Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು

| Updated By: ಸುಷ್ಮಾ ಚಕ್ರೆ

Updated on: Jul 23, 2021 | 1:00 PM

ನಿನ್ನೆ ಕೇಂದ್ರ ಸಚಿವರ ಕೈಯಲ್ಲಿದ್ದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡಿದ್ದ ಶಂತನು ಸೇನ್ ಸದನದ ಬಾವಿಗಿಳಿದು ಅದನ್ನು ಹರಿದು ಬಿಸಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ.

Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್
Follow us on

ನವದೆಹಲಿ: ನಿನ್ನೆ ಇಡೀ ದಿನದ ರಾಜ್ಯಸಭಾ ಮತ್ತು ಲೋಕಸಭಾ ಕಲಾಪವನ್ನು ಪೆಗಾಸಸ್ ಫೋನ್ ಕದ್ದಾಲಿಕೆ ಪ್ರಕರಣ ನುಂಗಿ ಹಾಕಿತ್ತು. ಅಧಿವೇಶನದಲ್ಲಿ(Monsoon Session 2021) ಗಲಾಟೆಯೆದ್ದ ಕಾರಣ ಕಲಾಪವನ್ನು ಇಂದಿಗೆ ಮುಂದೂಡಲಾಗಿತ್ತು. ನಿನ್ನೆ ರಾಜ್ಯಸಭಾ ಕಲಾಪದಲ್ಲಿ ಪೆಗಾಸಸ್ (Pegasus) ಹಗರಣದ ಬಗ್ಗೆ ಹೇಳಿಕೆ ನೀಡಲು ಎದ್ದುನಿಂತ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಕೈಯಿಂದ ಹೇಳಿಕೆಯ ಪ್ರತಿಯನ್ನು ಕಸಿದುಕೊಂಡಿದ್ದ ಟಿಎಂಸಿ ಸಂಸದ ಶಂತನು ಸೇನ್ ಆ ಕಾಗದವನ್ನು ಹರಿದು ಹಾಕಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಇಂದು ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಅವರನ್ನು ಮುಂಗಾರು ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ನಿನ್ನೆ ಕೇಂದ್ರ ಸಚಿವರ ಕೈಯಲ್ಲಿದ್ದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡಿದ್ದ ಶಂತನು ಸೇನ್ ಮೇಲ್ಮನೆಯ ಸದನದ ಬಾವಿಗಿಳಿದು ಅದನ್ನು ಹರಿದು ಬಿಸಾಡಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು. ಆಡಳಿತ ಪಕ್ಷದ ಸಂಸದರು ಈ ವರ್ತನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಕಲಾಪವನ್ನು ಇಂದಿಗೆ ಮುಂದೂಡಲಾಗಿತ್ತು.

ಇಂದು ರಾಜ್ಯಸಭಾ ಕಲಾಪದಲ್ಲಿ ಮಾತನಾಡಿರುವ ರಾಜ್ಯಸಭಾ ಚೇರ್ಮನ್ ವೆಂಕಯ್ಯ ನಾಯ್ಡು, ಅಧಿವೇಶನದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಿಂದ ನನಗೆ ಬಹಳ ನೋವುಂಟಾಗಿದೆ. ಕಲಾಫ ನಡೆಯುವ ವೇಳೆ ಸಚಿವರು ತಮ್ಮ ಹೇಳಿಕೆಯನ್ನು ಓದುತ್ತಿರುವಾಗಲೇ ಅವರ ಕೈಯಿಂದ ಪತ್ರಗಳನ್ನು ಕಸಿದುಕೊಂಡು ಹರಿದು ಹಾಕುವಷ್ಟು ಕೆಳಮಟ್ಟದ ಯೋಚನೆಯನ್ನು ಕೆಲವು ಸಂಸದರು ಮಾಡುತ್ತಿರುವುದು ಬೇಸರದ ಸಂಗತಿ. ಈ ರೀತಿಯ ನಡವಳಿಕೆಯಿಂದ ಸದನದ ಗೌರವಕ್ಕೆ ಧಕ್ಕೆಯಾಗುತ್ತದೆ. ಇದು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ ಎಂದು ನಾನು ಪರಿಗಣಿಸುತ್ತೇನೆ ಎಂದು ತಿಳಿಸಿದ್ದಾರೆ.

ನಿನ್ನೆ ಇಸ್ರೇಲಿ ಕಂಪನಿ ಸ್ಪೈವೇರ್ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ಆರೋಪ ಕುರಿತಂತೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಹೇಳಿಕೆ ನೀಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಟಿಎಂಸಿ ಸಂಸದರು ಕಾಗದ ಪತ್ರಗಳನ್ನು ಹರಿದು ಹಾಕಿ, ಅವುಗಳನ್ನು ಗಾಳಿಯಲ್ಲಿ ತೂರಿದ್ದರು.

ಇದನ್ನೂ ಓದಿ: ರಾಜ್ಯಸಭಾ ಕಲಾಪದಲ್ಲಿ ಹೈಡ್ರಾಮಾ; ಐಟಿ ಸಚಿವರಿಂದ ಪೆಗಾಸಸ್ ಹೇಳಿಕೆಯ ಕಾಗದ ಕಸಿದುಕೊಂಡು ಹರಿದುಹಾಕಿದ ಟಿಎಂಸಿ ಸಂಸದ

(TMC MP Shantanu Sen Suspended from Rajya Sabha day after Tearing IT Minister Ashwini Vaishnaw Statement)

Published On - 12:55 pm, Fri, 23 July 21