AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್​ಟಿಆರ್ ಸಿನಿಮಾ ನೋಡಿದ ಅಭಿಮಾನಿ

Jr NTR: ಜೂ ಎನ್​ಟಿಆರ್ ಅಭಿಮಾನಿಯೊಬ್ಬರು ಕ್ಲಿಷ್ಟಕರವಾದ ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುವಾಗ ಎಚ್ಚರವಾಗಿರಲು ಮತ್ತು ಗಾಬರಿಯಾಗದೆ ಸಾಮಾನ್ಯ ಸ್ಥಿತಿಯಲ್ಲಿರಲು ತಮ್ಮ ಮೆಚ್ಚಿನ ಸಿನಿಮಾ ವೀಕ್ಷಿಸಿದ್ದಾರೆ.

ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್​ಟಿಆರ್ ಸಿನಿಮಾ ನೋಡಿದ ಅಭಿಮಾನಿ
ಮಂಜುನಾಥ ಸಿ.
|

Updated on: Sep 19, 2024 | 9:17 PM

Share

ಜೂ ಎನ್​ಟಿಆರ್ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವುದು ಮಾತ್ರವೇ ಅಲ್ಲದೆ ಎಲ್ಲ ವಯೋಮಾನದ, ಎಲ್ಲ ವರ್ಗದ ಅಭಿಮಾನಿಗಳನ್ನೂ ಹೊಂದಿರುವ ಅಪರೂಪದ ನಟ. ಮಹಿಳೆಯರು, ಮಕ್ಕಳು, ಯುವಕರು, ವಯಸ್ಸಾದವರು, ಎ ಕ್ಲಾಸ್, ಸಿ ಕ್ಲಾಸ್ ಎಲ್ಲ ವರ್ಗದ ಅಭಿಮಾನಿಗಳೂ ಸಹ ಜೂ ಎನ್​ಟಿಆರ್​ಗೆ ಇದ್ದಾರೆ. ಕೆಲವು ಅಭಿಮಾನಿಗಳಂತೂ ಜೂ ಎನ್​ಟಿಆರ್​ ಅನ್ನು ಮನೆ ಸದಸ್ಯರೆಂದೇ ನಂಬಿದ್ದಾರೆ. ಇತ್ತೀಚೆಗಷ್ಟೆ ಶಶಾಂಕ್ ಹೆಸರಿನ ಕ್ಯಾನ್ಸರ್ ಪೀಡಿದ ಜೂ ಎನ್​ಟಿಆರ್ ಅಭಿಮಾನಿಯೊಬ್ಬ ಸಾಯುವ ಮುಂಚೆ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತ ಪಡಿಸಿದ್ದ, ಮತ್ತೊಬ್ಬ ಮಹಿಳಾ ಅಭಿಮಾನಿ, ಮೆದುಳು ಶಸ್ತ್ರಚಿಕಿತ್ಸೆ ನಡೆಯುವಾಗ ಎಚ್ಚರ ಇರಲೆಂದು ಜೂ ಎನ್​ಟಿಆರ್ ಸಿನಿಮಾ ನೋಡಿದ್ದಾರೆ!

ಆಂಧ್ರ ಪ್ರದೇಶದ ಈಸ್ಟ್ ಗೋಧಾವರಿ ಜಿಲ್ಲೆಯ 55 ವರ್ಷದ ಮಹಿಳೆ ಅನಂತಲಕ್ಷ್ಮಿ ಎಂಬುವರಿಗೆ ಇತ್ತೀಚೆಗೆ ತುಸು ಸಂಕೀರ್ಣವಾದ ಮೆದುಳಿನ ಶಸ್ತ್ರ ಚಿಕತ್ಸೆ ಮಾಡಲಾಯ್ತು. ಈ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಅನಂತಲಕ್ಷ್ಮಿ ಎಚ್ಚರವಿರಬೇಕಿತ್ತು ಹಾಗೂ ಗಾಬರಿ ಆಗದಂತೆ ಸಾಮಾನ್ಯ ಸ್ಥಿತಿಯಲ್ಲಿ ಇರುವುದು ಮುಖ್ಯವಾಗಿತ್ತು. ಇದೇ ಕಾರಣಕ್ಕೆ 55 ವರ್ಷದ ಅನಂತಲಕ್ಷ್ಮಿ ಜೂ ಎನ್​ಟಿಆರ್ ಅಭಿಮಾನಿಯಾಗಿದ್ದು, ಮೆದುಳು ಶಸ್ತ್ರಚಿಕಿತ್ಸೆ ಸಮಯದಲ್ಲಿ ಜೂ ಎನ್​ಟಿಆರ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಅದುರ್ಸ್’ ಅನ್ನು ಟ್ಯಾಬ್ಲೆಟ್​ನಲ್ಲಿ ವೀಕ್ಷಿಸಿದ್ದಾರೆ. ಅನಂತಲಕ್ಷ್ಮಿ ಸಿನಿಮಾ ನೋಡುವ ಸಮಯದಲ್ಲಿ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕತ್ಸೆ ಮಾಡಿದ್ದಾರೆ ವೈದ್ಯರು.

ಇದನ್ನೂ ಓದಿ:‘ನನ್ನೊಂದಿಗೆ ಸಿನಿಮಾ ಮಾಡಿ’: ತಮಿಳು ನಿರ್ದೇಶಕನ ಬಳಿ ಮನವಿ ಮಾಡಿದ ಜೂ ಎನ್​ಟಿಆರ್

ಈಸ್ಟ್ ಗೋಧಾವರಿ ಜಿಲ್ಲೆಯ ಅನಂತಲಕ್ಷ್ಮಿ ಅವರಿಗೆ ಮೆದುಳಿನಲ್ಲಿ ಟ್ಯೂಮರ್ ಆಗಿತ್ತು. ಅವರಿಗೆ ಪದೇ ಪದೇ ತಲೆ ನೋವು ಬರುವುದು, ನಡೆಯುವಾಗ ಸಮತೋಲನ ತಪ್ಪುವುದು ಆಗುತ್ತಿತ್ತು. ಪರೀಕ್ಷೆ ಮಾಡಿದಾಗ ಮಹಿಳೆಯ ಮೆದುಳಿನ ಎಡಭಾಗದಲ್ಲಿ 2.7*3.3 ಸೆಂಟಿಮೀಟರ್ ಗಾತ್ರದ ಟ್ಯೂಮರ್ ಪತ್ತೆಯಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆಂಬ ಕಾರಣಕ್ಕೆ ಈಸ್ಟ್ ಗೋಧಾವರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ರೋಗಿಗೆ ವಯಸ್ಸು ಹೆಚ್ಚಾಗಿದ್ದು, ಶಸ್ತ್ರಚಿಕಿತ್ಸೆ ಬಗ್ಗೆ ಹೆಚ್ಚಿನ ಜ್ಞಾನ ಇಲ್ಲದೇ ಇದ್ದ ಕಾರಣ, ರೋಗಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಎಚ್ಚರದಿಂದ ಹಾಗೂ ಸಾಮಾನ್ಯ ಸ್ಥಿತಿಯಲ್ಲಿರಲು ಅವರದ್ದೇ ಕೋರಿಕೆಯಂತೆ ಜೂ ಎನ್​ಟಿಆರ್ ಸಿನಿಮಾ ಪ್ರದರ್ಶಿಸಲಾಗಿತ್ತು.

ಕೆಲವು ದಿನದ ಹಿಂದಷ್ಟೆ ಬ್ಲಡ್ ಕ್ಯಾನ್ಸರ್ ರೋಗಿ ಶಶಾಂಕ್ ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ನೋಡುವ ಆಸೆ ವ್ಯಕ್ತಪಡಿಸಿದ್ದ, ಆತನೊಂದಿಗೆ ಆತನ ತಾಯಿಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದ ಜೂ ಎನ್​ಟಿಆರ್ ಇಬ್ಬರಿಗೂ ಧೈರ್ಯ ತುಂಬುವ ಕಾರ್ಯ ಮಾಡಿದ್ದರು. ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಇದೇ ತಿಂಗಳು 27ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದು, ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ