ನಾಗಾಲ್ಯಾಂಡ್ನ ಮೋನ್ ಜಿಲ್ಲೆಯಲ್ಲಿ ನಿನ್ನೆ ನಡೆದ ಫೈರಿಂಗ್ (Nagaland Firing) ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಅಲ್ಲಿ ಉದ್ವಿಗ್ನ ವಾತಾವರಣವಿದ್ದು, ಮೋನ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ನ 5 ಜನರ ನಿಯೋಗವೊಂದು ಇಂದು ಮೋನ್ ಜಿಲ್ಲೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿದೆ. ಹಾಗೇ, ಈ ನಿಯೋಗ ಓಟಿಂಗ್ ಗ್ರಾಮಕ್ಕೆ ಭೇಟಿ ನೀಡಿ, ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ ಜನರೊಂದಿಗೆ ಮಾತುಕತಡೆ ನಡೆಸಲಿದೆ ಎಂದು ಹೇಳಲಾಗಿದೆ. ಈ ನಿಯೋಗದಲ್ಲಿ ಟಿಎಂಸಿ ಸಂಸದ ಪ್ರಸುನ್ ಬ್ಯಾನರ್ಜಿ, ಸುಷ್ಮಿತಾ ದೇವ್, ಮುಖಂಡರಾದ ಅಪರೂಪಾ ಪೊಡ್ಡಾರ್, ಸಂತನು ಸೇನ್ ಮತ್ತು ಟಿಎಂಸಿ ವಕ್ತಾರ ಬಿಸ್ವಜಿತ್ ದೇವ್ ಇರಲಿದ್ದಾರೆ.
ನಾಗಾಲ್ಯಾಂಡ್ನಲ್ಲಿ ನಿನ್ನೆ ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಗೆ 14 ನಾಗರಿಕರು ಮೃತಪಟ್ಟಿದ್ದರು. ಹಾಗೇ, ಈ ವೇಳೆ ಒಬ್ಬ ಯೋಧ ಕೂಡ ಮೃತಪಟ್ಟಿದ್ದಾರೆ. ದುರ್ಘಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದರು. ನಾಗಾಲ್ಯಾಂಡ್ನಲ್ಲಿ ನಡೆದ ದುರ್ಘಟನೆಯಿಂದ ಆತಂಕ, ನೋವಾಗಿದೆ. ಮೃತರ ಕುಟುಂಬಕ್ಕೆ ಸಾಂತ್ವನಗಳು. ಹಾಗೇ, ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ನಾನು ಆಶಿಸುತ್ತೇನೆ. ಈ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಅವರು ಟ್ವೀಟ್ ಮಾಡಿದ್ದರು.
ಆಗಿದ್ದೇನು?
ಓಟಿಂಗ್ ಗ್ರಾಮದ ಕೂಲಿ ಕಾರ್ಮಿಕರು ಕೆಲಸಕ್ಕೆಂದು ಸಮೀಪದ ಕಲ್ಲಿದ್ದಲು ಗಣಿಗೆ ಹೋಗಿದ್ದರು. ಸಂಜೆ ಕೆಲಸ ಮುಗಿದ ಬಳಿಕ ಒಂದು ಪಿಕ್ ಅಪ್ ವಾಹನದಲ್ಲಿ ಅವರೆಲ್ಲ ಮನೆಗೆ ಮರಳುತ್ತಿದ್ದರು. ಆದರೆ ಭದ್ರತಾ ಪಡೆಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇವರು ಭದ್ರತಾ ಪಡೆಯ ದಾಳಿಗೆ ಬಲಿಯಾಗಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆ ಗ್ರಾಮದ ಸ್ವಯಂಸೇವಕರು ಸಿಟ್ಟಿಗೆದ್ದು, ಅವರ ವಾಹನಗಳಿಗೆ ಬೆಂಕಿ ಹಾಕಿದ್ದಾರೆ. ಗಲಾಟೆ ಮಾಡಿದ್ದಾರೆ. ಸೇನೆಯ ಯೋಧರು ಉದ್ದೇಶ ಪೂರ್ವಕವಾಗಿ ಈ ಕೂಲಿ ಕಾರ್ಮಿಕರನ್ನು ಕೊಂದಿದ್ದಲ್ಲ ಎಂದು ಸೇನೆಯ ಅಸ್ಸಾಂ ರೈಫಲ್ಸ್ ಹೇಳಿಕೆ ನೀಡಿದೆ. ಮ್ಯಾನ್ಮಾರ್‌ನಲ್ಲಿ ನೆಲೆಗೊಂಡಿರುವ ನಿಷೇಧಿತ ಸಂಘಟನೆ ಎನ್‌ಎಸ್‌ಸಿಎನ್ (ಕೆ) ನ ಯುಂಗ್ ಆ್ಯಂಗ್ ಬಣದ ಉಗ್ರಗಾಮಿಗಳ ಗುಂಪೊಂದರ ಚಲನವಲನ ಈ ಪ್ರದೇಶದಲ್ಲಿ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಅದರ ಅನ್ವಯ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ದುರದೃಷ್ಟಕ್ಕೆ ಕೂಲಿಕಾರ್ಮಿಕರ ವಾಹನದ ಮೇಲೆ ಗುಂಡಿನ ದಾಳಿ ನಡೆದಿದೆ. ಹಾಗೇ, ಈ ಕೃತ್ಯದ ಬಗ್ಗೆ ವಿಷಾದವಿದೆ ಎಂದೂ ಅಸ್ಸಾಂ ರೈಫಲ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Babri Demolition Anniversary ಮಸೀದಿಯಲ್ಲಿ ಕೃಷ್ಣನ ಮೂರ್ತಿ ಪ್ರತಿಷ್ಠಾಪಿಸುವ ಬೆದರಿಕೆ; ಮಥುರಾದಲ್ಲಿ ಭಾರೀ ಭದ್ರತೆ