ದೆಹಲಿ: ಮಾರ್ಚ್ 1ರಿಂದ ಎರಡನೇ ಹಂತದ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದೆ. ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, ಇತರ ರೋಗಗಳಿಂದ ಬಳಲುತ್ತಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೀಗ ಕೇಂದ್ರ ಸರ್ಕಾರ ಲಸಿಕೆ ನೀಡುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಲಿಸ್ಟ್ನ್ನು ಬಿಡುಗಡೆ ಮಾಡಿದೆ. ಲಸಿಕೆ ಪ್ರತಿಯೊಬ್ಬ ಭಾರತೀಯನಿಗೂ ಸಿಗಬೇಕು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ, ಈ ಹಂತದ ಲಸಿಕೆ ವಿತರಣಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳುತ್ತಿದೆ.
ಲಸಿಕೆ ವಿತರಣೆ ಮಾಡಲು ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ್ ಅಡಿ ಸುಮಾರು 10,000 ಖಾಸಗಿ ಆಸ್ಪತ್ರೆಗಳನ್ನು, ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (Central Government Health Scheme)ಯಡಿ 687 ಖಾಸಗಿ ಆಸ್ಪತ್ರೆಗಳನ್ನು ಮತ್ತು ರಾಜ್ಯ ಸರ್ಕಾರಗಳ ಆರೋಗ್ಯ ವಿಮಾ ಯೋಜನೆಯಡಿ ಕೆಲವು ಆಸ್ಪತ್ರೆಗಳನ್ನು ಕೊವಿಡ್ ಲಸಿಕಾ ಕೇಂದ್ರಗಳ ಪಟ್ಟಿಗೆ ಸೇರಿಸಲಾಗಿದೆ. ಈ ಖಾಸಗಿ ಕೇಂದ್ರಗಳು ಪ್ರತಿ ವ್ಯಕ್ತಿಯ ಪ್ರತಿ ಡೋಸ್ಗೆ 250 ರೂ.ವಸೂಲಿ ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸರ್ ಗಂಗಾರಾಮ್, ಸೆಂಟರ್ ಫಾರ್ ಸೈಟ್, ಸ್ಮೈಲ್ ಡೆಂಟಲ್ ಕ್ಲಿನಿಕ್, ಮೇದಾಂತಾ ಮೆಡಿಸಿಟಿ, ಶ್ರೀ ಬಾಲಾಜಿ ಆ್ಯಕ್ಷನ್ ಮೆಡಿಕಲ್ ಸಂಸ್ಥೆ, ಮಹಾರಾಜಾ ಆಗ್ರಾಸೇನ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸೇರಿ ಹಲವು ಖಾಸಗಿ ಆಸ್ಪತ್ರೆಗಳು ಕೊವಿಡ್ 19 ಲಸಿಕೆ ನೀಡುವ ಕೇಂದ್ರಗಳಾಗಿವೆ.
ಇನ್ನು ಕೊವಿಡ್-19 ಲಸಿಕೆ ನೀಡುವ ಖಾಸಗಿ ಆಸ್ಪತ್ರೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ರಾಷ್ಟ್ರೀಯ Co-Win ಟೆಕ್ನಾಲಜಿ ನಿಗದಿ ಮಾಡಿರುವ ಗುಣಮಟ್ಟ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯ, ಸರ್ಕಾರಿ ಕೊವಿಡ್-19 ಕೇಂದ್ರಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಯಾವ್ಯಾವ ಆಸ್ಪತ್ರೆಗಳು?
ಕರ್ನಾಟಕದ ಬೆಂಗಳೂರಿನಲ್ಲಿ ಯಾವ್ಯಾವ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ವಿತರಣೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ: ಫೋರ್ಟೀಸ್ ಆಸ್ಪತ್ರೆ- ಕನ್ನಿಂಗ್ಹ್ಯಾಂ ರೋಡ್, ಇಂಪೇರಿಯನ್ ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ (ಅಪೋಲೋ), ಕಿಮ್ಸ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್, ಮಲ್ಯಾ ಆಸ್ಪತ್ರೆ, ನಾರಾಯಣ ಹೃದಯಾಲಯ, ಸಾಗರ ಆಸ್ಪತ್ರೆ-ಬನಶಂಕರಿ, ಜಯನಗರ ಸಾಗರ ಆಸ್ಪತ್ರೆ, ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆ, ವೈದೇಹಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್, ಹೆಲ್ತ್ ಕೇರ್ ಗ್ಲೋಬಲ್ ಎಂಟರ್ಪ್ರೈಸಸ್, ಪಿಡಿ ಹಿಂದುಜಾ ಸಿಂಧಿ ಆಸ್ಪತ್ರೆ, ಹೊಸ್ಮಠ್ ಹಾಸ್ಪಿಟಲ್, ಜಯನಗರ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ನಾರಾಯಣ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್-ಎಚ್.ಎಸ್.ಆರ್.ಲೇಔಟ್, Pan Nagarbhavi Hospital Pvt. Ltd. ಈ ಆಸ್ಪತ್ರೆಯ ಹೆಸರುಗಳು ಕೇಂದ್ರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇವೆ.
Published On - 2:40 pm, Sun, 28 February 21