ಮೋದಿ ಬಳಿಕ 2024ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದು; ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಭವಿಷ್ಯ

ಮಮತಾ ಬ್ಯಾನರ್ಜಿ 2024ರಲ್ಲಿ ಪ್ರಧಾನಮಂತ್ರಿಯಾಗಬೇಕು ಎಂಬುದು ನನ್ನ ಆಸೆ. ಮುಂದಿನ ಪ್ರಧಾನಿ ಸ್ಥಾನದ ಅಭ್ಯರ್ಥಿಗಳ ಪೈಕಿ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿದ್ದಾರೆ ಎಂದು ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

ಮೋದಿ ಬಳಿಕ 2024ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿಯಾಗಬಹುದು; ಬಿಜೆಪಿ ತೊರೆದ ಬಾಬುಲ್ ಸುಪ್ರಿಯೋ ಭವಿಷ್ಯ
ಬಾಬುಲ್ ಸುಪ್ರಿಯೋ

ಕೊಲ್ಕತ್ತಾ: 2 ದಿನಗಳ ಹಿಂದಷ್ಟೇ ಬಿಜೆಪಿ ತೊರೆದು ಟಿಎಂಸಿ ಸೇರಿದ್ದ ಕೇಂದ್ರ ಸರ್ಕಾರದ ಮಾಜಿ ಸಚಿವ ಬಾಬುಲ್ ಸುಪ್ರಿಯೋ, ಪ್ರಧಾನಿ ನರೇಂದ್ರ ಮೋದಿ ಬಳಿಕ 2024ರಲ್ಲಿ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಯಾಗಬಹುದು ಎಂದಿದ್ದಾರೆ. ಮುಂದಿನ ಪ್ರಧಾನಿ ಸ್ಥಾನದ ಅಭ್ಯರ್ಥಿಗಳ ಪೈಕಿ ಮಮತಾ ಬ್ಯಾನರ್ಜಿ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ನಾಯಕರಾದ ಮಮತಾ ಬ್ಯಾನರ್ಜಿ 2024ರಲ್ಲಿ ಪ್ರಧಾನಮಂತ್ರಿಯಾಗಬೇಕು ಎಂಬುದು ನನ್ನ ಆಸೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವೂ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದು ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪರ್ಯಾಯ ನಾಯಕರಾಗುವ ಅರ್ಹತೆ ಹೊಂದಿಲ್ಲ. ಆದರೆ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಎಲ್ಲ ರೀತಿಯಲ್ಲೂ ನರೇಂದ್ರ ಮೋದಿ ಎದುರಾಳಿಯಾಗಿ ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಟಿಎಂಸಿಯ ಭಾಗವಾದ ಜಾಗೋ ಬಾಂಗ್ಲಾ ಹೇಳಿತ್ತು. ಅದರ ಬೆನ್ನಲ್ಲೇ ಬಾಬುಲ್ ಸುಪ್ರಿಯೋ ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ತೊರೆದು ಟಿಎಂಸಿ ಸೇರಲು ಕಾರಣವೇನೆಂಬ ಬಗ್ಗೆಯೂ ಮಾತನಾಡಿರುವ ಬಾಬುಲ್ ಸುಪ್ರಿಯೋ, ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರಿ ನಾನು ಯಾವ ಇತಿಹಾಸವನ್ನೂ ಸೃಷ್ಟಿ ಮಾಡಿಲ್ಲ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಅನೇಕ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ನಾನು ಬಿಜೆಪಿಯಿಂದ ಟಿಎಂಸಿಗೆ ಬಂದಿದ್ದೇನೆ. ರಾಜಕೀಯದಲ್ಲಿ ಇದೆಲ್ಲವೂ ಸಾಮಾನ್ಯ ಎಂದಿದ್ದಾರೆ.

ಜುಲೈ 7ರಂದು ಕೇಂದ್ರ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಆಗಸ್ಟ್​ನಲ್ಲಿ ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಇಂದು ಮಾಜಿ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ತೃಣಮೂಲ ಕಾಂಗ್ರೆಸ್​ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ನಾನು ರಾಜಕೀಯದಿಂದ ದೂರ ಸರಿದರೂ ಸಂಸದನಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸುಪ್ರಿಯೋ ಘೋಷಿಸಿದ್ದರು.

ನಾನು ಸಂಸದನಾಗಿ ಮುಂದುವರಿಯುತ್ತೇನೆ ಆದರೆ ನಾನು ರಾಜಕೀಯವನ್ನು ಬಿಡುತ್ತೇನೆ. ನಾನು ಸಾಂವಿಧಾನಿಕ ಹುದ್ದೆಯಲ್ಲಿ ಮುಂದುವರೆಯುತ್ತೇನೆ. ನಾನು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಳ್ಳದೆ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಬಾಬುಲ್ ಸುಪ್ರಿಯೊ ಹೇಳಿದ್ದರು. ಅಲ್ಲದೆ, ಸರ್ಕಾರಿ ಬಂಗಲೆಯನ್ನು ಕೂಡ ಅವರು ತೊರೆದಿದ್ದರು.

ಅದಕ್ಕೂ ಮೊದಲು, ನಾನು ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿ, ರಾಜಕಾರಣದಿಂದ ದೂರ ಉಳಿಯುವುದಾಗಿ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದ ಬಾಬುಲ್ ಸುಪ್ರಿಯೋ, ನಾನು ಬಿಜೆಪಿಯನ್ನು ತೊರೆದು ಬೇರಾವ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದರು. ಆದರೆ, ಇದೀಗ ಆ ಭಾಗವನ್ನು ಡಿಲೀಟ್ ಮಾಡಿರುವ ಅವರು ತಮ್ಮ ಫೇಸ್​ಬುಕ್ ಪೋಸ್ಟ್ ಅನ್ನು ಎಡಿಟ್ ಮಾಡಿ ಆ ವಾಕ್ಯವನ್ನು ತೆಗೆದುಹಾಕಿದ್ದು ಚರ್ಚೆಗೆ ಕಾರಣವಾಗಿತ್ತು.

ಜುಲೈನಲ್ಲಿ ಡಿ.ವಿ. ಸದಾನಂದ ಗೌಡ ಸೇರಿದಂತೆ 12 ಸಚಿವರ ಬಳಿ ರಾಜೀನಾಮೆ ಪಡೆದು ಹೊಸ ಸಚಿವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿತ್ತು. ಈ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ನಮಗೆ ಹೈಕಮಾಂಡ್​ನಿಂದ ಆದೇಶ ನೀಡಲಾಗಿತ್ತು. ಅದರಂತೆ ರಾಜೀನಾಮೆ ನೀಡಿದ್ದೇವೆ ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಬರೆದುಕೊಂಡು ಅನೇಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮೊದಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಬಾಬುಲ್ ಸುಪ್ರಿಯೋ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯ ರಾಜ್ಯ ಸಚಿವರಾಗಿದ್ದರು. ಸಂಪುಟ ಪುನಾರಚನೆ ವೇಳೆ ಅವರು ರಾಜೀನಾಮೆ ನೀಡಿದ್ದರು. ಗಾಯಕರಾಗಿದ್ದ ಬಾಬುಲ್ ಸುಪ್ರಿಯೋ ಬಳಿಕ ರಾಜಕಾರಣಕ್ಕೆ ಇಳಿದಿದ್ದರು. ರಾಜಕಾರಣಕ್ಕೆ ಗುಡ್​ ಬೈ ಹೇಳುತ್ತಿರುವುದಾಗಿ ಸುದೀರ್ಘವಾದ ಫೇಸ್​ಬುಕ್ ಪೋಸ್ಟ್ ಮೂಲಕ ಸಂಸದ ಸುಪ್ರಿಯೋ ತಿಳಿಸಿದ್ದರು.

ನಾನು ಬಿಜೆಪಿ ಪಕ್ಷ ಬಿಟ್ಟು ಬೇರಾವ ಪಕ್ಷಕ್ಕೂ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷವನ್ನೂ ಸೇರುತ್ತಿಲ್ಲ. ನನಗೆ ತಮ್ಮ ಪಕ್ಷಕ್ಕೆ ಬರಬೇಕೆಂದು ಯಾರೂ ಫೋನ್ ಕೂಡ ಮಾಡಿಲ್ಲ. ಕರೆದರೂ ನಾನು ಹೋಗುವುದಿಲ್ಲ. ನಾನು ಒಂದೇ ತಂಡದಲ್ಲಿ ಆಡುವ ಆಟಗಾರ! ಎಂದಿಗೂ ಅದೇ ತಂಡಕ್ಕೆ ನನ್ನ ಬೆಂಬಲ ಇರುತ್ತದೆ. ನಾನು ಮೊದಲಿನಿಂದಲೂ ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದಲ್ಲೇ ಗುರುತಿಸಿಕೊಂಡಿದ್ದೇನೆ. ಮುಂದೆ ಕೂಡ ಬೇರೆ ಪಕ್ಷವನ್ನು ಸೇರುವುದಿಲ್ಲ. ಇಷ್ಟು ಬಿಟ್ಟು ಬೇರೇನೂ ಹೇಳಲು ಸಾಧ್ಯವಾಗುತ್ತಿಲ್ಲ! ಎಂದು ಬಾಬುಲ್ ಸುಪ್ರಿಯೋ ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿದ್ದರು. ಆದರೆ, ಈ ಭಾಗವನ್ನು ಈ ಡಿಲೀಟ್ ಮಾಡಿದ್ದರು. ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಬಾಬುಲ್ ಸುಪ್ರಿಯೋ ಅಧಿಕೃತವಾಗಿ ಬಿಜೆಪಿ ತೊರೆದು ಟಿಎಂಸಿ ಸೇರಿದ್ದಾರೆ.

ಇದನ್ನೂ ಓದಿ: ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದ ಬಿಜೆಪಿ ಮಾಜಿ ನಾಯಕ ಬಾಬುಲ್ ಸುಪ್ರಿಯೋ ಟಿಎಂಸಿಗೆ ಸೇರ್ಪಡೆ

Babul Supriyo: ಬಿಜೆಪಿ ತೊರೆದು ಬೇರೆ ಪಕ್ಷ ಸೇರುತ್ತಾರಾ ಸಂಸದ ಬಾಬುಲ್ ಸುಪ್ರಿಯೋ?; ಅನುಮಾನಕ್ಕೆ ಕಾರಣವಾಯ್ತು ಫೇಸ್​ಬುಕ್ ಪೋಸ್ಟ್

(Mamata Banerjee among Top Frontrunners for Prime Minister in 2024 says TMC Leader Babul Supriyo)

Read Full Article

Click on your DTH Provider to Add TV9 Kannada