ಲೋಕಸಭೆ ಚುನಾವಣೆ ಬಂಗಾಳದ ಟಿಎಂಸಿ ಸರ್ಕಾರದ ಅಂತ್ಯಕ್ಕೆ ನಾಂದಿ ಹಾಡಲಿದೆ: ನರೇಂದ್ರ ಮೋದಿ
Narendra Modi Bengal Visit: ಪಶ್ಚಿಮ ಬಂಗಾಳಕ್ಕೆ ಶುಕ್ರವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸಂದೇಶ್ಖಾಲಿ ಸಹೋದರಿಯರೊಂದಿಗೆ ತೃಣಮೂಲ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ದೇಶ ನೋಡುತ್ತಿದೆ. ಇಡೀ ದೇಶವೇ ಕೆರಳಿದೆ, ಸಂದೇಶ್ಖಾಲಿಯಲ್ಲಿ ನಡೆದ ಘಟನೆಯಿಂದ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮವು ನೋಯುತ್ತಿದೆ. ಪಕ್ಷವು ಟಿಎಂಸಿ ನಾಯಕನನ್ನು ರಕ್ಷಿಸುತ್ತಿದೆ. ಬಿಜೆಪಿ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ ಪೊಲೀಸರು ನಿನ್ನೆ ಅವರನ್ನು ಬಂಧಿಸಬೇಕಾಯಿತು ಎಂದು ಹೇಳಿದ್ದಾರೆ.
ಅರಾಂಬಾಗ್ (ಪಶ್ಚಿಮ ಬಂಗಾಳ) ಮಾರ್ಚ್ 01: ಗುರುವಾರ ಬಂಧನಕ್ಕೊಳಗಾದ ತೃಣಮೂಲ ಕಾಂಗ್ರೆಸ್ ಪಕ್ಷ (TMC) ಪ್ರಬಲ ವ್ಯಕ್ತಿ ಶೇಖ್ ಷಹಜಹಾನ್‌ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಸಂದೇಶ್ಖಾಲಿ (Sandeshkhali) ಮಹಿಳೆಯರು ಆರೋಪಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಟಿಎಂಸಿ ಮತ್ತು ಇಂಡಿಯಾ ಬ್ಲಾಕ್‌ನ ಮೈತ್ರಿ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜನವರಿ 5ರ ನಂತರ ಸಂದೇಶ್ಖಾಲಿ ಉದ್ವಿಗ್ನವಾಗಿದ್ದು, ನರೇಂದ್ರ ಮೋದಿ ಇದೇ ಮೊದಲ ಬಾರಿ ಈ ಬಗ್ಗೆ ಮಾತನಾಡಿದ್ದಾರೆ. ಬಂಗಾಳದ ಅರಾಂಬಾಗ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರವರು. ಇಲ್ಲಿ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ಮಾಡಿ ರೈಲು, ಬಂದರುಗಳು, ತೈಲ ಪೈಪ್‌ಲೈನ್, ಎಲ್‌ಪಿಜಿ ಪೂರೈಕೆ ಮತ್ತು ತ್ಯಾಜ್ಯನೀರಿನ ಸಂಸ್ಕರಣೆಗೆ ಸಂಬಂಧಿಸಿದ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ಯೋಜನೆಗಳ ಪೈಕಿ, ಸರಿಸುಮಾರು ₹2,790 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಇಂಡಿಯನ್ ಆಯಿಲ್‌ನ 518-ಕಿಮೀ ಉದ್ದದ ಹಲ್ದಿಯಾ-ಬರೌನಿ ಕಚ್ಚಾ ತೈಲ ಪೈಪ್‌ಲೈನ್ ಅನ್ನು ಪ್ರಧಾನಿ ಉದ್ಘಾಟಿಸಿದರು.
ಹೆಚ್ಚುವರಿಯಾಗಿ, ಕೋಲ್ಕತ್ತಾದ ಶ್ಯಾಮ ಪ್ರಸಾದ್ ಮುಖರ್ಜಿ ಬಂದರಿನಲ್ಲಿ ಸುಮಾರು ₹ 1000 ಕೋಟಿ ಹೂಡಿಕೆಯೊಂದಿಗೆ ಮೂಲಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಬಹು ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಅಡಿಪಾಯ ಹಾಕಿದರು.
ಮೋದಿ ರ‍್ಯಾಲಿ
TMC has betrayed West Bengal. The people are speaking in loud and clear voice – they want BJP. Addressing a massive rally in Arambagh. https://t.co/v09uhe7c1y
— Narendra Modi (@narendramodi) March 1, 2024
ಪುರುಲಿಯಾ ಜಿಲ್ಲೆಯ ರಘುನಾಥಪುರದಲ್ಲಿರುವ ರಘುನಾಥಪುರ ಶಾಖೋತ್ಪನ್ನ ವಿದ್ಯುತ್ ಸ್ಥಾವರ II ನೇ ಹಂತಕ್ಕೆ (2×660 MW) ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದಾರೆ. ಕಲ್ಲಿದ್ದಲು ಆಧಾರಿತ ಥರ್ಮಲ್ ಪವರ್ ಪ್ರಾಜೆಕ್ಟ್, ದಾಮೋದರ್ ವ್ಯಾಲಿ ಕಾರ್ಪೊರೇಶನ್‌ನ ಮೇಲ್ವಿಚಾರಣೆಯಲ್ಲಿ, ಹೆಚ್ಚು ಪರಿಣಾಮಕಾರಿಯಾದ ಸೂಪರ್‌ಕ್ರಿಟಿಕಲ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ಹೊಸ ಸ್ಥಾವರ ಸ್ಥಾಪನೆಯು ದೇಶದ ಇಂಧನ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ದಾಪುಗಾಲು ಹಾಕಿದೆ.
ಇದನ್ನೂ ಓದಿ: ತಮಿಳುನಾಡು ಸಿಎಂ ಸ್ಟಾಲಿನ್ಗೆ ಮ್ಯಾಂಡರಿನ್ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕುಟುಕಿದ ಬಿಜೆಪಿ
ಮೋದಿ ಭಾಷಣದ ಮುಖ್ಯಾಂಶಗಳು
- ಸಂದೇಶ್ಖಾಲಿ ಸಹೋದರಿಯರೊಂದಿಗೆ ತೃಣಮೂಲ ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ದೇಶ ನೋಡುತ್ತಿದೆ. ಇಡೀ ದೇಶವೇ ಕೆರಳಿದೆ, ಸಂದೇಶ್ಖಾಲಿಯಲ್ಲಿ ನಡೆದ ಘಟನೆಯಿಂದ ರಾಜಾ ರಾಮ್ ಮೋಹನ್ ರಾಯ್ ಅವರ ಆತ್ಮವು ನೋಯುತ್ತಿದೆ. ಪಕ್ಷವು ಟಿಎಂಸಿ ನಾಯಕನನ್ನು ರಕ್ಷಿಸುತ್ತಿದೆ. ಬಿಜೆಪಿ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ ನಂತರ ಪೊಲೀಸರು ನಿನ್ನೆ ಅವರನ್ನು ಬಂಧಿಸಬೇಕಾಯಿತು ಎಂದು ಮೋದಿ ಹೇಳಿದ್ದಾರೆ.
- ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಭ್ರಷ್ಟಾಚಾರದ ಹಿಂದೆ ಇರುವವರನ್ನು ರಕ್ಷಿಸಲು ಬಂಗಾಳ ಸಿಎಂ ಪ್ರತಿಭಟನೆಗೆ ಕುಳಿತಿದ್ದಾರೆ” ಎಂದು ಹೇಳಿದರು.
- ‘ಪಶ್ಚಿಮ ಬಂಗಾಳವನ್ನು ಲೂಟಿ ಮಾಡಿದವರು ಲೂಟಿಯನ್ನು ಹಿಂದಿರುಗಿಸಬೇಕು’ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ‘ಲೂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮೋದಿಯವರ ಗ್ಯಾರಂಟಿ’ ಎಂದು ಹೇಳಿದರು.
- ಆಡಳಿತಾರೂಢ ಟಿಎಂಸಿ ‘ಪಕ್ಷದ ನಾಯಕ ಶೇಖ್ ಷಹಜಹಾನ್ ಅವರನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ’. ಬಿಜೆಪಿ ನಾಯಕರ ಪ್ರಯತ್ನವೇ ಟಿಎಂಸಿಯ ಪ್ರಬಲ ವ್ಯಕ್ತಿಯನ್ನು ಬಂಧಿಸಲು ಕಾರಣವಾಯಿತು.
- “ಬಂಗಾಳದ ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಕೇಂದ್ರದ ಪ್ರತಿಯೊಂದು ಯೋಜನೆಯನ್ನು ಟಿಎಂಸಿ ತಡೆಯುತ್ತಿದೆ” ಎಂದ ಮೋದಿ, ಟಿಎಂಸಿಯನ್ನು ‘ಬಡವರ ವಿರೋಧಿ’ ಎಂದು ಕರೆದಿದ್ದಾರೆ.
- ‘ಹರ್ ಚೋಟ್ ಕಾ ಜವಾಬ್ ವೋಟ್ ಸೆ ದೇನಾ ಹೈ’. ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕಿಂತ ಕೆಲವರ ಮತ ಮುಖ್ಯವೇ? ಎಂದು ಇಂದು ಪಶ್ಚಿಮ ಬಂಗಾಳದ ಜನರು ತಮ್ಮ ಸಿಎಂ ‘ದೀದಿ’ಯನ್ನು ಕೇಳುತ್ತಿದ್ದಾರೆ. ಸಂದೇಶಖಾಲಿ ಘಟನೆಯ ಬಗ್ಗೆ ಇಂಡಿಯಾ ಮೈತ್ರಿಕೂಟದ ಎಲ್ಲಾ ಪ್ರಮುಖ ನಾಯಕರು ಮೌನವಾಗಿದ್ದರು.ಇಂಡಿಯಾ ಮೈತ್ರಿಕೂಟದ ನಾಯಕರು ಗಾಂಧೀಜಿಯ ಮೂರು ಕೋತಿಗಳಿದ್ದಂತೆ. ‘ಅರೇ ಛೋಡೋ, ಬೆಂಗಾಲ್ ಮೇ ತೋ ಯೆ ಸಬ್ ಚಲ್ತಾ ರೆಹ್ತಾ ಹೈ (ಹೋಗಲಿ ಬಿಡಿ ಬಂಗಾಳದಲ್ಲಿ ಇದೆಲ್ಲ ಆಗುತ್ತಾ ಇರುತ್ತದೆ) ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿರುವುದಾಗಿ ಎಂದು ಮೋದಿ ಹೇಳಿದ್ದಾರೆ.
- ಮುಂಬರುವ ಚುನಾವಣೆಯಲ್ಲಿ ನಿರ್ದಿಷ್ಟ ವೋಟ್ ಬ್ಯಾಂಕ್ ಹೊಂದುವ ಟಿಎಂಸಿಯ ದುರಹಂಕಾರವನ್ನು ಒಡೆದು ಹಾಕಲಾಗುವುದು. ಮುಸ್ಲಿಂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಇಂಡಿಯಾ ಬಣದ ನಾಯಕರು ಗಾಂಧಿಯ ಮೂರು ಕೋತಿಗಳಂತೆ ತಮ್ಮ ಕಣ್ಣು, ಕಿವಿ ಮತ್ತು ಬಾಯಿಯನ್ನು ಮುಚ್ಚಿಕೊಂಡಿದ್ದಾರೆ .”ಅವರು ಪಾಟ್ನಾ, ಬೆಂಗಳೂರು, ಮುಂಬೈ ಮತ್ತು ಎಲ್ಲಿ ಬೇಕೆಂದರಲ್ಲಿ ಸಭೆಗಳನ್ನು ನಡೆಸುತ್ತಾರೆ. ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳಿಗೆ ಬಂಗಾಳದ ತೃಣಮೂಲ ಸರ್ಕಾರವನ್ನು ಪ್ರಶ್ನಿಸುವ ಧೈರ್ಯವಿಲ್ಲ. ಅವರು ಸಂದೇಶ್ಖಾಲಿಯತ್ತ ಮುಖ ಮಾಡಲಿಲ್ಲ.
ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದನ್ನು ನೀವು ಕೇಳಿದ್ದೀರಾ? ಅನುವಾದಕರು ಇದನ್ನು ಇಲ್ಲಿಯ ತಾಯಂದಿರು ಮತ್ತು ಸಹೋದರಿಯರಿಗೆ ಅನುವಾದಿಸಿ ವಿವರಿಸಬೇಕು. ‘ಅರೇ ಛೋಡೋ, ಬಂಗಾಲ್ ಮೇ ಯೇ ಸಬ್ ಕುಚ್ ಚಲ್ತಾ ರಹತಾ ಹೈ. ಇದು ಬಂಗಾಳಕ್ಕೆ, ಅದರ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಮಾಡಿದ ಅವಮಾನವಲ್ಲವೇ? ?” “ಇದು ಇಂಡಿಯಾ ಬ್ಲಾಕ್‌ನ ವಾಸ್ತವ ಸಂಗತಿ. ಅವರು ಭ್ರಷ್ಟರು, ಕುಟುಂಬ ರಾಜಕಾರಣ ಮತ್ತು ತುಷ್ಟೀಕರಣ ರಾಜಕಾರಣದಲ್ಲಿ ನಂಬಿಕೆ ಇಟ್ಟವರನ್ನು ರಕ್ಷಿಸುತ್ತಾರೆ. ಟಿಎಂಸಿ ಭ್ರಷ್ಟಾಚಾರದ ಹೊಸ ಮಾದರಿಯನ್ನು ಹುಟ್ಟು ಹಾಕಿದೆ. ಟಿಎಂಸಿ ನಾಯಕರ ಮನೆಯಲ್ಲಿ ಸಿಕ್ಕ ನೋಟುಗಳ ಕಂತೆಗಳನ್ನು ನೋಡಿದ್ದೀರಾ? ಸಿನಿಮಾದಲ್ಲಿಯೂ ಇಷ್ಟು ಹಣ ನೋಡಿದ್ದೀರಾ? ಎಂದು ಮೋದಿ ಪ್ರಶ್ನಿಸಿದರು.
ಟಿವಿ9 ವಾಟ್ಸ್ ಇಂಡಿಯಾ ಥಿಂಕ್ಸ್ ಟುಡೇ ಜಾಗತಿಕ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಸಂದೇಶ್ಖಾಲಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಕೇಳಲಾಯಿತು. ಆಗ ಖರ್ಗೆ ಅವರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ನಡುವಿನ ರಾಜಕೀಯ ಸನ್ನಿವೇಶವನ್ನು ವಿವರಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಅದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:56 pm, Fri, 1 March 24