ಪಶ್ಚಿಮ ಬಂಗಾಳದಲ್ಲಿ ಎಷ್ಟು ಹೊತ್ತಿಗೆ ಯಾವ ಪಕ್ಷದ ಮುಖಂಡನ ಮೇಲೆ ದಾಳಿಯಾಗುತ್ತದೆ? ಯಾರಿಗೆ ಗುಂಡೇಟು ಬೀಳುತ್ತದೆ ಎಂದೇ ಗೊತ್ತಾಗುವುದಿಲ್ಲ. ಸದಾ ಒಬ್ಬರಲ್ಲ ಒಬ್ಬ ರಾಜಕೀಯ ಮುಖಂಡರ ಮೇಲೆ ಹಲ್ಲೆಯಾಗುತ್ತದೆ. ಕೊಲೆಗಳು ನಡೆಯುತ್ತವೆ. ಇದೀಗ ಅಲ್ಲಿನ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ ನಾಯಕ ಮಹ್ರಮ್ ಶೇಖ್ರನ್ನು ಅವರ ಮನೆಯ ಹೊರಗೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯಲ್ಲಿ ಶನಿವಾರ ರಾತ್ರ ದುರ್ಘಟನೆ ನಡೆದಿದೆ.
ಶನಿವಾರ ತಡರಾತ್ರಿ ಹೊತ್ತಿಗೆ ಮಹ್ರಮ್ ಶೇಖ್ ಮನೆಗೆ ಬಂದ ದುಷ್ಕರ್ಮಿಗಳು ಅವರಿಗೆ ಗುಂಡುಹೊಡೆದಿದ್ದಾರೆ. ನಂತರ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಪ್ರಯೋಜನ ಆಗಲಿಲ್ಲ. ಭಾನುವಾರ ಮುಂಜಾನೆ ಹೊತ್ತಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು, ಆತನನ್ನು ಹಿಡಿಯುವ ಪ್ರಯತ್ನಗಳು ನಡೆಯುತ್ತಿವೆ. ಯಾವ ಕಾರಣಕ್ಕಾಗಿ ಹತ್ಯೆ ನಡೆದಿದೆ ಎಂಬಿತ್ಯಾದಿ ವಿಚಾತವಾಗಿ ತನಿಖೆ ಪ್ರಾರಂಭವಾಗಿದೆ.
ಪಶ್ಚಿಮಬಂಗಾಳದಲ್ಲಿ ಹಿಂಸಾಚಾರ ಹೊಸದಲ್ಲ. ಯಾವುದಾದರೂ ಚುನಾವಣೆ ಬಂತೆಂದರೆ ಅದರೊಂದಿಗೇ ಅಲ್ಲಿ ಹಿಂಸಾಚಾರವೂ ಶುರುವಾಗುತ್ತದೆ. ಕಳೆದ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ ಭಾರಿ ಪ್ರಮಾಣದ ಗಲಭೆ ಉಂಟಾಗಿತ್ತು. ಮನೆಗಳಿಗೆಲ್ಲ ಬೆಂಕಿ ಇಡಲಾಗಿತ್ತು. ಬಿಜೆಪಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಇನ್ನು ಪಶ್ಚಿಮಬಂಗಾಳದಲ್ಲಿ ನೇರ ಸ್ಪರ್ಧೆ, ವೈರತ್ವ ಇರುವುದು ಬಿಜೆಪಿ ಮತ್ತು ಟಿಎಂಸಿ ನಡುವೆ. ಈ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರ ಮೇಲೆ ಹಲ್ಲೆಗಳು ಜಾಸ್ತಿ. ಅದಾದ ಬಳಿಕ ಪರಸ್ಪರರ ಮೇಲೆ ಆರೋಪ ತೀರ ಸಾಮಾನ್ಯವಾಗಿಬಿಟ್ಟಿದೆ.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ; ನದಿ ಪಾತ್ರಕ್ಕೆ ತೆರಳದಂತೆ ಡಂಗೂರ ಸಾರಿ ಜನರಿಗೆ ಎಚ್ಚರಿಕೆ