Kumbh Mela: ಕುಂಭ ಮೇಳದ ನಕಲಿ ಕೋವಿಡ್ ಟೆಸ್ಟ್ ಹಗರಣ; ಹರಿಯಾಣದ ವ್ಯಕ್ತಿಯ ಬಂಧನ
ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಒಟ್ಟಾರೆ 1.10 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ವರದಿ ತಯಾರಿಸಲಾಗಿತ್ತು. ಆ ವರದಿಯನ್ನು ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿ, ಕೋವಿಡ್ ಪರೀಕ್ಷೆ ನಡೆಸಿದ್ದಕ್ಕಾಗಿ 4 ಕೋಟಿ ರೂ. ಬಿಲ್ ಸಲ್ಲಿಸಲಾಗಿತ್ತು.
ಡೆಹ್ರಾಡೂನ್: ಕಳೆದ ಏಪ್ರಿಲ್ ತಿಂಗಳಲ್ಲಿ ಉತ್ತರಾಖಂಡದಲ್ಲಿ (Uttarakhand) ನಡೆದ ಕುಂಭ ಮೇಳದಲ್ಲಿ(Kumbh Mela) ಪಾಲ್ಗೊಂಡಿದ್ದ ಭಕ್ತರಿಗೆ ನಕಲಿ ಕೋವಿಡ್ ಪರೀಕ್ಷೆ (Fake Covid Test) ನಡೆಸಿದ್ದ ಹಗರಣ ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಐಸಿಎಂಆರ್ (ICMR) ಪೋರ್ಟಲ್ನಲ್ಲಿ ನಕಲಿ ಕೋವಿಡ್ ಪರೀಕ್ಷೆಯ ಅಂಕಿ-ಅಂಶಗಳನ್ನು ದಾಖಲು ಮಾಡಿರುವ ಮತ್ತು ಅನನುಭವಿ ಸಿಬ್ಬಂದಿಯನ್ನು ಕಳುಹಿಸಿಕುಂಭ ಮೇಳದಲ್ಲಿ ಪಾಲ್ಗೊಂಡಿದ್ದವರಿಗೆ ರ್ಯಾಪಿಡ್ ಟೆಸ್ಟ್ (Rapid Covid Test) ಮಾಡಿಸಿರುವ ಆರೋಪದಲ್ಲಿ ಹರಿಯಾಣ ಮೂಲದ ಆಶಿಶ್ ವಸಿಷ್ಠ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕೊರೋನಾ ಎರಡನೇ ಅಲೆಯ ವೇಳೆಗೆ ನಡೆದ ಕುಂಭ ಮೇಳದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ಈ ಕುಂಭ ಮೇಳದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರೂ ನೂರಾರು ಕೊರೋನಾ ಕೇಸುಗಳು ಪತ್ತೆಯಾಗಿದ್ದವು. ಇದರ ಹಿಂದೆ ನಕಲಿ ಕೋವಿಡ್ ಟೆಸ್ಟ್ ದಂಧೆ ಇರುವುದು ಬಯಲಾಗಿತ್ತು. ಕುಂಭ ಮೇಳದ ಸಂದರ್ಭದಲ್ಲಿ ನಡೆದ ಕೋವಿಡ್ ಪರೀಕ್ಷೆಗಳ ಕುರಿತು ತನಿಖೆ ನಡೆಸುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಮ್ಯಾಕ್ಸ್ ಕಾರ್ಪೋರೇಟ್ ಸರ್ವಿಸಸ್, ಹರಿಯಾಣ ಮೂಲದ ನಲ್ವಾ ಲ್ಯಾಬ್ ಮತ್ತು ದೆಹಲಿಯ ಲಾಲ್ಚಾಂದನಿ ಲ್ಯಾಬ್‌ಗಳು ನಕಲಿ ಕೊರೋನಾ ಪರೀಕ್ಷೆ ನಡೆಸಿವೆ ಎಂದು ಹರಿದ್ವಾರದ ಮುಖ್ಯ ವೈದ್ಯಕೀಯ ಅಧಿಕಾರಿ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಹರಿದ್ವಾರದ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.
ಕುಂಭ ಮೇಳದಲ್ಲಿ ನಡೆದ ನಕಲಿ ಕೋವಿಡ್ ಟೆಸ್ಟ್ ಹಗರಣವನ್ನು ಎಸ್ಐಟಿ ತಂಡ ತನಿಖೆ ನಡೆಸಿತ್ತು. ಮ್ಯಾಕ್ಸ್ ಕಾರ್ಪೋರೇಟ್ ಸರ್ವಿಸಸ್ನ ಪಾರ್ಟನರ್ಗಳಾದ ಶರತ್ ಪಂತ್ ಮತ್ತು ಅವರ ಪತ್ನಿ ಮಲ್ಲಿಯಾ ಪಂತ್ ಕುಂಭ ಮೇಳದ ಮೆಡಿಕಲ್ ಮತ್ತು ಹೆಲ್ತ್ ಅಧಿಕಾರಿಗಳ ದಾರಿತಪ್ಪಿಸಿ, ತಾವೇ ಕೋವಿಡ್ ಟೆಸ್ಟ್ ಮಾಡುವುದಾಗಿ ಗುತ್ತಿಗೆ ಪಡೆದಿದ್ದರು. ಅದಕ್ಕಾಗಿ ತಮ್ಮ ಜೊತೆಗೆ ಎರಡು ಲ್ಯಾಬೋರೇಟರಿಗಳು ಕೂಡ ಇವೆ ಎಂದು ಒಪ್ಪಂದ ಮಾಡಿಕೊಂಡಿದ್ದರು ಎಂಬುದು ಎಸ್ಐಟಿ ತನಿಖೆ ವೇಳೆ ಬಯಲಾಗಿದೆ.
ಹೀಗೆ ಗುತ್ತಿಗೆ ಪಡೆದ ಮ್ಯಾಕ್ಸ್ ಕಾರ್ಪೋರೇಟ್ ಸರ್ವಿಸಸ್ ಕಂಪನಿ ಯಾವುಧೆ ಅನುಭವ ಇಲ್ಲದ ಸಿಬ್ಬಂದಿಯನ್ನು ಲ್ಯಾಬ್ನಲ್ಲಿ ಕೆಲಸಕ್ಕೆ ಸೇರಿಸಿಕೊಂಡು ಕುಂಭ ಮೇಳದ ಭಕ್ತರ ರ್ಯಾಂಡಮ್ ಕೋವಿಡ್ ಪರೀಕ್ಷೆ ಮಾಡಿಸಿದ್ದಾರೆ. ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಒಟ್ಟಾರೆ 1.10 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಅವರು ವರದಿಯನ್ನು ತಯಾರಿಸಿದ್ದರು. ಅದರಲ್ಲಿ ಬಹುಪಾಲು ನಕಲಿ ಕೋವಿಡ್ ಟೆಸ್ಟ್ ಆಗಿದ್ದವು. ಆ ವರದಿಯನ್ನು ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಪರೀಕ್ಷೆ ನಡೆಸಿದ್ದಕ್ಕಾಗಿ 4 ಕೋಟಿ ರೂ. ಬಿಲ್ ಅನ್ನು ಸಲ್ಲಿಸಿದ್ದರು ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.
ಕುಂಭ ಮೇಳದಲ್ಲಿ ಭಾಗವಹಿಸಿದ್ದ ಭಕ್ತರ ಕೋವಿಡ್ ಟೆಸ್ಟ್ ರಿಪೋರ್ಟ್ ಅನ್ನು ಪರಿಶೀಲಿಸಿದಾಗ ಒಂದೇ ಮೊಬೈಲ್ ನಂಬರ್ಗಳು ಸಾಕಷ್ಟು ಬಾರಿ ರಿಪೀಟ್ ಆಗಿತ್ತು. ಆ ನಂಬರ್ಗಳಿಗೆ ಫೋನ್ ಮಾಡಿದಾಗ ಅವು ಅಸ್ತಿತ್ವದಲ್ಲೇ ಇಲ್ಲ ಎಂದು ಗೊತ್ತಾಗಿತ್ತು. ಇನ್ನು ಕೆಲವು ನಂಬರ್ಗಳಿಗೆ ಫೋನ್ ಮಾಡಿದಾಗ ಅವರು ಕುಂಭ ಮೇಳಕ್ಕೆ ಬಂದಿರಲೇ ಇಲ್ಲ ಎಂಬುದು ಗೊತ್ತಾಗಿತ್ತು. ಹೀಗಾಗಿ, ಎಸ್ಐಟಿಯವರು ಶರತ್ ಪಂತ್ ದಂಪತಿಯ ಜೊತೆ ಕೈಜೋಡಿಸಿದ್ದ ಹರಿಯಾಣ ಮೂಲದ ಲ್ಯಾಬ್ನ ಆಶಿಶ್ ವಸಿಷ್ಠ ಎಂಬಾತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಉಳಿದವರನ್ನು ಸೆರೆ ಹಿಡಿಯಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಹಿಂದೆ ಕುಂಭ ಮೇಳದ ಪ್ರಕರಣದಲ್ಲಿ ಖಾಸಗಿ ಲ್ಯಾಬ್‌ಗಳು ನೀಡಿದ ವರದಿಗಳಿಗೂ ಹರಿದ್ವಾರ ಜಿಲ್ಲಾ ಆಡಳಿತದ ವರದಿಗಳಿಗೂ ವ್ಯತ್ಯಾಸವಿದ್ದು, ತಮಗೆ ನೀಡಲಾಗಿರುವ ಟಾರ್ಗೆಟ್ ಮುಟ್ಟಲು ನಕಲಿ ವರದಿಗಳನ್ನು ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದ್ದರಿಂದ ಮ್ಯಾಕ್ಸ್ ಕಾರ್ಪೋರೇಟ್ ಸರ್ವಿಸಸ್ ಸಂಸ್ಥೆ ಉತ್ತರಾಖಂಡ ಹೈಕೋರ್ಟ್ ಮೊರೆ ಹೋಗಿತ್ತು. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ ರ್ಯಾಪಿಡ್ ಪರೀಕ್ಷೆ ನಡೆಸಲು ರಾಷ್ಟ್ರೀಯ ಮಾನ್ಯತೆ ಪಡೆದಿರುವ ಎರಡು ಲ್ಯಾಬ್ಗಳಿಗೆ ಗುತ್ತಿಗೆ ನೀಡಲಾಗಿತ್ತು. ನಾವು ಕೇವಲ ಸರ್ವಿಸ್ ಮಾತ್ರ ನೀಡುತ್ತೇವೆ. ಲ್ಯಾಬ್ಗಳಿಂದ ನಕಲಿ ಪರೀಕ್ಷೆ ನಡೆದಿರುವುದು ಸಾಬೀತಾದರೆ ನಾವು ಆ ಬಗ್ಗೆ ತನಿಖೆ ಮಾಡಲು ಸಹಕರಿಸುತ್ತೇವೆ ಎಂದು ಮ್ಯಾಕ್ಸ್ ಸಂಸ್ಥೆ ಹೈಕೋರ್ಟ್ ಎದುರು ಹೇಳಿತ್ತು.
ಇದನ್ನೂ ಓದಿ: Kumbh Mela: ಕುಂಭಮೇಳದಲ್ಲಿ ಭಾಗಿಯಾದವರಿಗೆ ನಕಲಿ ಕೊವಿಡ್ ರಿಪೋರ್ಟ್ ಆರೋಪ; ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ
(Haryana man is first arrest in fake Kumbh Covid tests Scam)
Published On - 12:19 pm, Fri, 23 July 21