Mann Ki Baat: ಜಲ ಸಂರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ; ಸದ್ಯದಲ್ಲೇ Catch the Rain ಅಭಿಯಾನ ಆರಂಭ
Mann Ki Baat: ಮಾರ್ಚ್ನಲ್ಲಿ ದೇಶಾದ್ಯಂತ ವಿವಿಧ ತರಗತಿಗಳಿಗೆ ಪರೀಕ್ಷೆಗಳು ನಡೆಯಲಿವೆ . ಪಾಲಕರು, ಪೋಷಕರು, ಶಿಕ್ಷಕರು ಪರೀಕ್ಷೆಗಳ ಕುರಿತು ನರೇಂದ್ರ ಮೋದಿ ಆ್ಯಪ್ ಮೂಲಕ ತಮ್ಮ ಜತೆ ಸಂವಾದ ನಡೆಸಲು ಅವರು ಕರೆ ನೀಡಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಎಕ್ಸಾಮ್ ವಾರಿಯರ್ಗಳೆಂದು ವ್ಯಾಖ್ಯಾನಿಸಿದ ಪ್ರಧಾನಿ ಮೋದಿ ಎಲ್ಲಾ ಪರೀಕ್ಷಾರ್ಥಿಗಳಿಗೂ ಶುಭಕೋರಿದರು.
ದೆಹಲಿ: ಜಲ ಸಂರಕ್ಷಣೆಯ ಕುರಿತು ನಮ್ಮ ಜವಾಬ್ದಾರಿಗಳನ್ನು ಅರಿಯಬೇಕಿದ್ದು, ಕೆಲವೇ ದಿನಗಳಲ್ಲಿ ಜಲಶಕ್ತಿ ಮಂತ್ರಾಲಯ ‘ಕ್ಯಾಚ್ ದಿ ರೇನ್’ (Catch the Rain) ಎಂಬ ಅಭಿಯಾನ ಆರಂಭಿಸಲಿದೆ. ಮಳೆ ಎಲ್ಲಿ ಯಾವಾಗ ಬೀಳುವುದೋ ಅಲ್ಲೇ ಹಿಡಿದಿಟ್ಟುಕೊಳ್ಳಿ ಎಂಬ ಘೋಷಣೆಯೊಂದಿಗೆ ಆರಂಭವಾಗಲಿರುವ ಈ ಅಭಿಯಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
‘ಮನ್ ಕೀ ಬಾತ್’ನ 74ನೇ ಆವೃತ್ತಿಯಲ್ಲಿ ಈ ಕುರಿತು ವಿವರಿಸಿದ ಅವರು, ‘ನೀರು ಸಂರಕ್ಷಣೆ ಇಂದಿನ ಅನಿವಾರ್ಯವಾಗಿದ್ದು, ಜಲ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಈ ತಿಂಗಳ ಬಳಿಕ ಬೇಸಿಗೆ ಕಾಲ ಆರಂಭವಾಗಲಿದ್ದು ನೀರಿನ ಅಭಾವ ಆಗದಂತೆ ತಡೆಯಲು ದಿನನಿತ್ಯದ ಜೀವನದಲ್ಲಿ ನೀರಿನ ಸಂರಕ್ಷಣೆಯನ್ನು ಅನುಸರಿಸಬೇಕು ಎಂದು ವಿವರಿಸಿದರು.
ಜಲ ಸಂರಕ್ಷಣೆಯ ಮಹತ್ವವನ್ನು ಉಲ್ಲೇಖಿಸುತ್ತಲೇ, ‘ಅಸ್ಸಾಂನ ಕಾಜೀರಂಗ ರಾಷ್ಟ್ರೀಯ ಉದ್ಯಾನದಲ್ಲಿ ಇತ್ತೀಚಿನ ಸಮೀಕ್ಷೆಯ ಪ್ರಕಾರ 112 ಪಕ್ಷಿ ಪ್ರಬೇಧಗಳು ಪತ್ತೆಯಾಗಿವೆ. ಇವು ಜಲ ಸಂರಕ್ಷಣೆ ಮತ್ತು ಪರಿಸರದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಮಾಡಿದ್ದರಿಂದಲೇ ಸಾಧ್ಯವಾಯಿತು ಎಂದು ವಿವರಿಸಿದರು.
ಸಿ.ವಿ.ರಾಮನ್ ಅವರನ್ನು ಸ್ಮರಿಸಿದ ಪ್ರಧಾನಿ
ಇಂದಿನ ರಾಷ್ಟ್ರೀಯ ವಿಜ್ಞಾನ ದಿನವನ್ನು ಸ್ಮರಿಸಿಕೊಂಡ ಅವರು, ‘ಭಾರತೀಯ ವಿಜ್ಞಾನಿಗಳಲ್ಲಿ ಸಿ.ವಿ.ರಾಮನ್ ಅಗ್ರಗಣ್ಯರು. ಅವರ ಕೊಡುಗೆಗಳಿಂದಲೇ ದೇಶದ ವಿಜ್ಞಾನ ಕ್ಷೇತ್ರ ಇಷ್ಟು ಮುಂದುವರೆದಿದೆ. ದೇಶದ ಯುವಜನತೆ ಭಾರತೀಯ ವಿಜ್ಞಾನ ಮತ್ತು ವಿಜ್ಞಾನಿಗಳ ಇತಿಹಾಸವನ್ನು ಅಧ್ಯಯನ ಮಾಡಬೇಕು. ಆತ್ಮನಿರ್ಭರ ಭಾರತ ಯೋಜನೆಗೆ ದೇಶದ ವಿಜ್ಞಾನ ಕ್ಷೇತ್ರದ ಇತಿಹಾಸದ ಅಧ್ಯಯನ ಪೂರಕವಾಗಬಲ್ಲದು ಎಂದು ವಿವರಿಸಿದರು.
ಸಂಸ್ಕೃತದಲ್ಲೂ ವೀಕ್ಷಕ ವಿವರಣೆ
ವಾರಣಾಸಿಯ ಕಾಲೇಜ್ ಒಂದರಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಂಸ್ಕೃತದಲ್ಲಿ ವೀಕ್ಷಕ ವಿವರಣೆಯ ಆಡಿಯೋ ತುಣುಕನ್ನು ಉಲ್ಲೇಖಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಹಲವು ಕ್ರೀಡೆಗಳಲ್ಲಿ ಇದುವರೆಗೂ ವೀಕ್ಷಕ ವಿವರಣೆ ನೀಡುವ ಪದ್ಧತಿ ಬೆಳೆದಿಲ್ಲ. ಯುವ ಜನರ ಉದ್ಯೋಗ ಮತ್ತು ಇನ್ನಿತರ ಅನುಕೂಲತೆಗಳಿಗೋಸ್ಕರ ಎಲ್ಲ ಕ್ರೀಡೆಗಳಲ್ಲೂ ವೀಕ್ಷಕ ವಿವರಣೆ ನಿಡುವ ಯೋಜನೆಯೊಂದನ್ನು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಸರ್ಕಾರ ಜಾರಿಗೆ ತರಲು ಯೋಚಿಸುತ್ತಿದೆ ಎಂದು ಅವರು ತಿಳಿಸಿದರು.
ತಮಿಳು ಭಾಷೆಯ ಸೊಗಸನ್ನು ಕೊಂಡಾಡಿದ ಪ್ರಧಾನಿ, ಈವರೆಗೂನನ್ನ ಬಳಿ ಅತ್ಯಂತ ಪುರಾತನ ಭಾಷೆಯನ್ನು ಕಲಿಯಲು ಸಾಧ್ಯವಾಗಿಲ್ಲ ಎಂಬ ಕುರಿತು ಖೇದವಿದೆ. ತಮಿಳು ಅತ್ಯಂತ ಸುಂದರ ಭಾಷೆಯಾಗಿದ್ದು ನಾನು ಕಲಿಯಲೇಬೇಕಾದ ಭಾಷೆಗಳಲ್ಲೊಂದು ಎಂದು ಹೊಗಳಿದರು.
ವಿದ್ಯಾರ್ಥಿಗಳಿಗೆ ಶುಭಹಾರೈಕೆ
ಮಾರ್ಚ್ನಲ್ಲಿ ದೇಶಾದ್ಯಂತ ವಿವಿಧ ತರಗತಿಗಳಿಗೆ ಪರೀಕ್ಷೆಗಳು ಜರುಗಲಿವೆ. ಪಾಲಕರು, ಪೋಷಕರು, ಶಿಕ್ಷಕರು ಪರೀಕ್ಷೆಗಳ ಕುರಿತು ನರೇಂದ್ರ ಮೋದಿ ಆ್ಯಪ್ ಮೂಲಕ ತಮ್ಮ ಜತೆ ಸಂವಾದ ನಡೆಸಲು ಅವರು ಕರೆ ನೀಡಿದರು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಎಕ್ಸಾಮ್ ವಾರಿಯರ್ಗಳೆಂದು ವ್ಯಾಖ್ಯಾನಿಸಿದ ಪ್ರಧಾನಿ ಮೋದಿ ಎಲ್ಲಾ ಪರೀಕ್ಷಾರ್ಥಿಗಳಿಗೂ ಶುಭಕೋರಿದರು.
ಇದನ್ನೂ ಓದಿ: ದೇಶವಾಸಿಗಳನ್ನುದ್ದೇಶಿಸಿ ಮೋದಿ ಮನ್ ಕಿ ಬಾತ್..
ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಮಾತು ಕೇಳಿ ವಿರಾಟ್ ಕೊಹ್ಲಿ, ರವಿ ಶಾಸ್ತ್ರಿ ಹೇಳಿದ್ದೇನು?
Published On - 12:02 pm, Sun, 28 February 21