ಬೆಂಗಳೂರು: ಇತ್ತೀಚೆಗಷ್ಟೇ ಗಾಲ್ವಾನ್ ಕಣಿವೆಯಲ್ಲಿ ಚೀನಾ ಹಾಗೂ ಭಾರತ ಯೋಧರ ನಡುವೆ ನಡೆದ ಸಂಘರ್ಷದ ಬೆನ್ನಲ್ಲೇ ದೇಶವ್ಯಾಪ್ತಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಜನರು ಮುಂದಾದರು. ಇದೀಗ ರಾತ್ರಿ ಪ್ರಧಾನಿ ಮೋದಿ ದಿಢೀರನೇ ಚೀನಾದ ಆ್ಯಪ್ಗಳ ಮೇಲೆ ಸಮರ ಸಾರಿ ಟಿಕ್ ಟಾಕ್ ಸೇರಿದಂತೆ 59 ಆ್ಯಪ್ಗಳಿಗೆ ಭಾರತದಿಂದ ಗೇಟ್ಪಾಸ್ ನೀಡಿದ್ದಾರೆ.
ಪ್ರಧಾನಿ ಮೋದಿಯ ನಿರ್ಧಾರವನ್ನು ದೇಶಾದ್ಯಂತ ಜನರು ಸ್ವಾಗತಿಸಿದ್ದಾರೆ. ರಾತ್ರಿಯಿಂದಲೇ ಕೆಲವರು ಟಿಕ್ ಟಾಕ್ ಆ್ಯಪ್ಗಳನ್ನು ತಮ್ಮ ಮೊಬೈಲ್ನಿಂದ ಡಿಲೀಟ್ ಮಾಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಆದೇಶದ ಬಳಿಕ ನಿನ್ನೆ ರಾತ್ರಿಯೇ ಗೂಗಲ್ ಪ್ಲೇಸ್ಟೋರ್ನಲ್ಲಿ ಟಿಕ್ಟಾಕ್ ಡೌನ್ಲೋಡ್ ಆಗುತ್ತಿತ್ತು. ಆದ್ರೆ ಇಂದು ಬೆಳಗ್ಗೆಯಿಂದ ಪ್ಲೇಸ್ಟೋರ್ನಲ್ಲಿ ಟಿಕ್ಟಾಕ್ ಆ್ಯಪ್ ಲಭ್ಯವಾಗುತ್ತಿಲ್ಲ. ಆದ್ರೆ ಬೇರೊಂದು ರೂಪಗಳಲ್ಲಿ ಇನ್ನೂ ಟಿಕ್ಟಾಕ್ ಸಿಗುತ್ತಿದೆ.
ಟಿಕ್ ಟಾಕ್ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ
ಭಾರತ ಸರ್ಕಾರ ಟಿಕ್ಟಾಕ್ ಸೇರಿದಂತೆ 59 ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿದೆ. ಸರ್ಕಾರದ ಆದೇಶವನ್ನು ನಾವು ಅನುಸರಿಸುತ್ತಿದ್ದೇವೆ. ಹಾಗೂ ಈ ಬಗ್ಗೆ ಸ್ಪಷ್ಟನೆಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನ ನಾವು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ. ಟಿಕ್ಟಾಕ್ನ ಎಲ್ಲಾ ಮಾಹಿತಿಯನ್ನು ನಾವು ಗೌಪ್ಯವಾಗಿ ಹಾಗೂ ಭದ್ರವಾಗಿ ಇಟ್ಟಿದ್ದೇವೆ. ಟಿಕ್ ಟಾಕ್ ಆ್ಯಪ್ ಬಳಕೆದಾರರ ಮಾಹಿತಿ ಸುರಕ್ಷಿತವಾಗಿದೆ. ಚೀನಾ ಸರ್ಕಾರ ಸೇರಿದಂತೆ ಯಾವುದೇ ವಿದೇಶಿ ಸರ್ಕಾರದ ಜತೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇಂಟರ್ನೆಟ್ ಮೂಲಕ ಟಿಕ್ಟಾಕ್ ಕಾರ್ಯನಿರ್ವಹಿಸಲಿದ್ದು, ಭಾರತದ 14 ಭಾಷೆಯಲ್ಲಿ ಟಿಕ್ಟಾಕ್ ಲಭ್ಯವಿದೆ. ಅಲ್ಲದೆ, ನೂರಾರು ಮಿಲಿಯನ್ ಫಾಲೋವರ್ಸ್ ಆಗಿದ್ದಾರೆ. ಕಲಾವಿದರು, ವಿದ್ಯಾರ್ಥಿಗಳು, ಸೆಲೆಬ್ರೆಟಿಗಳು ಸೇರಿದಂತೆ ಹಲವರಿಗೆ ಟಿಕ್ಟಾಕ್ ಜೀವನಾಧಾರವಾಗಿದೆ ಎಂದು ಭಾರತದ ಟಿಕ್ಟಾಕ್ ಸಂಸ್ಥೆಯ ಮುಖ್ಯಸ್ಥ ನಿಖಿಲ್ ಗಾಂಧಿ ತಿಳಿಸಿದ್ದಾರೆ.
— TikTok India (@TikTok_IN) June 30, 2020
Published On - 11:48 am, Tue, 30 June 20