Jammu and Kashmir: ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ವಲಸೆ ಕಾರ್ಮಿಕರ ಮೇಲೆ ಉಗ್ರರಿಂದ ಗುಂಡಿನ ದಾಳಿ

|

Updated on: Jul 13, 2023 | 10:15 PM

ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಕೋರರನ್ನು ವಶಪಡಿಸುವುದಕ್ಕಾಗಿ ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.

Jammu and Kashmir: ಕಾಶ್ಮೀರದ ಶೋಪಿಯಾನ್​ನಲ್ಲಿ ಮೂವರು ವಲಸೆ ಕಾರ್ಮಿಕರ ಮೇಲೆ ಉಗ್ರರಿಂದ ಗುಂಡಿನ ದಾಳಿ
ಗಾಯಾಳು ಕಾರ್ಮಿಕರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು
Image Credit source: news9live
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರದ (South Kashmir) ಶೋಪಿಯಾನ್ ಜಿಲ್ಲೆಯ ಗಗ್ರಾನ್ (Gagran) ಪ್ರದೇಶದಲ್ಲಿ ಗುರುವಾರ ಸಂಜೆ ಅಪರಿಚಿತ ಬಂದೂಕುಧಾರಿಗಳು ಮೂವರು ವಲಸೆ ಕಾರ್ಮಿಕರ ಮೇಲೆ ಗುಂಡಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಇದೊಂದು ಭಯೋತ್ಪಾದಕ ದಾಳಿಯಾಗಿದೆ (Terrorist Attack). ಗಾಯಗೊಂಡ ಕಾರ್ಮಿಕರನ್ನು ಅನ್ವಾಲ್ ಥೋಕರ್, ಹೀರ್ಲಾಲ್ ಮತ್ತು ಪಾಂಟೂ ಎಂದು ಪೊಲೀಸರು ಗುರುತಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಶೋಪಿಯಾನ್​ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಕೋರರನ್ನು ವಶಪಡಿಸುವುದಕ್ಕಾಗಿ ಆ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.

ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ದಾಳಿಯನ್ನು ಖಂಡಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ. ಬಹಳ ದುರದೃಷ್ಟಕರ. ನಾನು ಈ ದಾಳಿಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ ಮತ್ತು ಗಾಯಗೊಂಡವರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ. ಅವರು ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.

ಶೋಪಿಯಾನ್ ಜಿಲ್ಲೆಯ ಗಗ್ರಾನ್‌ನಲ್ಲಿ ಅಮಾಯಕ ಕಾರ್ಮಿಕರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಮೂವರ ಮೇಲಿನ ಭೀಕರ ದಾಳಿಯಲ್ಲಿ ಶಾಮೀಲಾಗಿರುವ ಭಯೋತ್ಪಾದಕರ ಹತಾಶೆ, ಅಮಾನವೀಯತೆ ಮತ್ತು ಹೇಡಿತನವನ್ನು ಪ್ರತಿಬಿಂಬಿಸುತ್ತದೆ. ದಿನಸಿ ವಸ್ತುಗಳನ್ನು ಖರೀದಿಸಲು ಹೋಗಿದ್ದ ವೇಳೆ ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: ಸೀಮಾ ಹೈದರ್ ಮರಳಿ ಬರದಿದ್ದರೆ ’26/11 ರೀತಿಯಲ್ಲೇ ಉಗ್ರ ದಾಳಿ’; ಮುಂಬೈ ಪೊಲೀಸರಿಗೆ ಬೆದರಿಕೆ ಕರೆ

ಕೃತ್ಯದಲ್ಲಿ ಶಾಮೀಲಾದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಠಾಕೂರ್ ಪೊಲೀಸರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಗಾಯಗೊಂಡಿರುವ ಮೂವರೂ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:06 pm, Thu, 13 July 23