IMPS Transaction Limit: ಐಎಂಪಿಎಸ್ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಿದ ಆರ್‌ಬಿಐ
RBI Repo Rate: ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾರಿ ಕೂಡ ರೆಪೋ ರೇಟ್ ಮತ್ತು ರಿವರ್ಸ್ ರೆಪೋ ರೇಟ್ನಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ. ರೆಪೋ ರೇಟ್ ಶೇ.4ರಷ್ಟಿದೆ.
ಗ್ರಾಹಕರ ಅನುಕೂಲಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಐಎಂಪಿಎಸ್ (ತಕ್ಷಣದ ಪಾವತಿ ಸೇವೆ-Immediate Payment Service IMPS)ಯ ಮಿತಿಯನ್ನು 2 ಲಕ್ಷ ರೂ.ನಿಂದ 5 ಲಕ್ಷ ರೂಪಾಯಿಗೆ ಏರಿಸಿದೆ. ದೇಶೀಯ ಹಣ ವರ್ಗಾವಣೆಗಾಗಿ ವಿವಿಧ ಚಾನಲ್ಗಳ ಮೂಲಕ 24×7 ಕಾಲವೂ ಈ ತಕ್ಷಣದ ಪಾವತಿ ಸೇವೆ ಕಾರ್ಯನಿರ್ವಹಿಸುತ್ತದೆ. ಐಎಂಪಿಎಸ್ನ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವ ಸಲುವಾಗಿ, ಇಷ್ಟು ದಿನ 2 ಲಕ್ಷ ರೂಪಾಯಿ ಇದ್ದ ಮಿತಿಯನ್ನು 5 ಲಕ್ಷ ರೂ.ಗೆ ಏರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ರಿಯಲ್ ಟೈಂ ಗ್ರಾಸ್ ಸೆಟ್ಲ್ಮೆಂಟ್ನೊಂದಿಗೆ ಇದೀಗ 24 ಗಂಟೆಯೂ ಕಾರ್ಯನಡೆಯುವುದರಿಂದ ಐಎಂಪಿಎಸ್ನ ಪಾವತಿ ಆವರ್ತ ಕೂಡ ಹೆಚ್ಚಾಗಿದೆ. ದೇಶೀಯವಾದ ಪಾವತಿ ವಹಿವಾಟಿನಲ್ಲಿ ಐಎಂಪಿಎಸ್ನ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅದರ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದರಿಂದಾಗಿ ಡಿಜಿಟಲ್ ಪಾವತಿಯಲ್ಲಿ ಇನ್ನಷ್ಟು ಹೆಚ್ಚಳವಾಗುತ್ತದೆ. ಹಾಗೇ, ಡಿಜಿಟಲ್ ಪೇಮೆಂಟ್ ಮಾಡುವ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವೂ ದೊರಕಿದಂತಾಗುತ್ತದೆ ಎಂದು ಆರ್‌ಬಿಐ ಹೇಳಿದೆ.
ಭಾರತದ ರಾಷ್ಟ್ರೀಯ ಪಾವತಿಗಳ ನಿಗಮದ ಪ್ರಮುಖ ಪಾವತಿ ವ್ಯವಸ್ಥೆಯಾಗಿರುವ ತಕ್ಷಣದ ಪಾವತಿ ಸೇವೆ (ಐಎಂಪಿಎಸ್) 24×7 ಗಳ ಕಾಲ ದೇಶೀಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಆ್ಯಪ್ಗಳು, ವಿವಿಧ ಬ್ಯಾಂಕ್ಗಳ ಶಾಖೆಗಳು, ಎಟಿಎಂ, ಎಸ್ಎಂಎಸ್, ಐವಿಆರ್ಎಸ್ ಮೂಲಕ ತಕ್ಷಣದ ಪಾವತಿ ಸೇವೆ ಗ್ರಾಹಕರಿಗೆ ಲಭ್ಯವಿದೆ. ಆರ್‌ಬಿಐ 2014ರಲ್ಲಿ ಐಎಂಪಿಎಸ್ ಮಿತಿಯನ್ನು 2 ಲಕ್ಷ ರೂಪಾಯಿಗೆ ಮಿತಿಗೊಳಿಸಿತ್ತು. ಅದರಲ್ಲೂ ಎಸ್ಎಂಎಸ್ ಮತ್ತು ಐವಿಆರ್ಎಸ್ಗೆ ಇದು ಅನ್ವಯ ಆಗುತ್ತಿರಲಿಲ್ಲ. ಈಗಲೂ ಸಹ ಎಸ್ಎಂಎಸ್ ಮತ್ತು ಐವಿಆರ್ಎಸ್ ಮಿತಿ ಪ್ರತಿ ವಹಿವಾಟಿಗೆ 5000 ರೂಪಾಯಿ ಇದೆ.
ರೆಪೋ ದರಲ್ಲಿ ಇಲ್ಲ ಬದಲಾವಣೆ ಹಾಗೇ, ಈ ಬಾರಿ ಕೂಡ ರೆಪೋ ರೇಟ್ ಮತ್ತು ರಿವರ್ಸ್ ರೆಪೋ ರೇಟ್ನಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಇಂದೂ ಕೂಡ ರೆಪೊ ದರವನ್ನು ಶೇ.4 ಮತ್ತು ರಿವರ್ಸ್ ರೆಪೊ ದರವನ್ನು ಶೇ.3.35ರಲ್ಲಿಯೇ ಇರಿಸಿದೆ. ಇದು ಸತತ 8ನೇ ಬಾರಿಗೆ ಯಾವುದೇ ಬದಲಾವಣೆ ಕಾಣದೆ ಯಥಾ ಸ್ಥಿತಿಯಲ್ಲಿರುವ ರೆಪೊ ದರವಾಗಿದೆ.
ಇದನ್ನೂ ಓದಿ: Mumbai Indians: ಮುಂಬೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಂದಿನ ಪಂದ್ಯದಲ್ಲಿ ರೋಹಿತ್ ಪಡೆ ಹೀಗೆ ಮಾಡಬೇಕು
IT Raid on BY Vijayendra classmate: ಯಡಿಯೂರಪ್ಪ ಆಪ್ತನ ಬಳಿಕ ವಿಜಯೇಂದ್ರ ಆಪ್ತ ಗೆಳೆಯನ ಮನೆ ಮೇಲೆ ಐಟಿ ದಾಳಿ
Published On - 11:19 am, Fri, 8 October 21