ಮೂಗಿನ ಮೂಲಕವೂ ಕೊರೊನಾ ಲಸಿಕೆ ನೀಡಿಕೆ; ವೈದ್ಯಕೀಯ ಪ್ರಯೋಗಕ್ಕೆ ಸಮ್ಮತಿಸಿದ ತಜ್ಞರ ಸಮಿತಿ

ಚುಚ್ಚುಮದ್ದಿಗಿಂತಲೂ ಇದು ಸುಲಭ ಮಾರ್ಗದಲ್ಲಿ ನೀಡಬಹುದಾದ ಲಸಿಕೆ ಆಗಿರುವುದರಿಂದ ವೈದ್ಯಕೀಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರೆ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ.

ಮೂಗಿನ ಮೂಲಕವೂ ಕೊರೊನಾ ಲಸಿಕೆ ನೀಡಿಕೆ; ವೈದ್ಯಕೀಯ ಪ್ರಯೋಗಕ್ಕೆ ಸಮ್ಮತಿಸಿದ ತಜ್ಞರ ಸಮಿತಿ
ಸಾಂದರ್ಭಿಕ ಚಿತ್ರ
Follow us
Skanda
| Updated By: ಸಾಧು ಶ್ರೀನಾಥ್​

Updated on: Jan 20, 2021 | 1:02 PM

ದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿ ನಾಲ್ಕು ದಿನ ಕಳೆಯುವ ಹೊತ್ತಿನಲ್ಲೇ ಮತ್ತೊಂದು ಬೆಳವಣಿಗೆ ಶುರುವಾಗಿದೆ. ಭಾರತ್​ ಬಯೋಟೆಕ್​ ಸಂಸ್ಥೆ ತಯಾರಿಸಿರುವ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಯ ಮೊದಲ ಹಂತದ ವೈದ್ಯಕೀಯ ಪರೀಕ್ಷೆಗೆ ತಜ್ಞರ ಸಮಿತಿ ಸಮ್ಮತಿ ಸೂಚಿಸಿದೆ.

ಸದ್ಯ ಲಭ್ಯವಿರುವ ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಮತ್ತು ಸೆರಮ್​ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದ ಕೊವಿಶೀಲ್ಡ್​ ಎರಡೂ ಲಸಿಕೆಗಳನ್ನು ಚುಚ್ಚುಮದ್ದಿನ ಮೂಲಕ ನೀಡಲಾಗುತ್ತಿದೆ. ಪ್ರಸ್ತುತ ಭಾರತ್ ಬಯೋಟೆಕ್​ ಮೂಗಿನ ಮೂಲಕ ನೀಡುವ ಕೊರೊನಾ ಲಸಿಕೆಯನ್ನು ತಯಾರಿಸಿರುವುದು ಕೊವಿಡ್​ ನಿಯಂತ್ರಣಕ್ಕೆ ಪರಿಣಾಮಕಾರಿ ಅಸ್ತ್ರವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ಲಸಿಕೆಯ ವೈದ್ಯಕೀಯ ಪರೀಕ್ಷೆಗೆ ಅನುಮತಿ ಕೋರಿ ಭಾರತ್ ಬಯೋಟೆಕ್​ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಇದೀಗ ತಜ್ಞರ ಸಮಿತಿ ಮೊದಲ ಹಂತದ ವೈದ್ಯಕೀಯ ಪರೀಕ್ಷೆಗೆ ಅಸ್ತು ಎಂದಿದೆ. ಮೊದಲ ಹಂತದ ಫಲಿತಾಂಶವನ್ನು ಪರಿಶೀಲಿಸಿದ ನಂತರ 2ನೇ ಹಂತದ ಪರೀಕ್ಷೆಗೆ ಒಪ್ಪಿಗೆ ಸೂಚಿಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಯಶಸ್ಸು ಸಾಧಿಸಿದರೆ ದೊಡ್ಡಮಟ್ಟದ ಬದಲಾವಣೆ! ಚುಚ್ಚುಮದ್ದಿಗಿಂತಲೂ ಇದು ಸುಲಭ ಮಾರ್ಗದಲ್ಲಿ ನೀಡಬಹುದಾದ ಲಸಿಕೆ ಆಗಿರುವುದರಿಂದ ವೈದ್ಯಕೀಯ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದರೆ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಇದು ಈಗಾಗಲೇ ಲಭ್ಯವಿರುವ ಲಸಿಕೆಗಳಿಗಿಂತ ವಿಭಿನ್ನವಾಗಿರುವುದರಿಂದ ಪರಿಣಾಮವೂ ಹೆಚ್ಚಿರಲಿದೆ ಎಂದು ನಿರೀಕ್ಷಿಸಿರುವುದಾಗಿ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ಮೂಗಿನ ಮೂಲಕ ಲಸಿಕೆ ನೀಡುವುದು ಒಳ್ಳೆಯದು.. ಯಾಕೆ? ಮೂಗಿನ ಮೂಲಕ ನೀಡಬಲ್ಲ ಲಸಿಕೆ ಕುರಿತು ಮಾತನಾಡಿರುವ ಭಾರತ್ ಬಯೋಟೆಕ್​ ಮುಖ್ಯಸ್ಥ ಕೃಷ್ಣ ಎಲ್ಲಾ, ಈಗ ಲಭ್ಯವಿರುವ ಲಸಿಕೆ ಒಬ್ಬ ವ್ಯಕ್ತಿಗೆ 2 ಡೋಸ್​ನಷ್ಟು ಬೇಕಾಗುತ್ತದೆ. ಅಂದರೆ ಒಬ್ಬರಿಗೆ ಎರಡು ಸೂಜಿಗಳಂತೆ ಲೆಕ್ಕ ಹಾಕಬಹುದು. ಇದು ಭಾರತದ ಜನಸಂಖ್ಯೆಗೆ ಹೋಲಿಸಿದರೆ ದೊಡ್ಡ ಮಟ್ಟದ ತ್ಯಾಜ್ಯ ಉತ್ಪಾದನೆಗೂ ಕಾರಣವಾಗಲಿದೆ. ಆದ್ದರಿಂದ ಮೂಗಿನ ಮೂಲಕ ನೀಡುವ ಲಸಿಕೆ ಆಶಾದಾಯಕ ಬೆಳವಣಿಗೆ ಆಗಲಿದೆ ಎಂದಿದ್ದಾರೆ.

ಜೊತೆಗೆ, ಒಂದು ಮೂಗಿನ ಹೊಳ್ಳೆಗೆ ಒಂದು ಹನಿಯಂತೆ, ಒಬ್ಬರಿಗೆ ಎರಡು ಹನಿ ಲಸಿಕೆ ಸಾಕಾಗಲಿದೆ. ಈ ಲಸಿಕೆಗೆ ಸಿರಿಂಜ್​ ಮತ್ತು ಸೂಜಿಗಳ ಅವಶ್ಯಕತೆಯೇ ಇಲ್ಲದಿರುವುದರಿಂದ ಇದು ಲಸಿಕಾ ವಿತರಣೆಯ ವೆಚ್ಚವನ್ನೂ ಕಡಿಮೆ ಮಾಡಲಿದ್ದು, ಒಟ್ಟಾರೆ ಖರ್ಚಿನಲ್ಲಿ ದೊಡ್ಡ ಮಟ್ಟದ ಉಳಿತಾಯ ಆಗಲಿದೆ ಎಂದು ಕೃಷ್ಣ ಎಲ್ಲಾ ವಿವರಿಸಿದ್ದಾರೆ.

ಲಸಿಕೆ ತಯಾರಿಕೆ ಮುಂಚೂಣಿಯಲ್ಲಿ ಭಾರತ! ಲಸಿಕೆ ರಫ್ತು ಆರಂಭ: ನೆರೆ ರಾಷ್ಟ್ರಗಳಿಗೆ ನೆರವಾಗುವತ್ತ ಹೆಜ್ಜೆಯಿಟ್ಟ ಭಾರತ