ISRO Mission: ಇಸ್ರೊದಿಂದ ಬ್ರೆಜಿಲ್‌ನ ಅಮೆಜಾನಿಯಾ-1 ಉಪಗ್ರಹ ಯಶಸ್ವಿ ಉಡಾವಣೆ

ISRO launches PSLV-C51: ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್‌ ಇದಾಗಿದ್ದು , ಪಿಎಸ್‌ಎಲ್‌ವಿಸಿ51 ರಾಕೆಟ್‌ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ISRO Mission: ಇಸ್ರೊದಿಂದ ಬ್ರೆಜಿಲ್‌ನ ಅಮೆಜಾನಿಯಾ-1 ಉಪಗ್ರಹ ಯಶಸ್ವಿ ಉಡಾವಣೆ
ಉಪಗ್ರಹವನ್ನು ಹೊತ್ತು ನಭಕ್ಕೆ ಹಾರುತ್ತಿರುವ PSLVC51 (ಕೃಪೆ: ಇಸ್ರೊ ಟ್ವಿಟರ್ ಖಾತೆ)
Follow us
ರಶ್ಮಿ ಕಲ್ಲಕಟ್ಟ
|

Updated on:Feb 28, 2021 | 12:41 PM

ಶ್ರೀಹರಿಕೋಟಾ: ಇದೇ ಮೊದಲ ಬಾರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬ್ರೆಜಿಲ್ ಉಪಗ್ರಹವನ್ನು ಭಾನುವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾನುವಾರ ಬೆಳಿಗ್ಗೆ 10:24ಕ್ಕೆ ಸತೀಶ್‌ ಧವನ್‌ ಬಾಹ್ಯಾಕಾಶ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ ಸಿ51(PSLV-C51) ರಾಕೆಟ್‌ ಬ್ರೆಜಿಲ್‌ನ ಅಮೆಜಾನಿಯಾ-1( Amazonia-1) ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ. ಪಿಎಸ್‌ಎಲ್‌ವಿ ಸಿ51 ಹೊತ್ತೊಯ್ದಿರುವ ಅಮೆಜಾನಿಯಾ-1 ಉಪಗ್ರಹ ಉಡಾವಣೆಗೆ ಶನಿವಾರ ಕೌಂಟ್​ಡೌನ್ ಆರಂಭವಾಗಿತ್ತು . ಇಸ್ರೊ ಪಿಎಸ್‌ಎಲ್‌ವಿ ರಾಕೆಟ್‌ನ 53ನೇ ಮಿಷನ್‌ ಇದಾಗಿದ್ದು , ಪಿಎಸ್‌ಎಲ್‌ವಿಸಿ51 ರಾಕೆಟ್‌ ಅಮೆಜಾನಿಯಾ-1 ಉಪಗ್ರಹದ ಜೊತೆಗೆ ಇತರ 18 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಬ್ರೆಜಿಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸ್ಪೇಸ್‌ ರಿಸರ್ಚ್‌ನ ಭೂವಲಯ ವೀಕ್ಷಣೆಗಾಗಿ ಬಳಕೆಯಾಗಲಿರುವ ದೂರ ಸಂವೇದಿ ಉಪಗ್ರಹವಾಗಿದೆ ಅಮೆಜಾನಿಯಾ-1. ಈ ಉಪಗ್ರಹವು 637 ಕೆ.ಜಿ. ತೂಕವಿದೆ. ಅಮೆಜಾನ್‌ ಪ್ರದೇಶದಲ್ಲಿ ಕಾಡು ನಾಶದ ಬಗ್ಗೆ ನಿಗಾವಹಿಸಲು ಹಾಗೂ ಕೃಷಿಗೆ ಸಂಬಂಧಿಸಿದಂತೆ ಪರಿಶೀಲನೆಗಳಿಗೆ ಅಮೆಜಾನಿಯಾ-1 ಉಪಗ್ರಹ ನೆರವಾಗಲಿದೆ ಎಂದು ಇಸ್ರೊ ಹೇಳಿದೆ.

ಚೆನ್ನೈ ಮೂಲದ ಸ್ಪೇಸ್‌ ಕಿಡ್ಜ್‌ ಇಂಡಿಯಾದ (ಎಸ್‌ಕೆಐ) ಸತೀಶ್‌ ಧವನ್‌ ಸ್ಯಾಟ್‌ (ಎಸ್‌ಡಿ ಸ್ಯಾಟ್‌), ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಮೂರು ಯೂನಿಟಿಸ್ಯಾಟ್‌ಗಳು (UNITYsats) ಹಾಗೂ ಇಸ್ರೊದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್‌) 14 ಉಪಗ್ರಹಗಳು ಈ ಮಿಷನ್​ನಲ್ಲಿದೆ. ಎಸ್‌ಡಿ ಸ್ಯಾಟ್‌ ಜೊತೆಗೆ 25,000 ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತಿದೆ. ಈ ಬಾಹ್ಯಾಕಾಶ ನೌಕೆಯ ಮೇಲಿನ ಪ್ಯಾನೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಕೆತ್ತಲಾಗಿದೆ ಹಾಗೂ ಎಸ್‌ಡಿ (secured digital) ಕಾರ್ಡ್‌ನಲ್ಲಿ ಭಗವದ್ಗೀತೆ ಕಳುಹಿಸಲಾಗಿದೆ. ಪ್ರಧಾನಿಯವರ ಆತ್ಮನಿರ್ಭರ್ ಭಾರತ ಅಭಿಯಾನ ಮತ್ತು ಬಾಹ್ಯಾಕಾಶ ಖಾಸಗೀಕರಣಕ್ಕೆ ತೋರುವ ಗೌರವವಾಗಿದೆ ಇದು ಎಂದು ಎಸ್‌ಕೆಐ ಹೇಳಿದೆ.

ಬ್ರೆಜಿಲಿಯನ್‌ ನಿರ್ಮಿತ ಮೊದಲ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವುದು ನಮಗೆ ಹೆಮ್ಮೆಯೆ ವಿಷಯವಾಗಿದೆ ಎಂದು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್​ನ (ಎನ್‌ಎಸ್‌ಐಎಲ್‌)ನ ಮುಖ್ಯಸ್ಥ ಜಿ.ನಾರಾಯಣನ್‌ ಹೇಳಿದ್ದಾರೆ.

ಇದು ಎನ್‌ಎಸ್‌ಐಎಲ್‌ನ ಮೊದಲ ವಾಣಿಜ್ಯ ಉದ್ದೇಶಿತ ಯೋಜನೆಯಾಗಿದ್ದು, ಇಸ್ರೊ ವೆಬ್‌ಸೈಟ್‌, ಯುಟ್ಯೂಬ್‌ ಚಾನೆಲ್‌, ಫೇಸ್‌ಬುಕ್‌ ಹಾಗೂ ಟ್ವಿಟರ್‌ ಖಾತೆಗಳ ಮೂಲಕ ಉಪಗ್ರಹ ಉಡಾವಣೆ ನೇರ ಪ್ರಸಾರ ಮಾಡಿದೆ.

ಈ ಕಾರ್ಯಾಚರಣೆಯಲ್ಲಿ ಭಾರತ ಮತ್ತು ಇಸ್ರೋ, ಬ್ರೆಜಿಲ್​ನಿಂದ ಸಂಯೋಜಿಸಲ್ಪಟ್ಟ ಮೊದಲ ಉಪಗ್ರಹವನ್ನು ಉಡಾಯಿಸಲು ಅತ್ಯಂತ ಹೆಮ್ಮೆಪಡುತ್ತದೆ. ಉಪಗ್ರಹವು ಉತ್ತಮ ಸ್ಥಿತಿಯಲ್ಲಿದೆ. ಬ್ರೆಜಿಲ್ ತಂಡಕ್ಕೆ ಅಭಿನಂದನೆಗಳು. ಏಳು ಉಡಾವಣಾ ಕಾರ್ಯಾಚರಣೆಗಳು, ಆರು ಉಪಗ್ರಹ ಕಾರ್ಯಾಚರಣೆಗಳು ಮತ್ತು ಈ ವರ್ಷದ ಅಂತ್ಯದ ವೇಳೆಗೆ ಮೊದಲ ಮಾನವರಹಿತ ಮಿಷನ್ ಸೇರಿದಂತೆ 14 ಕಾರ್ಯಾಚರಣೆಗಳನ್ನು ನಾವು ಯೋಜಿಸಿದ್ದೇವೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ.ಶಿವನ್‌ ಹೇಳಿದ್ದಾರೆ.

ಉಡಾವಣೆಗೆ ಸಾಕ್ಷಿಯಾಗಲು ಹಾಜರಿದ್ದ ಬ್ರೆಜಿಲ್‌ನ ವಿಜ್ಞಾನ, ತಂತ್ರಜ್ಞಾನ ಸಚಿವ ಮಾರ್ಕೋಸ್ ಸೀಸರ್ ಪೊಂಟೆಸ್, ಈ ಉಪಗ್ರಹವು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್ ಮತ್ತು ಬ್ರೆಜಿಲಿಯನ್ ಬಾಹ್ಯಾಕಾಶ  ಸಂಸ್ಥೆಯ ಎಂಜಿನಿಯರ್‌ಗಳ ಹಲವಾರು ವರ್ಷಗಳ ಪ್ರಯತ್ನಗಳ ಫಲವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೀರ್ತಿಶನಿಯಿಂದ ದೂರವಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

Published On - 12:30 pm, Sun, 28 February 21