ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಂತೆ ದಿ ಲಖಿಂಪುರ್ ಫೈಲ್ಸ್ ಸಿನಿಮಾವೂ ಬರಲಿ: ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್
ಆದರೆ ಸಮಾಜವಾದಿ ಪಕ್ಷ ಸೇರಿ ಇತರ ಪ್ರತಿಪಕ್ಷಗಳು ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿಯನ್ನು ಟೀಕಿಸುತ್ತಿವೆ. ಇಷ್ಟೆಲ್ಲ ಆದರೂ ಲಖಿಂಪುರ ಖೇರಿಯಲ್ಲಿ ಇರುವ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆದ್ದಿದ್ದು, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸದ್ಯ ದೇಶದೆಲ್ಲೆಡೆ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಚರ್ಚೆ ನಡೆಯುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಭೀಕರತೆಯನ್ನು ತೆರೆದಿಟ್ಟ ಚಿತ್ರ ಇದು. ಯಾವ ಸಿನಿಮಾವೂ ಮಾಡದಷ್ಟು ದಾಖಲೆಗಳನ್ನು ಇದು ಮಾಡುತ್ತಿದೆ. ಕೆಲಕ್ಷನ್ ಬದಿಗಿರಲಿ, ಈ ಸಿನಿಮಾದ ಪ್ರಚಾರವನ್ನು ಸ್ವತಃ ಜನರೇ ಮಾಡುತ್ತಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿ ಹಲವು ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಜನಸಾಮಾನ್ಯರು ಅನೇಕರು ಬರಿ ಒಂದು ಬಾರಿಯಲ್ಲ, ಎರಡು-ಮೂರು ಬಾರಿ ಸಿನಿಮಾ ನೋಡುತ್ತಿದ್ದಾರೆ. ಈ ಮಧ್ಯೆ ಒಂದಷ್ಟು ಜನರು ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ವ್ಯಂಗ್ಯ, ಅದೇನೂ ಮಹಾ ಸಿನಿಮಾ ಎಂಬ ಅರ್ಥದ ಮಾತುಗಳನ್ನೂ ಆಡುತ್ತಿದ್ದಾರೆ.
ಇದೆಲ್ಲದರ ಮಧ್ಯೆ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿ, ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಲು ಸಾಧ್ಯ ಎಂದಾದ ಮೇಲೆ, ಉತ್ತರ ಪ್ರದೇಶದ ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ದಿ ಲಖಿಂಪುರ ಫೈಲ್ಸ್ ಎಂಬ ಚಲನಚಿತ್ರವನ್ನೂ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಅವರಿಂದು ಸೀತಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಹೀಗೊಂದು ಪ್ರಶ್ನೆ ಮುಂದಿಟ್ಟಿದ್ದಾರೆ. ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕತೆಯನ್ನು ತೋರಿಸಲು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ್ದಾರೆ. ಹಾಗೇ, ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಜೀಪು ಹತ್ತಿಸಿ, ಅವರನ್ನು ಕೊಲ್ಲಲಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆಯೂ ಒಂದು ಸಿನಿಮಾವನ್ನು ಯಾಕೆ ಮಾಡಬಾರದು ಎಂದು ಕೇಳಿದ್ದಾರೆ.
ಅಕ್ಟೋಬರ್ 3ರಂದು ಲಖಿಂಪುರ ಖೇರಿಗೆ ಬಿಜೆಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಕೊಟ್ಟಿದ್ದರು. ಈ ವೇಳೆ ಮೌನವಾಗಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದಿತ್ತು. ಈ ಘಟನೆ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪತ್ರಕರ್ತನೊಬ್ಬ, ನಾಲ್ವರು ರೈತರು, ಮೂವರು ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದರು. ರೈತರಿಗೆ ಡಿಕ್ಕಿ ಹೊಡೆದ ಕಾರಿನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇದ್ದಿದ್ದನ್ನು ಕಣ್ಣಾರೆ ನೋಡಿದ್ದೇವೆ. ಇವರೆಲ್ಲ ಕಾರನ್ನು ಹರಿಸಿದ್ದಲ್ಲದೆ ಗುಂಡಿನ ದಾಳಿಯನ್ನೂ ನಡೆಸಿದ್ದಾರೆ ಎಂದು ಸ್ಥಳದಲ್ಲಿದ್ದ ರೈತರು ಹೇಳಿದ್ದರು. ವೈರಲ್ ಆದ ವಿಡಿಯೋದಲ್ಲಿ ಒಬ್ಬರು ಕಾರಿನಿಂದ ಇಳಿದು ಓಡಿದ ದೃಶ್ಯ ಕಂಡುಬಂದಿತ್ತು. ಅದಯ ಆಶಿಶ್ ಮಿಶ್ರಾ ಎಂದೇ ರೈತರು ಪ್ರತಿಪಾದಿಸಿದ್ದರು. ಬಳಿಕ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಎಸ್ಐಟಿಯನ್ನೂ ರಚಿಸಿತ್ತು. ಅದೆಲ್ಲ ಆದ ಬಳಿಕ ಆಶಿಶ್ ಮಿಶ್ರಾ ಬಂಧನವಾಗಿ, ಇದೀಗ ಅವರು ಜಾಮಿನಿನ ಮೇಲೆ ಹೊರಗಡೆ ಬಂದಿದ್ದಾರೆ.
ಆದರೆ ಸಮಾಜವಾದಿ ಪಕ್ಷ ಸೇರಿ ಇತರ ಪ್ರತಿಪಕ್ಷಗಳು ಘಟನೆಗೆ ಸಂಬಂಧಪಟ್ಟಂತೆ ಬಿಜೆಪಿಯನ್ನು ಟೀಕಿಸುತ್ತಿವೆ. ಇಷ್ಟೆಲ್ಲ ಆದರೂ ಲಖಿಂಪುರ ಖೇರಿಯಲ್ಲಿ ಇರುವ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಬಿಜೆಪಿಯೇ ಗೆದ್ದಿದ್ದು, ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಈಗ ಅಖಿಲೇಶ್ ಯಾದವ್ ದಿ ಕಾಶ್ಮೀರ್ ಫೈಲ್ಸ್ ಉಲ್ಲೇಖಿಸಿ, ಲಖಿಂಪುರ ಫೈಲ್ಸ್ ಕೂಡ ಸಿನಿಮಾವಾಗಲಿ ಎಂದಿದ್ದಾರೆ. ಇದೇ ವೇಳೆ ಚುನಾವಣಾ ಫಲಿತಾಂಶದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ ಅವರು, ನಾವು ನೈತಿಕವಾಗಿ ಗೆದ್ದಿದ್ದೇವೆ. ಭವಿಷ್ಯದಲ್ಲಿ ಬಿಜೆಪಿ ಸೀಟ್ಗಳು ಕಡಿಮೆಯಾಗಲಿವೆ ಎಂದಿದ್ದಾರೆ.
ಇದನ್ನೂ ಓದಿ: ಎಸಿಬಿ ದಾಳಿಗೊಳಗಾಗಿದ್ದ ಬಿಡಿಎ ಅಧಿಕಾರಿಗಳನ್ನು ಆರೋಪ ಮುಕ್ತ ಮಾಡುವುದಾಗಿ 10 ಲಕ್ಷ ರೂ ವಂಚನೆ, ಮೂವರು ಅರೆಸ್ಟ್