರಣೆ ವೇಳೆ, ನಾಳೆಯೊಳಗೆ (ಅಕ್ಟೋಬರ್ 8) ಘಟನೆಯ ಸಂಪೂರ್ಣ ಸ್ಥಿತಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಅದರಲ್ಲಿ ಆರೋಪಿಗಳ ಬಗ್ಗೆ ಉಲ್ಲೇಖವಿರಬೇಕು ಎಂದೂ ತಿಳಿಸಿದರು. ವಿಚಾರಣೆಯನ್ನು ಇವತ್ತಿಗೆ ಮುಂದೂಡಿತ್ತು. ಹಾಗೇ, ಇಂದು ವಿಚಾರಣೆ ಶುರು ಮಾಡಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ, ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಯುಪಿ ಸರ್ಕಾರ ತೆಗೆದುಕೊಂಡ ಕ್ರಮ ಸರಿಯಾಗಿಲ್ಲ. ಆರೋಪಿಗಳನ್ನು ನೀವು ನಡೆಸಿಕೊಳ್ಳುವ ರೀತಿ ಇದೇನಾ? ಇನ್ನೂ ಬಂಧನವಾಗಿಲ್ಲ ಯಾಕೆ? ಎಂದು ಪ್ರಶ್ನಿಸಿದೆ. ಅದಕ್ಕೆ ಪ್ರತಿಯಾಗಿ ಹರೀಶ್ ಸಾಲ್ವೆ, ಇಲ್ಲ ಆಶೀಶ್ ಮಿಶ್ರಾರಿಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಿಜೆಐ, ಎಲ್ಲ ಕೊಲೆ ಕೇಸ್ಗಳಲ್ಲೂ ಹೀಗೆ ಆರೋಪಿಗಳಿಗೆ ಸಮನ್ಸ್ ನೀಡುತ್ತೀರಾ? ಈ ಪ್ರಕರಣದಲ್ಲೇಕೆ ಹೀಗೆ ಸಮನ್ಸ್ ಕೊಡಲಾಗಿದೆ. ಉಳಿದ ಕೇಸ್ಗಳ ಆರೋಪಿಗಳಂತೆ ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ನಂತರ ಹರೀಶ್ ಸಾಲ್ವೆ, ನಾಳೆ ಬೆಳಗ್ಗೆ 11ಗಂಟೆಗೆ ಆಶೀಶ್ ಮಿಶ್ರಾ ಖಂಡಿತವಾಗಿಯೂ ಎಸ್ಐಟಿ ಎದುರು ಬರುತ್ತಾರೆ. ಇಲ್ಲದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಾನು ಈ ಬಗ್ಗೆ ರಾಜ್ಯ ಸರ್ಕಾರದ ಪೊಲೀಸ್ ಉನ್ನತ ಅಧಿಕಾರಿಗಳೊಟ್ಟಿಗೆ ಮಾತನಾಡುತ್ತೇನೆ. ಆರೋಪಿ ವಿರುದ್ಧದ ಸಾಕ್ಷಿ ಸಂರಕ್ಷಿಸುವ ಕೆಲಸವನ್ನೂ ಮಾಡಲಾಗುವುದು. ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪರ್ಯಾಯ ತನಿಖಾ ಏಜೆನ್ಸಿ ಮೂಲಕ ತನಿಖೆ ನಡೆಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೋರ್ಟ್ಗೆ ತಿಳಿಸಿದ್ದಾರೆ.
ಎಸ್ಐಟಿ ರಚನೆ ಬಗ್ಗೆಯೂ ಕೋರ್ಟ್ ಅಸಮಾಧಾನ
ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉತ್ತರಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮೌಖಿಕವಾಗಿ ಸೂಚಿಸಿದೆ. ಹಾಗೇ, ಘಟನೆಯ ತನಿಖೆ ನಡೆಸಲು ವಿಶೇಷ ತನಿಖಾತಂಡ (SIT) ರಚಿಸಿದ್ದರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಈ ಎಸ್ಐಟಿಯಲ್ಲಿ ಇರುವವರೆಲ್ಲ ಸ್ಥಳೀಯ ಅಧಿಕಾರಿಗಳೇ ಆಗಿದ್ದಾರೆ ಎಂಬುದನ್ನು ಒತ್ತಿ ಹೇಳಿದೆ. ಹಾಗೇ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ರಾಜ್ಯಸರ್ಕಾರ ಯೋಚನೆ ನಡೆಸಿದೆಯಾ ಎಂಬ ಪ್ರಶ್ನೆಯನ್ನೂ ಕೇಳಿದೆ. ಇನ್ನು ಮುಂದಿನ ವಿಚಾರಣೆಯನ್ನು ದಸರಾ ನಂತರ, ಅಕ್ಟೋಬರ್ 20ರಂದು ನಡೆಸುವುದಾಗಿ ಹೇಳಿದೆ.
ಇದನ್ನೂ ಓದಿ: IMPS Transaction Limit: ಐಎಂಪಿಎಸ್ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್ಬಿಐ
Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ
Published On - 1:40 pm, Fri, 8 October 21