ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧ್ಯಕ್ಷರ ಬದಲಾವಣೆ: ರಾಷ್ಟ್ರೀಯ ಉಪಾಧ್ಯಕ್ಷರಾಗಿ ಬೇಬಿ ರಾಣಿ ಮೌರ್ಯ, ದಿಲೀಪ್ ಘೋಷ್ ನೇಮಕ
ಹಲವು ಬಣಗಳಾಗಿ ಒಡೆದುಹೋಗಿದ್ದ ಬಿಜೆಪಿ ಪಶ್ಚಿಮ ಬಂಗಾಳ ಘಟಕಕ್ಕೆ ಸೋಮವಾರ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ.
ದೆಹಲಿ: ಹಲವು ಬಣಗಳಾಗಿ ಒಡೆದುಹೋಗಿದ್ದ ಬಿಜೆಪಿ ಪಶ್ಚಿಮ ಬಂಗಾಳ ಘಟಕಕ್ಕೆ ಸೋಮವಾರ ಹೊಸ ಅಧ್ಯಕ್ಷರನ್ನು ನೇಮಿಸಲಾಗಿದೆ. ಬಲುರ್ಘಾಟ್ ಲೋಕಸಭಾ ಕ್ಷೇತ್ರದ ಸದಸ್ಯ ಸುಕಾಂತ ಮಜುಮ್ದಾರ್ ಅವರನ್ನು ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷರಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇಮಿಸಿದ್ದಾರೆ.
ಈಚೆಗಷ್ಟೇ ಉತ್ತರಾಖಂಡ್ ರಾಜ್ಯಪಾಲರ ಸ್ಥಾನದಿಂದ ಕೆಳಗಿಳಿದಿದ್ದ ಬೇಬಿ ರಾಣಿ ಮೌರ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈವರೆಗೆ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ದಿಲೀಪ್ ಘೋಷ್ ಅವರಿಗೂ ರಾಷ್ಟ್ರೀಯ ಉಪಾಧ್ಯಕ್ಷರ ಸ್ಥಾನ ನೀಡಲಾಗಿದೆ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ದಿಲೀಪ್ ಘೋಷ್ ಬಿಜೆಪಿಯನ್ನು ಮುನ್ನಡೆಸಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿಫಲರಾದ ಹಿನ್ನೆಲೆಯಲ್ಲಿ ದಿಲೀಪ್ ಅವರ ಬದಲಾವಣೆ ಅನಿವಾರ್ಯವಾಗಿತ್ತು ಎಂದು ಪಕ್ಷದ ಮೂಲಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹತ್ತಾರು ರೋಡ್ ಶೋ ನಡೆಸಿ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರೂ ಮಮತಾ ಅವರ ಪದಚ್ಯುತಿ ಸಾಧ್ಯವಾಗಿರಲಿಲ್ಲ. ಸ್ಪಷ್ಟ ಬಹುಮತದೊಂದಿಗೆ ಮಮತಾ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದರು.
294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ 77 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಹಲವು ಶಾಸಕರು ಟಿಎಂಸಿಗೆ ಪಕ್ಷಾಂತರ ಮಾಡಿದ್ದರಿಂದ ಪಕ್ಷದ ಬಲ 71ಕ್ಕೆ ಇಳಿದಿತ್ತು. ಕಳೆದ ಶನಿವಾರವಷ್ಟೇ ಬಿಜೆಪಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿಗೂ ಘೋಷ್ ಅವರ ಸ್ಥಾನಚ್ಯುತಿಗೂ ಸಂಬಂಧವಿಲ್ಲ. ಘೋಷ್ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನವೆಂಬರ್ 2015ರಂದು ನೇಮಿಸಲಾಗಿತ್ತು. ಪಕ್ಷದ ಮುಖ್ಯಸ್ಥರಾಗಿ ಎರಡು ಅವಧಿ ಪೂರ್ಣಗಳಿಸಿದ್ದ ಅವರನ್ನು ಸಹಜವಾಗಿಯೇ ಬದಲಿಸಲಾಗಿದೆ. ಅವರ ಸ್ಥಾನಕ್ಕೆ ಯಾರನ್ನು ತರಬೇಕು ಎಂಬ ಬಗ್ಗೆ ಪಕ್ಷದ ಹಿರಿಯ ನಾಯಕರು ಪರಿಶೀಲನೆ ನಡೆಸುತ್ತಿದ್ದರು. ಹೀಗಾಗಿ ಅವರ ಬದಲಾವಣೆ ತಡವಾಯಿತು ಎಂದು ಮತ್ತೋರ್ವ ಹಿರಿಯ ನಾಯಕರು ಹೇಳಿದರು.
(BJP Politics West Bengal Baby Rani Maurya Dilip Ghosh Will be BJP vice presidents)
ಇದನ್ನೂ ಓದಿ: ಮೋದಿ ಬಳಿಕ 2024ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದು; ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಭವಿಷ್ಯ
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಕಾರ್ಟೂನ್ ಫಾರ್ವರ್ಡ್ ಮಾಡಿದ ಪ್ರಕರಣದಲ್ಲಿ ಇನ್ನೂ ಮುಗಿದಿಲ್ಲ ಅಂಬಿಕೇಶ್ ಮಹಾಪಾತ್ರರ ಕಾನೂನು ಹೋರಾಟ