ಭಾರತ ಮಾತೆ ಮತ್ತು ಭೂಮಿ ದೇವಿ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿ 2021ರ ಜುಲೈನಲ್ಲಿ ಜೈಲು ಸೇರಿದ್ದ ಕ್ಯಾಥೋಲಿಕ್ ಪಂಥದ ಧರ್ಮಗುರು ಪಿ.ಜಾರ್ಜ್ ಪೊನ್ನಯ್ಯ ವಿರುದ್ಧ ದಾಖಲಾಗಿರುವ ಎಫ್ಐಆರ್ನ್ನು ರದ್ದುಗೊಳಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿದೆ. ಭಾರತ ಮಾತೆ ಮತ್ತು ಭೂ ದೇವಿಗೆ ಅವಮಾನ ಮಾಡುವುದು, ಐಪಿಸಿ ಸೆಕ್ಷನ್ 195 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಅಪರಾಧ ಸಾಲಿಗೇ ಸೇರುತ್ತದೆ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ತಿಳಿಸಿದ್ದಾರೆ. ಭೂಮಿತಾಯಿಯ ಮೇಲಿನ ಗೌರವದಿಂದ ಚಪ್ಪಲಿ ಧರಿಸದೆ, ಬರಿಗಾಲಿನಲ್ಲಿ ನಡೆಯುವವರನ್ನು ಕ್ರೈಸ್ತ ಪಾದ್ರಿ ತಮ್ಮ ಭಾಷಣದಲ್ಲಿ ಅವಮಾನಿಸಿದ್ದಾರೆ. ಈ ಭೂಮಿಯನ್ನು ಹಿಂದುಗಳು ದೇವಿ ಎಂದು ಆರಾಧಿಸುತ್ತಾರೆ. ಹಿಂದುಗಳ ಅಂಥ ನಂಬಿಕೆ ಮೇಲೆ ದಾಳಿ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ತಮ್ಮ ತೀರ್ಪು ಓದುವಾಗ ಹೇಳಿದ್ದಾರೆ.
ಜಾರ್ಜ್ ಪೊನ್ನಯ್ಯ ಕಳೆದ ವರ್ಷ ಜುಲೈನಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿಆಯೋಜಿಸಲಾಗಿದ್ದ ಜೆಸ್ಯೂಟ್ ಪಾದ್ರಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಅವರ ಸ್ಮಾರಕ ಸಭೆಯಲ್ಲಿ ಭಾಷಣ ಮಾಡುವಾಗ ಹಿಂದುಗಳ ಭಾವನೆಗೆ ಧಕ್ಕೆಯಾಗುವಂಥ ಮಾತುಗಳನ್ನಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ಅರುಮನೈ ಪೊಲೀಸರು ಕ್ಯಾಥೋಲಿಕ್ ಪಾದ್ರಿ ವಿರುದ್ಧ ಐಪಿಸಿಯ ಒಟ್ಟು ಆರು ಸೆಕ್ಷನ್ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅದರಲ್ಲೂ ಮುಖ್ಯವಾಗಿ ಸೆಕ್ಷನ್ 295 (ಎ) (ಧಾರ್ಮಿಕ ಭಾವನೆಗಳಿಗೆ ನೋವು) ಮತ್ತು 1897ರ ಸಾಂಕ್ರಾಮಿಕ ರೋಗ ಕಾಯ್ದೆಯ ಸೆಕ್ಷನ್ 3 (ನಿಯಮಗಳನ್ನು ಪಾಲಿಸುತ್ತಿಲ್ಲ) ರಡಿ ಕೂಡ ಪ್ರಕರಣ ದಾಖಲಿಸಿಕೊಂಡಿದ್ದರು. ಹಾಗೇ, ಜೈಲಿಗೂ ಹಾಕಿದ್ದಾರೆ. ಅದರ ಬೆನ್ನಲ್ಲೇ ಕ್ಯಾಥೋಲಿಕ್ ಪಂಥದ ಪಾದ್ರಿ ಎಫ್ಐಆರ್ ರದ್ದುಗೊಳಿಸುವಂತೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅಂದು ಭಾಷಣ ಮಾಡಿದ ಕ್ಯಾಥೋಲಿಕ್ ಪಂಥದ ಪಾದ್ರಿ, ತಮಿಳುನಾಡಿನ ಬಿಜೆಪಿ ಶಾಸಕರಾದ ಎಂ.ಆರ್.ಗಾಂಧಿ ಬರಿಗಾಲಿನಲ್ಲಿ ನಡೆಯುತ್ತಾರೆ. ಆದರೆ ನಾವು ಕ್ರಿಶ್ಚಿಯನ್ನರು ಹಾಗಲ್ಲ. ನಾವು ಶೂ ಧರಿಸುತ್ತೇವೆ. ಯಾಕೆಂದರೆ, ಭಾರತ ಮಾತೆಯ ಕೊಳಕು ನಮ್ಮನ್ನು ಕಲುಷಿತಗೊಳಿಸಬಾರದು. ತಮಿಳುನಾಡು ಸರ್ಕಾರ ನಮಗೆ ಉಚಿತವಾಗಿ ಪಾದರಕ್ಷೆಗಳನ್ನು ಕೊಟ್ಟಿದೆ. ಈ ಭೂಮಿದೇವಿ ಭಯಂಕರ ಅಪಾಯಕಾರಿ, ಇದರಲ್ಲಿರುವ ಗಲೀಜಿನಿಂದ ನಿಮಗೆ ತುರಿಕೆ ಉಂಟಾಗಬಹುದು ಎಂದು ಹೇಳಿದ್ದರು. ಭಾರತಮಾತೆ ಮತ್ತು ಭೂಮಿ ಎರಡೂ ಕೊಳಕು ಎಂದು ಹೇಳಿದ್ದು, ಅಪಾರ ಹಿಂದೂಗಳ ವಿರೋಧಕ್ಕೆ ಕಾರಣವಾಗಿತ್ತು.
ತೀರ್ಪು ಓದುವಾಗ ಇದನ್ನೇ ಉಲ್ಲೇಖಿಸಿದ ನ್ಯಾಯಾಧೀಶರು, ಕ್ರಶ್ಚಿಯನ್ ಪಾದ್ರಿ ಭೂಮಿ ದೇವಿ ಮತ್ತು ಭಾರತ ಮಾತೆಯನ್ನು ಹೊಲಸು ಹಾಗೂ ಸೋಂಕಿನ ಮೂಲ ಎಂದು ಕರೆದಿದ್ದಾರೆ. ಹಿಂದುಗಳು ಇವೆರಡನ್ನೂ ಪೂಜಿಸುತ್ತಾರೆ. ಪಾದ್ರಿಗಳ ಮಾತಿನಿಂದ ಹಿಂದುಗಳಿಗೆ ನೋವಾಗಿದ್ದರಲ್ಲಿ ಸಂಶಯವೇ ಇಲ್ಲ. ಇದರಿಂದ ಎಲ್ಲ ಹಿಂದೂಗಳೂ ಆಕ್ರೋಶಗೊಂಡಿದ್ದಾರೆ ಎಂದಲ್ಲ. ಆದರೆ ಪಾದ್ರಿ ಬಳಸಿರುವ ಕೆಲವು ಶಬ್ದಗಳು ಒಂದು ವರ್ಗದ ಹಿಂದುಗಳನ್ನು ಕೆರಳಿಸಿದ್ದರೂ ಅದು ದಂಡನೀಯವೇ ಹೌದು ಎಂದಿದ್ದಾರೆ.
ಇದನ್ನೂ ಓದಿ: ಐಟಿ ದಾಳಿ: ಮಧ್ಯಪ್ರದೇಶದ ಉದ್ಯಮಿ ಮನೆಯಿಂದ ₹ 8 ಕೋಟಿ ನಗದು ವಶ, ನೀರಿನ ಟ್ಯಾಂಕ್‌ನಲ್ಲಿ ಪತ್ತೆಯಾಗಿದ್ದು ₹1 ಕೋಟಿ
Published On - 9:47 am, Sun, 9 January 22