ಕೊಲ್ಕತ್ತಾ ಮಾರ್ಚ್ 02: ಭ್ರಷ್ಟಾಚಾರದ ಬಗ್ಗೆ ಆಡಳಿತಾರೂಢ ಟಿಎಂಸಿ (TMC) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಪಶ್ಚಿಮ ಬಂಗಾಳದ ಎಲ್ಲಾ 42 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲಬೇಕಿದೆ ಎಂದು ಹೇಳಿದ್ದಾರೆ. ಇಂದು (ಶನಿವಾರ) ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಕೃಷ್ಣಾನಗರದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಎಂದರೆ ‘ತು, ಮೈನ್ ಔರ್ ಕರಪ್ಶನ್’ (ನೀನು, ನಾನು ಮತ್ತು ಭ್ರಷ್ಟಾಚಾರ) ಎಂದು ಆರೋಪಿಸಿದರು. ‘ಬಿಜಯ್ ಸಂಕಲ್ಪ ಸಭಾ’ದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ, ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿರುವುದು ನೋಡಿ ‘ಎನ್‌ಡಿಎ ಸರ್ಕಾರ್, 400 ಪಾರ್’ ಎಂದು ಹೇಳುವ ವಿಶ್ವಾಸವನ್ನು ನೀಡುತ್ತಿದೆ” ಎಂದಿದ್ದಾರೆ.
“ಟಿಎಂಸಿ ದೌರ್ಜನ್ಯ, ಕುಟುಂಬ ರಾಜಕೀಯ ಮತ್ತು ದ್ರೋಹಕ್ಕೆ ಸಮಾನಾರ್ಥಕವಾಗಿದೆ. ಪಶ್ಚಿಮ ಬಂಗಾಳದ ಜನರು ರಾಜ್ಯ ಸರ್ಕಾರದ ಕಾರ್ಯವೈಖರಿಯಿಂದ ನಿರಾಶೆಗೊಂಡಿದ್ದಾರೆ ಎಂದಿದ್ದಾರೆ ಮೋದಿ. ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಟಿಎಂಸಿ ನಾಯಕರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ ಘಟನೆಗಳನ್ನು ಉಲ್ಲೇಖಿಸಿದ ಮೋದಿ, ಆ ಪ್ರದೇಶದ “ಸಂಕಷ್ಟದಲ್ಲಿರುವ ತಾಯಂದಿರು ಮತ್ತು ಸಹೋದರಿಯರನ್ನು” ಬೆಂಬಲಿಸುವ ಬದಲು ರಾಜ್ಯ ಸರ್ಕಾರ ಆರೋಪಿಗಳ ಪರ ನಿಂತಿದೆ.
Crime and corruption have flourished under the TMC’s misrule in West Bengal. Speaking at the @BJP4Bengal rally in Krishnanagar. https://t.co/LaP1OVcRDC
— Narendra Modi (@narendramodi) March 2, 2024
“ತಾಯಂದಿರು ಮತ್ತು ಸಹೋದರಿಯರು ನ್ಯಾಯಕ್ಕಾಗಿ ಮನವಿ ಮಾಡುತ್ತಲೇ ಇದ್ದರು. ಆದರೆ ಟಿಎಂಸಿ ಸರ್ಕಾರ ಅವರ ಮಾತನ್ನು ಕೇಳಲಿಲ್ಲ, ಅವರು ‘ಮಾ ಮಾಟಿ ಮಾನುಷ್’ ಹೆಸರಿನಲ್ಲಿ ಮತ ಪಡೆದರು.ಆದರೆ ಈಗ ಪಶ್ಚಿಮ ಬಂಗಾಳದಲ್ಲಿ ತಾಯಂದಿರು ಮತ್ತು ಸಹೋದರಿಯರು ಅಳುತ್ತಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ ಎಂದರೆ ಇಲ್ಲಿ ಅಪರಾಧಿಗಳೇ ತಮ್ಮನ್ನು ಯಾವಾಗ ಬಂಧಿಸಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ಮೋದಿ ಹೇಳಿದ್ದಾರೆ.
ರಾಜ್ಯ ಮತ್ತು ಬಿಹಾರಕ್ಕೆ ಎರಡು ದಿನಗಳ ಪ್ರವಾಸದ ಭಾಗವಾಗಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣನಗರ ನಗರದಲ್ಲಿ 15,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ, ಟಿಎಂಸಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ