ದೆಹಲಿ: ತಮಿಳುನಾಡನ್ನು ವಿಭಜಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ ನಲ್ಲಿ ಹೇಳಿದೆ. ಪಶ್ಚಿಮ ತಮಿಳುನಾಡಿನಲ್ಲಿರುವ ‘ಕೊಂಗು ನಾಡು’ ಪ್ರದೇಶವನ್ನು ಪ್ರತ್ಯೇಕ ಪ್ರದೇಶವನ್ನಾಗಿ ರೂಪಿಸುವ ಚರ್ಚೆಯ ನಡುವೆಯೇ ಸರ್ಕಾರವು ಸ್ಪಷ್ಟೀಕರಣ ನೀಡಿದೆ.
ತಮಿಳುನಾಡು ಸಂಸದರಾದ ಟಿ.ಆರ್.ಪರಿವಂದರ್ ಮತ್ತು ರಾಮಲಿಂಗಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, “ಎಲ್ಲಾ ಸಂಬಂಧಿತ ಅಂಶಗಳನ್ನು ಪರಿಗಣಿಸಿದ ನಂತರ ಹೊಸ ರಾಜ್ಯಗಳ ರಚನೆಯ ವಿಷಯದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ” ಎಂದು ಹೇಳಿದರು.
“ಹೊಸ ರಾಜ್ಯಗಳ ರಚನೆಗೆ ಕಾಲಕಾಲಕ್ಕೆ ವಿವಿಧ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಬೇಡಿಕೆಗಳು ಮತ್ತು ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾಗುತ್ತದೆ. ಹೊಸ ರಾಜ್ಯದ ರಚನೆಯು ನಮ್ಮ ದೇಶದ ಒಕ್ಕೂಟದ ರಾಜಕೀಯದ ಮೇಲೆ ವ್ಯಾಪಕ ಪರಿಣಾಮಗಳನ್ನು ಮತ್ತು ನೇರ ಪ್ರಭಾವವನ್ನು ಹೊಂದಿದೆ. ಪ್ರಸ್ತುತ ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿ ಇಲ್ಲ ಎಂದು ನಿತ್ಯಾನಂದ ರೈ ಹೇಳಿದರು.
ಕೊಂಗು ನಾಡು ಅಥವಾ ಕೊಂಗು ಮಂಡಲವನ್ನು ತಮಿಳುನಾಡಿನ ಪಳನಿ, ಕರೂರ್, ಧಾರಪುರ, ತಿರುಚೆಂಗೋಡು, ಈರೋಡ್, ಪೊಲ್ಲಾಚಿ, ನಾಮಕ್ಕಲ್, ಸೇಲಂ, ಧರ್ಮಪುರಿ, ನೀಲಗಿರಿ, ಅವಿನಾಶಿ, ಸತ್ಯಮಂಗಲಂ, ಕೊಯಮತ್ತೂರು ಮತ್ತು ಉಡುಮಲೈಪೇಟೆ ಜಿಲ್ಲೆಗಳನ್ನು ಒಳಗೊಂಡಿರುವ ಪ್ರದೇಶಕ್ಕೆ ಉಲ್ಲೇಖಿಸಲಾಗಿದೆ.
ಹೊಸದಾಗಿ ನೇಮಕಗೊಂಡ ಕೇಂದ್ರ ಸಚಿವರ ಖಾತೆ ವಿವರವನ್ನು ಬಿಜೆಪಿ ಕಳೆದ ತಿಂಗಳು ಬಿಡುಗಡೆ ಮಾಡಿದ್ದು ಅದರಲ್ಲಿ ಪಕ್ಷದ ತಮಿಳುನಾಡು ಮುಖ್ಯಸ್ಥ ಎಲ್ ಮುರುಗನ್ ಅವರ ಹುಟ್ಟೂರು ನಾಮಕ್ಕಲ್ ಬದಲಿಗೆ ಕೊಂಗು ನಾಡಿನವರು ಎಂದು ಉಲ್ಲೇಖಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಆದಾಗ್ಯೂ, ಮುರುಗನ್ ನಂತರ ಈ ವಿಷಯವನ್ನು ತಳ್ಳಿ ಹಾಕಿದರು. ಇದು ಜನರಿಗೆ ಒಂದು ಗುರುತು ನೀಡುವ ಬಗ್ಗೆ ಮತ್ತು ಬಿಜೆಪಿ ರಾಜ್ಯವನ್ನು ವಿಭಜಿಸುವುದನ್ನು ವಿರೋಧಿಸುತ್ತದೆ ಎಂಬ ದನಿ ಕೇಳಿ ಬಂದಾಗ ಅದು ಬರೆಯುವಾಗ ಆದ ತಪ್ಪು ಎಂದು ಮುರುಗನ್ ಹೇಳಿದ್ದರು.
ಇದನ್ನೂ ಓದಿ: ಕೊವಿಡ್ ನಡುವೆ ಲಕ್ಷಾಂತರ ಬಡವರಿಗೆ ಉಚಿತ ಪಡಿತರ ನೆರವಿಗೆ ಬಂದಿದೆ: ನರೇಂದ್ರ ಮೋದಿ
(There was no proposal under consideration to bifurcate Tamil Nadu MHA informs Parliament)
Published On - 3:40 pm, Tue, 3 August 21