ದೆಹಲಿಯ ಏಮ್ಸ್ ಬಳಿ ಪೊಲೀಸರಿಂದ ಫೈರಿಂಗ್; ದುಷ್ಕರ್ಮಿಯ ಕಾಲಿಗೆ ಗುಂಡೇಟು
Delhi ಮಂಗಳವಾರ ಬೆಳಗ್ಗೆ ದಕ್ಷಿಣ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಬಳಿ ದೆಹಲಿ ಪೊಲೀಸರ ಗಸ್ತು ತಂಡದೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ: ದೆಹಲಿಯಲ್ಲಿ(Delhi) ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಏಮ್ಸ್ (AIIMS) ಬಳಿ ಗುಂಡಿನ ದಾಳಿ ನಡೆದಿದ್ದು, ದುಷ್ಕರ್ಮಿಯ ಕಾಲಿಗೆ ಗುಂಡು ತಗುಲಿದೆ. ಈ ದುಷ್ಕರ್ಮಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ಎನ್ಡಿಟಿವಿ ವರದಿ ಮಾಡಿದೆ. ಮಂಗಳವಾರ ಬೆಳಗ್ಗೆ ದಕ್ಷಿಣ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಬಳಿ ದೆಹಲಿ ಪೊಲೀಸರ ಗಸ್ತು ತಂಡದೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ನಲ್ಲಿ ಬಂದ ವ್ಯಕ್ತಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರತೀಕಾರವಾಗಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದು, ಒಬ್ಬ ಆರೋಪಿ ಗಾಯಗೊಂಡಿದ್ದಾನೆ. ಯಾವುದೇ ಪೊಲೀಸರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಏಮ್ಸ್ ಬಳಿಯ ಕಿದ್ವಾಯಿ ನಗರದಲ್ಲಿ ಮುಂಜಾನೆ 3-4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಟ್ಲಾ ಮುಬಾರಕ್‌ಪುರದಲ್ಲಿ ನಿಯೋಜನೆಗೊಂಡಿದ್ದ ಗಸ್ತು ತಂಡವು ಬೈಕ್‌ನಲ್ಲಿ ಮೂವರು ವ್ಯಕ್ತಿಗಳನ್ನು ಗುರುತಿಸಿ ನಿಲ್ಲಿಸುವಂತೆ ಸೂಚಿಸಿತು. ಆದರೆ ಅವರು ನಿಲ್ಲಿಸದೆ ವೇಗವಾಗಿ ಹೋದರು. ಪೊಲೀಸ್ ತಂಡವು ಅವರನ್ನು ಬೆನ್ನಟ್ಟಿದಾಗ ಒಬ್ಬ ವ್ಯಕ್ತಿ ಪಿಸ್ತೂಲನ್ನು ಹೊರತೆಗೆದು ನಮ್ಮ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು. ಪ್ರತೀಕಾರದ ಗುಂಡಿನ ದಾಳಿಯಲ್ಲಿ, ಪಿಲಿಯನ್ ರೈಡರ್ ಕಾಲಿಗೆ ಗುಂಡು ಹಾರಿಸಲಾಯಿತು. ಮೂವರನ್ನೂ ಬಂಧಿಸಲಾಗಿದೆ ಎಂದು ಡಿಸಿಪಿ (ದಕ್ಷಿಣ) ಬೆನಿಟಾ ಮೇರಿ ಜೈಕರ್ ಹೇಳಿದರು.
ವ್ಯಕ್ತಿಗಳನ್ನು ಅಭಿ ಸೌರವ್, ಗುರುದೇವ್ ಸಿಂಗ್ ಮತ್ತು ಇನ್ನೊಬ್ಬ ಅಪ್ರಾಪ್ತ ಎಂದು ಗುರುತಿಸಲಾಗಿದೆ. ಪೊಲೀಸರು ಅವರ ಬಳಿಯಿದ್ದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದ್ದು, ಪೊಲೀಸರು ಅವರ ಅಪರಾಧ ಇತಿಹಾಸವನ್ನು ಪರಿಶೀಲಿಸುತ್ತಿದ್ದಾರೆ.
ಇತ್ತೀಚೆಗೆ ದ್ವಾರಕಾದಲ್ಲಿ ನಡೆದ ಗುಂಡಿನ ದಾಳಿ ಬಳಿಕ ಸುಹೇಲ್ ಖಾನ್ ಎಂಬ ವಂಚಕನ್ನು ಪೊಲೀಸರು ಹಿಡಿದಿದ್ದರು. ಕೊಲೆ ಪ್ರಕರಣದಲ್ಲಿ ಪೊಲೀಸರು ಸುಹೇಲ್‌ಗಾಗಿ ಹುಡುಕಾಟ ನಡೆಸಿದ್ದರು. ಈತನ ವಿರುದ್ಧ ಸುಮಾರು ಅರ್ಧ ಡಜನ್ ಪ್ರಕರಣಗಳು ದಾಖಲಾಗಿವೆ. ಈ ದಾಳಿಯಲ್ಲಿ ಸುಹೇಲ್ ಕಾಲಿಗೆ ಗುಂಡು ತಗುಲಿತ್ತು.
ಇದನ್ನೂ ಓದಿ: ಮುಕೇಶ್ ಅಂಬಾನಿ ಅವರ ಮನೆಯ ವಿಳಾಸ ಕೇಳಿ ಆತಂಕ ಸೃಷ್ಟಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ