ಮರು ಬಿಡುಗಡೆಯಲ್ಲಿ ಖುಲಾಯಿಸಿದ ಅದೃಷ್ಟ, ‘ತುಂಬಾಡ್’ ಭರ್ಜರಿ ಕಲೆಕ್ಷನ್
ಭಾರತದ ಅತ್ಯುತ್ತಮ ಹಾರರ್ ಸಿನಿಮಾ ಎನ್ನಲಾಗುವ ‘ತುಂಬಾಡ್’ ಆರು ವರ್ಷಗಳ ಬಳಿಕ ಮರು ಬಿಡುಗಡೆ ಆಗಿದ್ದು, ಮೊದಲ ಬಾರಿ ಬಿಡುಗಡೆ ಆದಾಗ ಗಳಿಸಿದ ಒಟ್ಟು ಮೊತ್ತವನ್ನು ಕೇವಲ ಆರು ದಿನದಲ್ಲೇ ಕಲೆಕ್ಷನ್ ಮಾಡಿದೆ. ಮರು ಬಿಡುಗಡೆಯಲ್ಲಿ ನಿರ್ಮಾಪಕರ ಅದೃಷ್ಟ ಖುಲಾಯಿಸಿದೆ.
ಕೆಲವು ಸಿನಿಮಾಗಳು ಬಿಡುಗಡೆ ಆದಾಗ ಒಳ್ಳೆಯ ಪ್ರದರ್ಶನ ಕಂಡಿರುವುದಿಲ್ಲ ಆದರೆ ಸಮಯ ಆಗುತ್ತಾ ಆಗುತ್ತಾ ಜನರಿಗೆ ಆ ಸಿನಿಮಾದ ಮಹತ್ವ, ಅದರ ಕಲಾತ್ಮಕತೆ, ಸಿನಿಮಾದ ಪ್ರಾಮುಖ್ಯತೆ ಅರ್ಥವಾಗುತ್ತಾ ಹೋಗುತ್ತದೆ. ಅದನ್ನು ‘ಕಲ್ಟ್’ ಸಿನಿಮಾ ಎಂದು ಕರೆಯುವ ರೂಢಿ ಇತ್ತೀಚೆಗೆ ಶುರುವಾಗಿದೆ. ಅಂಥಹಾ ‘ಕಲ್ಟ್’ ಸಿನಿಮಾ ಸಾಲಿಗೆ ಸೇರುವ ಸಿನಿಮಾ ‘ತುಂಬಾಡ್’. ಈ ಮರಾಠಿ ಸಿನಿಮಾ ಭಾರತದಲ್ಲಿ ಈವರೆಗೆ ಬಂದ ಅತ್ಯುತ್ತಮ ಹಾರರ್ ಸಿನಿಮಾಗಳಲ್ಲಿ ಪ್ರಮುಖವಾದುದು. ಸಿನಿಮಾ ಮೊದಲು ಬಿಡುಗಡೆ ಆದಾಗ ದೊಡ್ಡದಾಗಿ ಸದ್ದು ಮಾಡಲಿಲ್ಲ ಆದರೆ ಆ ನಂತರ ಇದನ್ನು ನೋಡಿದ ಜನರೇ ಸಿನಿಮಾಕ್ಕೆ ಪ್ರಚಾರ ನೀಡಿ, ಸಿನಿಮಾದ ಮಹತ್ವದ, ಸಿನಿಮಾದ ಕಲಾತ್ಮಕತೆಯ ಬಗ್ಗೆ ಚರ್ಚೆಯಾಗಿ ಈಗಿದು ‘ಕಲ್ಟ್’ ಆಗಿದೆ. ಇತ್ತೀಚೆಗೆ ಈ ಸಿನಿಮಾ ಮರು ಬಿಡುಗಡೆ ಆಗಿದ್ದು, ಮರು ಬಿಡುಗಡೆಯಲ್ಲಿ ಸಿನಿಮಾದ ಅದೃಷ್ಟ ಖುಲಾಯಿಸಿದೆ.
‘ತುಂಬಾಡ್’ ಸಿನಿಮಾ ಕಳೆದ ವಾರ ಮರು ಬಿಡುಗಡೆ ಆಯ್ತು. ಮೊದಲ ದಿನ ಸಾಧಾರಣ ಗಳಿಕೆ ಮಾಡಿತು, ಆದರೆ ಈ ಸಿನಿಮಾ ಮರು ಬಿಡುಗಡೆ ಆದ ದಿನದಿಂದಲೂ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಸಾಗುತ್ತಿದೆ. ಶೋಗಳ ಸಂಖ್ಯೆಯೂ ಹೆಚ್ಚುತ್ತಲೇ ಸಾಗುತ್ತಿದೆ. ‘ತುಂಬಾಡ್’ ಸಿನಿಮಾ ಮೊದಲ ಬಾರಿಗೆ 2018 ರಲ್ಲಿ ಬಿಡುಗಡೆ ಆದಾಗ ಎಷ್ಟು ಕಲೆಕ್ಷನ್ ಮಾಡಿತ್ತೊ ಅಷ್ಟು ಹಣವನ್ನು ಕೇವಲ ಆರು ದಿನದಲ್ಲಿ ಗಳಿಕೆ ಮಾಡಿದೆ. ಅಲ್ಲದೆ ಕಲೆಕ್ಷನ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದ್ದು, ಈಗ ಗಳಿಕೆ ಆಗಿರುವ ಮೊತ್ತದ ಎರಡರಷ್ಟು ಹಣ ಹರಿದು ಬರುವ ಸಾಧ್ಯತೆ ಇದೆ.
ಇದನ್ನೂ ಓದಿ:‘ತುಂಬಾಡ್’ ಮರುಬಿಡುಗಡೆ; ಹಾರರ್ ಪ್ರಿಯರಿಗೆ ಸಿಹಿ ಸುದ್ದಿ
‘ತುಂಬಾಡ್’ ಮರು ಬಿಡುಗಡೆ ಆದ ಆರು ದಿನಗಳಲ್ಲಿ ಸುಮಾರು 13 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. ವೀಕೆಂಡ್ನಲ್ಲಿ ಈ ಕಲೆಕ್ಷನ್ ಹೆಚ್ಚಾಗುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. 2018ರಲ್ಲಿ ಮೊದಲ ಬಾರಿಗೆ ಈ ಸಿನಿಮಾ ಬಿಡುಗಡೆ ಆದಾಗ ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್ 12.50 ಕೋಟಿ ರೂಪಾಯಿ ಆಗಿತ್ತು. ಆದರೆ ಆ ಮೊತ್ತ ಕೇವಲ ಆರು ದಿನದಲ್ಲೇ ನಿರ್ಮಾಪಕರ ಜೋಳಿಗೆಗೆ ಬಂದು ಸೇರಿದೆ. ಇನ್ನು ಈ ವೀಕೆಂಡ್ಗೆ ಸುಮಾರು 6 ರಿಂದ ಏಳು ಕೋಟಿ ಕಲೆಕ್ಷನ್ ಆಗುವ ನಿರೀಕ್ಷೆ ಇದೆ.
‘ತುಂಬಾಡ್’ ಸಿನಿಮಾವನ್ನು ರಾಹಿ ಅನಿಲ್ ಬರವೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು ಸೋಹುಮ್ ಶಾ, ಈ ಸಿನಿಮಾಕ್ಕಾಗಿ ಅವರು ತಮ್ಮ ಆಸ್ತಿ ಸಹ ಮಾರಾಟ ಮಾಡಿದ್ದರು. ಈಗ ಸಿನಿಮಾ ಬಿಡುಗಡೆ ಆಗಿ ಆರು ವರ್ಷದ ಬಳಿಕ ಮತ್ತೆ ಸಿನಿಮಾದಿಂದ ಹಣ ಗಳಿಸುತ್ತಿದ್ದಾರೆ. ಮಾತ್ರವಲ್ಲದೆ ಸಿನಿಮಾದ ಎರಡನೇ ಭಾಗ ಸಹ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ