ರಾಜ್ಯಸಭಾ ಕಲಾಪದಲ್ಲಿ ಹೈಡ್ರಾಮಾ; ಐಟಿ ಸಚಿವರಿಂದ ಪೆಗಾಸಸ್ ಹೇಳಿಕೆಯ ಕಾಗದ ಕಸಿದುಕೊಂಡು ಹರಿದುಹಾಕಿದ ಟಿಎಂಸಿ ಸಂಸದ

ಪೆಗಾಸಸ್ ವಿವಾದದ ಕುರಿತು ರಾಜ್ಯಸಭೆಯಲ್ಲಿ ಹೇಳಿಕೆಯನ್ನು ಓದಲು ಹೊರಟ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಕೈಯಿಂದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡ ಟಿಎಂಸಿ ಸಂಸದ ಶಂತನು ಸೇನ್ ಅದನ್ನು ಹರಿದು ಉಪಾಧ್ಯಕ್ಷರತ್ತ ಎಸೆದಿದ್ದಾರೆ.

ರಾಜ್ಯಸಭಾ ಕಲಾಪದಲ್ಲಿ ಹೈಡ್ರಾಮಾ; ಐಟಿ ಸಚಿವರಿಂದ ಪೆಗಾಸಸ್ ಹೇಳಿಕೆಯ ಕಾಗದ ಕಸಿದುಕೊಂಡು ಹರಿದುಹಾಕಿದ ಟಿಎಂಸಿ ಸಂಸದ
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಈ ವಾರದಿಂದ ಸಂಸತ್​ನ ಮುಂಗಾರು ಅಧಿವೇಶನ (Monsoon Session 2021) ಆರಂಭವಾಗಿದ್ದು, ರಾಜ್ಯಸಭೆ ಕಲಾಪವೂ ನಡೆಯುತ್ತಿದೆ. ಇಂದು ಅಧಿವೇಶನದಲ್ಲಿ ಪೆಗಾಸಸ್ (Pegasus) ಬೇಹುಗಾರಿಕಾ ಸಾಫ್ಟ್​ವೇರ್​ ಮತ್ತು ದೈನಿಕ್ ಭಾಸ್ಕರ್ ಮಾಧ್ಯಮ ಸಂಸ್ಥೆಯ ಮೇಲಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಕುರಿತು ತೀವ್ರ ಗದ್ದಲಗಳು ಉಂಟಾಗಿ ಹೈಡ್ರಾಮಾಕ್ಕೆ ಕಾರಣವಾಯಿತು. ಇಸ್ರೇಲ್ ಮೂಲದ ಪೆಗಾಸಸ್ ಸಾಫ್ಟ್​ವೇರ್ (Pegasus Software) ಮೂಲಕ ಫೋನ್ ಕದ್ದಾಲಿಕೆ ವಿವಾದದ ಕುರಿತು ರಾಜ್ಯಸಭೆಯಲ್ಲಿ ಹೇಳಿಕೆಯನ್ನು ಓದಲು ಹೊರಟ ಕೇಂದ್ರ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnaw) ಅವರ ಕೈಯಿಂದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡ ಟಿಎಂಸಿ (TMC) ಸಂಸದ ಶಂತನು ಸೇನ್ ಅದನ್ನು ಹರಿದು ಉಪಾಧ್ಯಕ್ಷರತ್ತ ಎಸೆದಿದ್ದಾರೆ.

ಉಭಯ ಅಧಿವೇಶನಗಳಲ್ಲಿ ವಿರೋಧ ಪಕ್ಷದ ನಾಯಕರ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸಭಾ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಇಂದು ಮೂರು ಬಾರಿ ರಾಜ್ಯಸಭಾ ಕಲಾಪವನ್ನು ಮುಂದಾಡಲಾಗಿದೆ. ಬೆಳಗ್ಗೆ ಗಲಾಟೆ ಆರಂಬವಾದ ಬಳಿಕ 12 ಗಂಟೆಯವರೆಗೆ ಕಲಾಪ ಮುಂದೂಡಲಾಗಿತ್ತು. ಬಳಿ 2 ಗಂಟೆಯವರೆಗೆ ಮುಂದೂಡಲಾಯಿತು. ನಂತರ ನಾಳೆಗೆ ಮುಂದೂಡಲಾಗಿದೆ.

ಇಂದು ಬೆಳಗ್ಗೆ ರಾಜ್ಯಸಭಾ ಕಲಾಪ ಆರಂಭವಾದ ಕೂಡಲೇ ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಸಂಸ್ಥೆಯನ್ನು ಬಳಸಿಕೊಂಡು ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಮ್ಮ ರಾಜಕೀಯ ವಿರೋಧಿಗಳು, ಪತ್ರಕರ್ತರನ್ನು ಮಟ್ಟಹಾಕಲು ಪ್ರಯತ್ನಿಸಿದೆ ಎಂದು ವಿಪಕ್ಷಗಳ ನಾಯಕರು ಗಲಾಟೆ ಎಬ್ಬಿಸಿದರು. ಲೋಕಸಭಾ ಅಧಿವೇಶನವನ್ನೂ ಕೂಡ ಸಂಜೆ 4 ಗಂಟೆಯವರೆಗೆ ಮುಂದೂಡಲಾಗಿದೆ.

ಇನ್ನೊಂದೆಡೆ, ತೀವ್ರ ವಿವಾದಕ್ಕೆ ಕಾರಣವಾಗಿರುವ ಪೆಗಾಸಸ್ ತಂತ್ರಜ್ಞಾನದ ಬಗ್ಗೆ ತನಿಖೆ ನಡೆಸಲು ಇಸ್ರೇಲ್ ಹಿರಿಯ ಸಚಿವರ ಸಮಿತಿಯೊಂದನ್ನು ರಚನೆ ಮಾಡಿದೆ. ಭಾರತ ಮಾತ್ರವಲ್ಲದೆ ಫ್ರಾನ್ಸ್​, ಮೆಕ್ಸಿಕೋ, ಇರಾಕ್​ನಲ್ಲಿಯೂ ಪೆಗಾಸಸ್ ಸಾಫ್ಟ್​ವೇರ್ ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪ ಎದುರಾಗಿರುವುದರಿಂದ ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಇಸ್ರೇಲ್ ಸರ್ಕಾರ ಆದೇಶಿಸಿದೆ.

ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲೂ ಪೆಗಾಸಸ್ ನೆರಳು; ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ಕೆಡವಲು ಸಿದ್ದರಾಮಯ್ಯ, ಡಾ ಪರಮೇಶ್ವರ್ ಫೋನ್ ಕದ್ದಾಲಿಕೆ ಆರೋಪ

(Pegasus Controversy Trinamool MP Snatches Pegasus Statement From IT Minister Ashwini Vaishnaw Tears It)