ಮುಖೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ ನೀಡಿದ್ದ ವ್ಯಕ್ತಿ ಬಂಧನ; ಅಫ್ಜಲ್ ಎಂಬ ಹೆಸರಲ್ಲಿ ಕರೆ ಮಾಡಿದ್ದ ಆರೋಪಿ ವಿಷ್ಣು
56ರ ಹರೆಯದ ಭೌಮಿಕ್ ಒಂದು ಬಾರಿ ಕರೆ ಮಾಡಿದಾಗ ಧೀರೂಬಾಯಿ ಅಂಬಾನಿ ಹೆಸರನ್ನೂ ಉಲ್ಲೇಖಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಮತ್ತು ಅವರ ಕುಟುಂಬಕ್ಕೆ ಸೋಮವಾರ ಬೆದರಿಕೆ ಕರೆ (Threatening calls) ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಯನ್ನು ದಕ್ಷಿಣ ಮುಂಬೈಯ ಜ್ಯುವೆಲ್ಲರ್, ವಿಷ್ಣು ಭೌಮಿಕ್ ಎಂದು ಗುರುತಿಸಲಾಗಿದೆ. ಈತ ಕರೆ ಮಾಡುವಾಗ ಅಫ್ಜಲ್ ಎಂದು ಹೆಸರು ಹೇಳಿದ್ದ. ಸೋಮವಾರ ಎರಡು ಗಂಟೆ ಅವಧಿಯಲ್ಲಿ ಭೌಮಿಕ್ 8 ಬಾರಿ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 56ರ ಹರೆಯದ ಭೌಮಿಕ್ ಒಂದು ಬಾರಿ ಕರೆ ಮಾಡಿದಾಗ ಧೀರೂಬಾಯಿ ಅಂಬಾನಿ ಹೆಸರನ್ನೂ ಉಲ್ಲೇಖಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ದಹೀಸರ್ ನಿವಾಸಿಯಾಗಿದ್ದು ಈತನ ಕ್ರಿಮಿನಲ್ ರೆಕಾರ್ಡ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸೋಮವಾರ ಅಂಬಾನಿ ಕುಟುಂಬಕ್ಕೆ ಹಲವಾರು ಬೆದರಿಕೆ ಕರೆಗಳು ಬಂದಿತ್ತು.ರಿಲಯನ್ಸ್ ಫೌಂಡೇಷನ್ ನ ಹರ್ಕಿಸನ್ ದಾಸ್ ಆಸ್ಪತ್ರೆಯ ಫೋನ್ ನಂಬರ್ ಗೆ ಬೆಳಗ್ಗೆ 10.30ರ ಹೊತ್ತಿಗೆ ಕರೆ ಬಂದಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಕುಟುಂಬಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ರಿಲಯನ್ಸ್ ಫೌಂಡೇಷನ್ ದೂರು ದಾಖಲಿಸಿತ್ತು. ಆಸ್ಪತ್ರೆಯ ಸಂಖ್ಯೆಗೆ ಮೂರಕ್ಕಿಂತ ಹೆಚ್ಚು ಬಾರಿ ಕರೆ ಬಂದಿತ್ತು. ತನಿಖೆ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸ್ ಹೇಳಿದ್ದಾರೆ.
ಈ ಪ್ರಕರಣ ಬಗ್ಗೆ ಕೆಲವು ಕೇಂದ್ರೀಯ ಸಂಸ್ಥೆಗಳು ಮಾಹಿತಿ ಕೇಳಿವೆ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ಆರೋಪಿ ಮುಖೇಶ್ ಅಂಬಾನಿಗೆ ಬೆದರಿಕೆ ಕರೆ ನೀಡ ನಿಂದಿಸಿದ್ದಾನೆ. ಬೆದರಿಕೆ ಮತ್ತು ಅಪರಾಧ ಕೃತ್ಯವೆಸಗಿದ್ದಕ್ಕಾಗಿ ಸೆಕ್ಷನ್ 506(2) ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ನಿಲೋತ್ಪಲ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಕಳೆದ ವರ್ಷ ಅಂಬಾನಿ ನಿವಾಸದ ಬಳಿ ಸ್ಕಾರ್ಪಿಯೊ ಕಾರಿನಲ್ಲಿ 20 ಸ್ಫೋಟಕ ಜೆಲೆಟಿನ್ ಕಡ್ಡಿ ಮತ್ತು ಬೆದರಿಕೆ ಪತ್ರ ಪತ್ತೆಯಾಗಿತ್ತು. ಪೊಲೀಸರು ಇದರ ಬಗ್ಗೆ ತನಿಖೆ ನಡೆಸಿದಾಗ ಕಾರಿನ ಮಾಲೀಕ ಥಾಣೆ ಮೂಲದ ಮನ್ಸುಖ್ ಹಿರೇನ್ ಎಂಬುದು ತಿಳಿದುಬಂದಿದ್ದು, ಈತನ ಶವ ಪತ್ತೆಯಾಗಿತ್ತು. ಅಂತಿಮವಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಾಸ್ಟರ್ ಮೈಂಡ್ ಅನ್ನು ಬಂಧಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ