Senthil Balaji: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್

2014ರ ಮೇ ತಿಂಗಳಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ಸಾರಿಗೆ ಇಲಾಖೆಯಲ್ಲಿ ಚಾಲಕರು, ಕಂಡಕ್ಟರ್‌ಗಳು ಮತ್ತು ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಭ್ರಷ್ಟಾಚಾರದ ದೂರುಗಳು ಕೇಳಿಬಂದಿತ್ತು

Senthil Balaji: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಯ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್
ಸೆಂಥಿಲ್ ಬಾಲಾಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 14, 2023 | 6:31 PM

ಚೆನ್ನೈ: 2011 ಮತ್ತು 2015ರ ಅವಧಿಯಲ್ಲಿ ಎಐಎಡಿಎಂಕೆ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದಾಗ ನಡೆದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಮಾರು 19 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಜಾರಿ ನಿರ್ದೇಶನಾಲಯ (Enforcement Directorate) ತಮಿಳುನಾಡು (Tamil Nadu) ವಿದ್ಯುತ್ ಸಚಿವ ವಿ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಬುಧವಾರ ಚೆನ್ನೈನ ಗ್ನೀನ್ ವೇಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಿಂದ ಬಂಧಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಂಪುಟದ ಪ್ರಮುಖ ಸಚಿವರೊಬ್ಬರ ಬಂಧನಕ್ಕೆ ಕಾರಣವಾದ ಘಟನೆಗಳ ಟೈಮ್‌ಲೈನ್ ಇಲ್ಲಿದೆ.

ಸಾರಿಗೆ ಸಚಿವರಾಗಿದ್ದ ಸೆಂಥಿಲ್

ಕರೂರ್ ಶಾಸಕ ವಿ ಸೆಂಥಿಲ್ ಬಾಲಾಜಿ ಅವರು ದಿವಂಗತ ಜಯಲಲಿತಾ ಅವರ 2011-2016 ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದರು.

ಭ್ರಷ್ಟಾಚಾರ ಆರೋಪ

2014ರ ಮೇ ತಿಂಗಳಲ್ಲಿ ಸೆಂಥಿಲ್ ಬಾಲಾಜಿ ವಿರುದ್ಧ ಸಾರಿಗೆ ಇಲಾಖೆಯಲ್ಲಿ ಚಾಲಕರು, ಕಂಡಕ್ಟರ್‌ಗಳು ಮತ್ತು ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಭ್ರಷ್ಟಾಚಾರದ ದೂರುಗಳು ಕೇಳಿಬಂದಿತ್ತು. ಸರ್ಕಾರಿ ನೌಕರಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದರೂ ನೇಮಕಾತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಸಾರಿಗೆ ಉದ್ಯೋಗ ಹಗರಣದಲ್ಲಿ ಎಫ್‌ಐಆರ್

2015 ರಲ್ಲಿ ವಂಚನೆ, ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗಳ ಅಡಿಯಲ್ಲಿ ದೇವ ಸಹಾಯಮ್ ಅವರ ದೂರಿನ ಆಧಾರದ ಮೇಲೆ ಸೆಂಥಿಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಹೈಕೋರ್ಟ್ ಆದೇಶದ ಮೇರೆಗೆ ಅಂದಿನ ಸಾರಿಗೆ ಸಚಿವ ಸೆಂಥಿಲ್ ಬಾಲಾಜಿ, ಅವರ ಸಹೋದರ ಅಶೋಕ್ ಕುಮಾರ್, ಸೋದರ ಮಾವ ಕಾರ್ತಿಕ್ ಹಾಗೂ ಸಂಚಾರ ವಿಭಾಗದ ಅಧಿಕಾರಿಗಳು ಸೇರಿದಂತೆ 40 ಮಂದಿಯನ್ನು ಪ್ರಥಮ ಮಾಹಿತಿ ವರದಿಯಲ್ಲಿ ಸೇರಿಸಲಾಗಿತ್ತು. ಅದರ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು.

ಸಂಪುಟದಿಂದ ಹೊರ ಹಾಕಿದ ಜಯಲಲಿತಾ

2015: ಭ್ರಷ್ಟಾಚಾರದ ದೂರುಗಳನ್ನು ಎದುರಿಸಿದ ನಂತರ ಮುಖ್ಯಮಂತ್ರಿ ಜಯಲಲಿತಾ ಸೆಂಥಿಲ್ ಅವರನ್ನು ಸಂಪುಟದಿಂದ ತೆಗೆದುಹಾಕಿದರು.

ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ ಚೆನ್ನೈ ಆಸ್ಪತ್ರೆ, ಏಮ್ಸ್‌ಗೆ ಕರೆದೊಯ್ಯುವಂತೆ ಬಿಜೆಪಿ ಒತ್ತಾಯ

ನೇಮಕಾತಿ ಹಗರಣದಲ್ಲಿ ಚಾರ್ಜ್ ಶೀಟ್

2017: ಉದ್ಯೋಗ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಕ್ರೈಂ ಬ್ರಾಂಚ್ ಚಾರ್ಜ್ ಶೀಟ್ ಸಲ್ಲಿಸಿದ್ದರೂ, ಅದರಲ್ಲಿ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದ್ಯೋಗಿಗಳ ಹೆಸರನ್ನು ಸೇರಿಸಲಾಗಿಲ್ಲ ಎಂದು ಸಂತ್ರಸ್ತರು ಹೇಳಿದ್ದರು. ಇದಾದ ನಂತರ ಮರು ತನಿಖೆ ನಡೆಸಿ 6 ತಿಂಗಳೊಳಗೆ ಹೊಸ ಚಾರ್ಜ್ ಶೀಟ್ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ಸೆಂಥಿಲ್ ಬಾಲಾಜಿ ವಿರುದ್ಧ ಎಫ್‌ಐಆರ್

2017: ಚೆನ್ನೈ ನಗರ ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗ (CCB) ಸೆಂಥಿಲ್ ಬಾಲಾಜಿ ಮತ್ತು ಅವರ ಸಹಚರರ ವಿರುದ್ಧ ಉದ್ಯೋಗ ದಂಧೆ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ) ಮತ್ತು 420 (ವಂಚನೆ) ಅಡಿಯಲ್ಲಿ ಮೂರು ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

ಬಾಲಾಜಿ ವಿರುದ್ಧ ಇಡಿ ಪ್ರಕರಣ ದಾಖಲು

2021: ಜಾರಿ ನಿರ್ದೇಶನಾಲಯವು ಸೆಂಥಿಲ್ ಬಾಲಾಜಿ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ PMLA ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಸೆಂಥಿಲ್ ಬಾಲಾಜಿ ಅವರು ಇಡಿ ತನ್ನ ವಿರುದ್ಧ ಹೊರಡಿಸಿದ್ದ ಸಮನ್ಸ್‌ಗಳನ್ನು ರದ್ದುಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ಗೆ ಮನವಿ ಮಾಡಿದರು. ಈ ಪ್ರಕರಣದಲ್ಲಿ ಜಾರಿ ವಿಭಾಗದ ಸಮನ್ಸ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ. ಇದರ ವಿರುದ್ಧ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; 2024ರಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಎಂಕೆ ಸ್ಟಾಲಿನ್

ಪ್ರಕರಣಗಳನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

2021: ಸಂತ್ರಸ್ತರಲ್ಲಿ ಒಬ್ಬರಾದ ಷಣ್ಮುಗಂ ಅವರು ತಾವು ಪಾವತಿಸಿದ ಹಣವನ್ನು ಹಿಂತಿರುಗಿಸಿರುವುದರಿಂದ ದೂರು ವಾಪಸ್ ಪಡೆಯುವುದಾಗಿ ಹೇಳಿದರು. ಇದರ ನಂತರ, ಜುಲೈ 30, 2021 ರಂದು ಮದ್ರಾಸ್ ಹೈಕೋರ್ಟ್ ಸೆಂಥಿಲ್ ಬಾಲಾಜಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿತು.

ಮರು ತನಿಖೆಗೆ ಸುಪ್ರೀಂಕೋರ್ಟ್ ಆದೇಶ

2023, ಮೇ 16: ಉದ್ಯೋಗಕ್ಕಾಗಿ ಹಣ ಪಡೆದ ಹಗರಣದಲ್ಲಿ ಸುಪ್ರೀಂಕೋರ್ಟ್ 2022 ರ ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದು, ಸಚಿವರು ಮತ್ತು ಇತರರ ವಿರುದ್ಧ ಹೊಸ ತನಿಖೆಗೆ ಆದೇಶಿಸಿತು. ಪ್ರಕರಣದ ತನಿಖೆಯನ್ನು ಎರಡು ತಿಂಗಳೊಳಗೆ ಮುಕ್ತಾಯಗೊಳಿಸುವಂತೆ ಚೆನ್ನೈ ಕೇಂದ್ರ ಅಪರಾಧ ವಿಭಾಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ತನಿಖೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅನುಮತಿ ನೀಡಲಾಗಿದೆ.

ಸೆಂಥಿಲ್ ಬಾಲಾಜಿ ಆಸ್ತಿ ಮೇಲೆ ಐಟಿ ದಾಳಿ

2023, ಮೇ 29: ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ಅಶೋಕ್ ಅವರ ಸ್ಥಳೀಯ ಕರೂರ್ ಜಿಲ್ಲೆ ಸೇರಿದಂತೆ ತಮಿಳುನಾಡಿನಾದ್ಯಂತ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದರು. ಹುಡುಕಾಟಗಳು ಕೆಲವು ದಿನಗಳ ಕಾಲ ನಡೆಯಿತು.

ಇಡಿ ಬಂಧನ

2023 ಜೂನ್ 13: ಸೆಂಥಿಲ್ ಬಾಲಾಜಿ ಅವರ ಚೆನ್ನೈ ಮತ್ತು ಕರೂರ್ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದರು. ನಂತರ ಮರುದಿನ (ಬುಧವಾರ) ಅವರನ್ನು ಬಂಧಿಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ