ನವದೆಹಲಿ: ಬಾಲಿವುಡ್ನ ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ. ಕೆಲವೆಡೆ ಸಿನಿಮಾ ನೋಡಲು ಸರ್ಕಾರಿ ಉದ್ಯೋಗಿಳಿಗೆ ರಜೆ ಕೂಡ ನೀಡಲಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ಟೀಕೆಯೂ ವ್ಯಕ್ತವಾಗಿದೆ. ಎನ್‌ಡಿಎ ಸರ್ಕಾರವು ಬಿಹಾರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು 1980ರ ದಶಕದ ಉತ್ತರಾರ್ಧದಲ್ಲಿ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದ ಈ ಸಿನಿಮಾ ಕಾಶ್ಮೀರದ ಬ್ರಾಹ್ಮಣರಲ್ಲಿ ಭಯ ಹುಟ್ಟಿಸಲು ಮಾಡಿರುವ ಪಿತೂರಿಯಾಗಿರಬಹುದು ಎಂದು ಆರೋಪಿಸಿದ್ದಾರೆ.
ಈ ಸಿನಿಮಾ ಜಮ್ಮು ಕಾಶ್ಮೀರದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಅವರಲ್ಲಿ ಭಯದ ಭಾವನೆಯನ್ನು ಹುಟ್ಟುಹಾಕಲು ಭಯೋತ್ಪಾದಕ ಸಂಘಟನೆಗಳು ಮಾಡಿದ ಪಿತೂರಿಯಾಗಿದೆ. ಅಲ್ಲದೆ, ಉಗ್ರ ಸಂಘಟನೆಗಳು ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ಮಾಪಕರ ನಡುವಿನ ಸಂಪರ್ಕದ ಬಗ್ಗೆ ಸುಳಿವು ನೀಡಿದ ಮಾಂಝಿ “ಕಾಶ್ಮೀರ ಫೈಲ್ಸ್ ಸಿನಿಮಾ ಕಾಶ್ಮೀರಿ ಬ್ರಾಹ್ಮಣರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಪಿತೂರಿಯೂ ಆಗಿರಬಹುದು. ಇದರಿಂದ ಅವರು ಮತ್ತೆ ಕಾಶ್ಮೀರಕ್ಕೆ ಹೋಗಬಾರದು ಎಂಬ ಉದ್ದೇಶವಿರಬಹುದು” ಎಂದಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಮತ್ತು ಸಿನಿಮಾದ ನಿರ್ಮಾಪಕರ ನಡುವೆ ಸಂಪರ್ಕ ಇರಬಹುದು ಎಂದು ಅವರು ಹೇಳಿದ್ದಾರೆ. “ದಿ ಕಾಶ್ಮೀರ್ ಫೈಲ್ಸ್” ಚಿತ್ರತಂಡ ಮತ್ತು ಅವರ ಸಂಭವನೀಯ ಭಯೋತ್ಪಾದಕ ಸಂಪರ್ಕದ ಕುರಿತೂ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕಾಶ್ಮೀರಿ ಪಂಡಿತರ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಈ ಸಿನಿಮಾವನ್ನು ಶ್ಲಾಘಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಶ್ಲಾಘಿಸಿದ್ದಾರೆ. ಜನರನ್ನು ಜಾಗೃತಗೊಳಿಸಲು ಕಾಶ್ಮೀರದ ಕುರಿತು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ. ಹಾಗೇ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ವೈ ಕೆಟಗರಿಯ ಭದ್ರತೆ ಒದಗಿಸಲಾಗಿದೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ
ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ದಿ ಲಖಿಂಪುರ್ ಫೈಲ್ಸ್ ಸಿನಿಮಾವೂ ಬರಲಿ: ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್