ರಾಜಮಹೇಂದ್ರವರಂ (ಆಂಧ್ರ ಪ್ರದೇಶ): ತರಗತಿಯಲ್ಲಿಯೇ ತನ್ನ ಸಹಪಾಠಿಯೊಂದಿಗೆ ಬಾಲಕನೊಬ್ಬ ವಿವಾಹ ಮಾಡಿಕೊಂಡ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ಕಾಲೇಜಿನಲ್ಲಿ ನಡೆದಿದೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿವಾಹ ಅನೂರ್ಜಿತಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
17 ವರ್ಷದ ಹುಡುಗ ತನ್ನೊಂದಿಗೆ ಓದುತ್ತಿರುವ ಹುಡುಗಿಯ ಕೊರಳಿಗೆ ಮಂಗಳಸೂತ್ರ ಕಟ್ಟಿ, ಹಣೆಗೆ ಸಿಂಧೂರ ಹಚ್ಚಿದ. ಮದುವೆಯ ನಂತರ ದಂಪತಿಗಳು ಫೋಟೊ ಕ್ಲಿಕ್ಕಿಸಿಕೊಂಡ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಾಲಕಿಯ ಸ್ನೇಹಿತೆ ವಿಡಿಯೊ ಮಾಡಿ, ತನ್ನ ಇತರ ಸ್ನೇಹಿತರೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ಘಟನೆ ಎಲ್ಲಾ ಕಡೆಗಳಲ್ಲಿ ಸುದ್ದಿಯಾಯಿತು. ಕಾಲೇಜಿನ ಆಡಳಿತ ಮಂಡಳಿಯು ಇವರಿಬ್ಬರ ದಾಖಲಾತಿಯನ್ನು ರದ್ದುಪಡಿಸಿ, ವರ್ಗಾವಣೆ ಪ್ರಮಾಣಪತ್ರವನ್ನು ನೀಡಿದೆ.
ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದಾರೆ.
ಇವರಿಬ್ಬರು ಒಂದೇ ತರಗತಿಯಲ್ಲಿ ಓದುತ್ತಿದ್ದಾರೆ. ಬಾಲಕಿಗೆ ನಮ್ಮ ಆಯೋಗವು ಆಶ್ರಯ ನೀಡುತ್ತದೆ. ಹುಡುಗಿಯ ಪೋಷಕರು ಮನೆಗೆ ಕರೆದುಕೊಳ್ಳಲು ಒಪ್ಪುತ್ತಿಲ್ಲ. ಆಕೆಯನ್ನು ಕೌನ್ಸಲಿಂಗ್ಗಾಗಿ ಕಳುಹಿಸಲಾಗಿದೆ. ಬಾಲಕನ ಪೋಷಕರೊಂದಿಗೆ ಮಹಿಳಾ ಆಯೋಗದ ಸಿಬ್ಬಂದಿ ಮಾತನಾಡಿ ಸಲಹೆಗಳನ್ನು ನೀಡಿದ್ದಾರೆ ಎಂದು ಆಂದ್ರಪ್ರದೇಶದ ಮಹಿಳಾ ಆಯೋಗದ ಅಧ್ಯಕ್ಷ ವಾಸಿರೆಡ್ಡಿ ಪದ್ಮಾ ಹೇಳಿದರು.
ತರಗತಿಯಲ್ಲಿ ನಡೆದ ಘಟನೆ ವಿದ್ಯಾರ್ಥಿಗಳಲ್ಲಿ ಕಾನೂನು ಜ್ಞಾನ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಮಹಿಳಾ ಆಯೋಗವು ಬಾಲ್ಯವಿವಾಹದ ವಿರುದ್ಧ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ. ಶಿಕ್ಷಣ ಹಕ್ಕು ಕಾಯ್ದೆಯ ಕುರಿತಾಗಿಯೂ ತಿಳಿ ಹೇಳುತ್ತಿದೆ ಎಂದು ಮಹಿಳಾ ಆಯೋಗದ ನಿರ್ದೇಶಕ ಆರ್. ಸೂಯೆಜ್ ಹೇಳಿದರು.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಮತ್ತೆ ತಲೆ ಎತ್ತಿದ ಬಾಲ್ಯ ವಿವಾಹ ಪದ್ಧತಿ, 6 ತಿಂಗಳಲ್ಲಿ 1,791ಕೇಸ್ ದಾಖಲು