ಖಲಿಸ್ತಾನಿಗಳನ್ನು ಮಹಿಳಾ ಪ್ರಧಾನಿ ಸೊಳ್ಳೆಗಳಂತೆ ಹೊಸಕಿ ಹಾಕಿದ್ದರು ಎಂದ ಕಂಗನಾ ವಿರುದ್ಧ ದೂರು; ಜೈಲಿಗೆ ಹಾಕಲು ಆಗ್ರಹ

ಅಕಾಲಿ ದಳ ನಾಯಕ, ದೆಹಲಿ ಸಿಖ್​ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್​ ಸಿರ್ಸಾ , ನಟಿ ಕಂಗನಾ ರಣಾವತ್​ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಖಲಿಸ್ತಾನಿಗಳನ್ನು ಮಹಿಳಾ ಪ್ರಧಾನಿ ಸೊಳ್ಳೆಗಳಂತೆ ಹೊಸಕಿ ಹಾಕಿದ್ದರು ಎಂದ ಕಂಗನಾ ವಿರುದ್ಧ ದೂರು; ಜೈಲಿಗೆ ಹಾಕಲು ಆಗ್ರಹ
ಕಂಗನಾ ರಣಾವತ್ ಮತ್ತು ಇನ್​ಸ್ಟಾಗ್ರಾಂ ಸ್ಟೋರಿ

ಬಾಲಿವುಡ್​ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್​​ ಇತ್ತೀಚೆಗೆ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ನಿನ್ನೆ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಇಂದಿರಾಗಾಂಧಿಯವರ ಹೆಸರನ್ನು ಉಲ್ಲೇಖಿಸದೆ ಒಂದು ಬರಹ ಹಾಕಿದ್ದರು. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆದ ಬೆನ್ನಲ್ಲೇ ಸ್ಟೋರಿ ಹಾಕಿದ್ದ ಅವರು, ‘ಇಂದು ಬಹುಶಃ ಖಲಿಸ್ತಾನಿ ಭಯೋತ್ಪಾದಕರು ಸರ್ಕಾರ ತೋಳನ್ನು ತಿರುಚಿತ್ತರಬಹುದು. ಆದರೆ ಈ ಸಂದರ್ಭದಲ್ಲಿ ನಾವು ಒಬ್ಬ ಮಹಿಳೆಯರನ್ನು ಮರೆಯುವಂತಿಲ್ಲ. ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದ ಅವರು ಖಲಿಸ್ತಾನಿ ಉಗ್ರರನ್ನು ಸೊಳ್ಳೆಗಳಂತೆ ತಮ್ಮ ಬೂಟಿನಡಿ ಹಾಕಿ ಹೊಸಕಿದ್ದರು. ಖಲಿಸ್ತಾನಿಗಳು ದೇಶವನ್ನು ಒಡೆಯಲು ಬಿಡಲಿಲ್ಲ’ ಎಂದು ಕಂಗನಾ ಹೇಳಿದ್ದರು.

ಆದರೆ ಈ ಇನ್​ಸ್ಟಾಗ್ರಾಂ ಸ್ಟೋರಿ ದೊಡ್ಡ ವಿವಾದ ಸೃಷ್ಟಿಸಿದೆ. ಇಲ್ಲಿ ಇಡೀ ಸಿಖ್​ ಸಮುದಾಯವನ್ನು ಅವರು ಖಲಿಸ್ತಾನಿ ಭಯೋತ್ಪಾದಕರು ಎಂದು ಉಲ್ಲೇಖಿಸಿದ್ದಾರೆ ಎಂದು ಆರೋಪಿಸಿ, ಅಕಾಲಿ ದಳ ನಾಯಕ, ದೆಹಲಿ ಸಿಖ್​ ಗುರುದ್ವಾರ ನಿರ್ವಹಣಾ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್​ ಸಿರ್ಸಾ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಂಗನಾ ರಣಾವತ್​ ಹೇಳಿಕೆ ಸರಿಯಾಗಿಲ್ಲ. ಇವರು ಉದ್ದೇಶಪೂರ್ವಕವಾಗಿಯೇ ರೈತರ ಪ್ರತಿಭಟನೆಯನ್ನು ಖಲಿಸ್ತಾನಿ ಚಳವಳಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಂಗನಾ ರಣಾವತ್​ ಅವರದ್ದು ಅತ್ಯಂತ ಕೀಳುಮಟ್ಟದ ಮನಸ್ಥಿತಿ. ಖಲಿಸ್ತಾನಿ ಭಯೋತ್ಪಾದಕರಿಂದಾಗಿ ಇಂದು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು ಎಂದು ಆಕೆ ಹೇಳಿದ್ದು ಇಡೀ ಸಿಖ್​ ಸಮುದಾಯಕ್ಕೆ ಮಾಡಿದ ಅವಮಾನ. ಆಕೆ ದ್ವೇಷದ ಕಾರ್ಖಾನೆ.  ಕಂಗನಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಮತ್ತು ಭದ್ರತೆಯನ್ನು ವಾಪಸ್​ ಪಡೆಯಬೇಕು. ನಟಿಯನ್ನು ಒಂದೋ ಜೈಲಿನಲ್ಲಿಡಿ ಅಥವಾ ಮಾನಸಿಕ ರೋಗದ ಆಸ್ಪತ್ರೆಯಲ್ಲಿ ಬಿಡಿ ಎಂದು ಸಿರ್ಸಾ ಆಗ್ರಹಿಸಿದ್ದಾರೆ.

ಕಂಗನಾ ರಣಾವತ್​ ವಿವಾದಾತ್ಮಕವಾಗಿ ಮಾತನಾಡುತ್ತಿರುವುದು ಇದೇ ಮೊದಲೇನೂ ಅಲ್ಲ. ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟದ ಬಗ್ಗೆಯೂ ಪ್ರಶ್ನೆ ಮಾಡಿದ್ದರು. ಒಂದು ಕೆನ್ನೆಗೆ ಹೊಡೆದಾಕ್ಷಣ ಇನ್ನೊಂದು ಕೆನ್ನೆ ತೋರಿಸಿದ್ದಕ್ಕೆ ಸಿಕ್ಕಿದ್ದಲ್ಲ ಸ್ವಾತಂತ್ರ್ಯ. 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದ ಕಂಗನಾ ರಣಾವತ್​, ಸುಭಾಷ್​ ಚಂದ್ರ ಬೋಸ್​, ಭಗತ್​ ಸಿಂಗ್​​ರಂತಹ ಕ್ರಾಂತಿಕಾರಿಗಳಿಗೆ ಮಹಾತ್ಮ ಗಾಂಧಿ ಬೆಂಬಲ ಸಿಕ್ಕಿರಲಿಲ್ಲ. ಸುಭಾಷ್​ ಚಂದ್ರ ಬೋಸ್​ರನ್ನು ಬ್ರಿಟಿಷರಿಗೆ ಒಪ್ಪಿಸಲು ಗಾಂಧಿ, ನೆಹರು ಸಿದ್ಧರಾಗಿದ್ದರು ಎಂದೂ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹೇಳಿಕೊಂಡಿದ್ದರು. ಒಟ್ಟಾರೆ ಇತ್ತೀಚೆಗೆ ಒಂದಲ್ಲ ಒಂದು ಹೇಳಿಕೆ ಮೂಲಕ ನಟಿ ಸುದ್ದಿಯಾಗುತ್ತಲೇ ಇದ್ದಾರೆ.

ಇದನ್ನೂ ಓದಿ: ಧಾನ್ಯ ಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗೆ ತರುವ ಹುತ್ತರಿ ಹಬ್ಬದ ಆಚರಣೆ; ಕೊಡಗಿನ ಸಂಸ್ಕೃತಿ ಅನಾವರಣ

Click on your DTH Provider to Add TV9 Kannada