ಬಿಜೆಪಿಗೆ ಪರ್ಯಾಯವಾದೀತೆ ಟಿಎಂಸಿ: ಹಲವು ಪ್ರಭಾವಿಗಳ ಸೇರ್ಪಡೆಯಿಂದ ಟಿಎಂಸಿ ಬಲ ವೃದ್ಧಿ

S Chandramohan

| Edited By: TV9 Digital Desk

Updated on:Oct 02, 2021 | 6:21 PM

ಈ ಬೆಳವಣಿಗೆಯ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆ ಇದೆ. ಪ್ರಧಾನಿ ಗಾದಿಯ ಮೇಲೆ ಮಮತಾ ಬ್ಯಾನರ್ಜಿ ಕಣ್ಣಿಟ್ಟಿರುವುದು ಕೂಡ ಈ ಬೆಳವಣಿಗೆಗೆ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ

ಬಿಜೆಪಿಗೆ ಪರ್ಯಾಯವಾದೀತೆ ಟಿಎಂಸಿ: ಹಲವು ಪ್ರಭಾವಿಗಳ ಸೇರ್ಪಡೆಯಿಂದ ಟಿಎಂಸಿ ಬಲ ವೃದ್ಧಿ
ತ್ರಿಪುರದ ಕಾಂಗ್ರೆಸ್ ನಾಯಕ ಮುಕುಲ್ ಸಂಗ್ಮಾ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ

Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ದೇಶದಲ್ಲಿ ಈಗ ಬಿಜೆಪಿಗೆ ಪರ್ಯಾಯ ಎಂಬಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ ತೊರೆದ ಹಲವು ನಾಯಕರು ಟಿಎಂಸಿ ಪಕ್ಷವನ್ನು ಸೇರುತ್ತಿದ್ದಾರೆ. ಸುಶ್ಮಿತಾ ದೇವ್, ಲೂಸಿನೋ ಫಾಲೇರಿಯೋ ಬಳಿಕ ಈಗ ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಸಹ ಟಿಎಂಸಿ ಸೇರುವ ಸಾಧ್ಯತೆ ಇದೆ. ಈ ಮೊದಲು ಪಶ್ಚಿಮ ಬಂಗಾಳಕ್ಕೆ ಸೀಮಿತವಾಗಿದ್ದ ತೃಣಮೂಲ ಕಾಂಗ್ರೆಸ್ ಇದೀಗ ಇತರ ರಾಜ್ಯಗಳಿಗೂ ನೆಲೆ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದೆ. ಈ ಬೆಳವಣಿಗೆಯ ಹಿಂದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮಹತ್ವಾಕಾಂಕ್ಷೆ ಇದೆ. ಪ್ರಧಾನಿ ಗಾದಿಯ ಮೇಲೆ ಮಮತಾ ಬ್ಯಾನರ್ಜಿ ಕಣ್ಣಿಟ್ಟಿರುವುದು ಕೂಡ ಈ ಬೆಳವಣಿಗೆಗೆ ಒಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ಪರ್ಯಾಯವಾದೀತೆ ಟಿಎಂಸಿ? ದೇಶದಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷವೇ ಪರ್ಯಾಯ ಪಕ್ಷ. ಏಕೆಂದರೆ, ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಇದೆ. ಕಾರ್ಯಕರ್ತರ ಪಡೆ ಇದೆ. ಆದರೆ, ಈಗ ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪಕ್ಷವಾಗಿ ಉಳಿದಿಲ್ಲ ಎಂದು ಕೆಲವು ದಿನಗಳ ಹಿಂದೆ ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದರು. ದೇಶದಲ್ಲಿ ದಿನೇದಿನೇ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಸ್ಥಾನವನ್ನು ತುಂಬಲು ಟಿಎಂಸಿ ಮುಂದಾಗುತ್ತಿದೆ. ಕಾಂಗ್ರೆಸ್ ದುರ್ಬಲವಾದ ರಾಜ್ಯಗಳಲ್ಲಿ ಟಿಎಂಸಿ ನೆಲೆ ವಿಸ್ತರಿಸಲು ಯತ್ನಿಸುತ್ತಿದೆ.

ತ್ರಿಪುರ, ಗೋವಾ ರಾಜ್ಯಗಳಲ್ಲಿ ಟಿಎಂಸಿ ಈಗಾಗಲೇ ನೆಲೆ ವಿಸ್ತರಣೆಗೆ ಮುಂದಾಗಿದೆ. ತ್ರಿಪುರ ರಾಜ್ಯದಲ್ಲಿ ಕೆಲ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷ ಸಂಘಟಿಸಲಾಗುತ್ತಿದೆ. ಅಸ್ಸಾಂ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಾಗಿದ್ದ ಮೋಹನ್ ದೇವ್ ಅವರ ಪುತ್ರಿ ಸುಶ್ಮಿತಾ ದೇವ್ ಅವರನ್ನು ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಲಾಗಿದೆ. ಗೋವಾದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಲೂಸಿನೋ ಫಾಲೇರಿಯೋರನ್ನು ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಈಗ ಟಿಎಂಸಿ ಕಣ್ಣು ಮೇಘಾಲಯದ ಮೇಲೆ ಬಿದ್ದಿದೆ. ಮೇಘಾಲಯದಲ್ಲೂ ಅಪರೇಷನ್ ಟಿಎಂಸಿ ನಡೆಸಲಾಗುತ್ತಿದೆ. ಮೇಘಾಲಯದ ಪ್ರಮುಖ ನಾಯಕ, ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾರನ್ನು ಟಿಎಂಸಿ ತನ್ನಡೆಗೆ ಸೆಳೆಯಲು ಯತ್ನಿಸುತ್ತಿದೆ. ಕಾಂಗ್ರೆಸ್ ತೊರೆದು 13 ಮಂದಿ ಶಾಸಕರ ಜೊತೆಗೆ ಮುಕುಲ್ ಸಂಗ್ಮಾ ಟಿಎಂಸಿ ಸೇರುವ ಸಾಧ್ಯತೆ ಇದೆ. ಕಳೆದ ವಾರವೇ ಮುಕುಲ್ ಸಂಗ್ಮಾ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಆ ವೇಳೆಯೇ ಟಿಎಂಸಿ ಪಕ್ಷದ ನಾಯಕರನ್ನು ಭೇಟಿಯಾಗಿ ಟಿಎಂಸಿ ಪಕ್ಷ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್​ಗೆ ಮುಕುಲ್ ಸಂಗ್ಮಾ ಆಪ್ತರಾಗಿದ್ದಾರೆ. ಪ್ರಶಾಂತ್ ಕಿಶೋರ್-ಮುಕುಲ್ ಸಂಗ್ಮಾ ಕೋಲ್ಕತ್ತಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮುಕುಲ್ ಸಂಗ್ಮಾ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಭಿನ್ನಾಭಿಪ್ರಾಯಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಈ ಕಾರಣದಿಂದ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಒಂದು ವೇಳೆ ಮುಕುಲ್ ಸಂಗ್ಮಾ ಪಕ್ಷ ಬದಲಾವಣೆ ಮಾಡಿ, ಟಿಎಂಸಿ ಸೇರಿದರೆ, 13 ಮಂದಿ ಕಾಂಗ್ರೆಸ್ ಶಾಸಕರು ಕೂಡ ಟಿಎಂಸಿ ಪಕ್ಷಕ್ಕೆ ಸೇರ್ಪಡೆ ಆಗುವರು.

ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುವ ವೇಳೆ ಸಿಎಂ ಮಮತಾ ಬ್ಯಾನರ್ಜಿ, ಟಿಎಂಸಿ ಪಕ್ಷವನ್ನು ರಾಷ್ಟ್ರದಾದ್ಯಂತ ವಿಸ್ತರಿಸುವ ಬಗ್ಗೆ ಮಾತನಾಡಿದ್ದರು. ಜೊತೆಗೆ ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಟಿಎಂಸಿ ಪಕ್ಷವೇ ಪರ್ಯಾಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದ್ದರು. ಗೋವಾ ಸೇರಿದಂತೆ ಚುನಾವಣೆ ನಡೆಯುವ ಇತರೆ ರಾಜ್ಯಗಳಿಗೂ ಪಕ್ಷದ ಸಂಘಟನೆಯನ್ನು ವಿಸ್ತರಿಸುವ ಬಗ್ಗೆ ಮಮತಾ ಬ್ಯಾನರ್ಜಿ ಹೇಳಿದ್ದರು. ಅದರಂತೆ ಈಗ ತ್ರಿಪುರ, ಅಸ್ಸಾಂ, ಗೋವಾದ ಬಳಿಕ ಟಿಎಂಸಿ ಪಕ್ಷದ ಕಣ್ಣು ಮೇಘಾಲಯ ರಾಜ್ಯದ ಮೇಲೆ ಬಿದ್ದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಮುಕುಲ್ ಸಂಗ್ಮಾ ಹಾಗೂ 13 ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಪಕ್ಷದ ನೆಲೆ ವಿಸ್ತರಿಸಲು ಮುಂದಾಗಿದೆ.

ಆದರೇ ಟಿಎಂಸಿ ಪಕ್ಷಕ್ಕೆ ರಾಷ್ಟ್ರದಾದ್ಯಂತ ನೆಲೆ ಇಲ್ಲ. ಟಿಎಂಸಿ ಪಕ್ಷವು ಬಿಜೆಪಿಗೆ ಪರ್ಯಾಯವಾಗಲು ಸಾಧ್ಯವಿಲ್ಲ. ದೇಶಾದ್ಯಂತ ಕಾರ್ಯಕರ್ತರು, ನಾಯಕರ ಪಡೆ ಹೊಂದಿರುವ ಕಾಂಗ್ರೆಸ್ ಪಕ್ಷವೇ ಬಿಜೆಪಿಗೆ ಪರ್ಯಾಯವಾಗಲು ಸಾಧ್ಯ ಎಂದು ಮೈಸೂರಿನ ಪತ್ರಕರ್ತ ಶಿವಕುಮಾರ್ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ. ಬಹುಶಃ ಸಿಎಂ ಮಮತಾ ಬ್ಯಾನರ್ಜಿಗೆ 80ರಿಂದ 100 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಮುಂದೆ ದೇಶದ ಪ್ರಧಾನಿಯಾಗಬಹುದು ಎಂಬ ಲೆಕ್ಕಾಚಾರ ಇರಬಹುದು. ಹೀಗಾಗಿ ಬೇರೆ ಬೇರೆ ರಾಜ್ಯಗಳಿಗೆ ಪಕ್ಷದ ನೆಲೆ ವಿಸ್ತರಿಸುತ್ತಿದ್ದಾರೆ ಎಂದು ಪತ್ರಕರ್ತ ಶಿವಕುಮಾರ್ ಹೇಳಿದ್ದಾರೆ

ಇದನ್ನೂ ಓದಿ: Sukanta Majumdar ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ವ್ಯಕ್ತಿ ಪರಿಚಯ

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ: ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬೇಬಿ ರಾಣಿ ಮೌರ್ಯ, ದಿಲೀಪ್ ಘೋಷ್​ ನೇಮಕ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada