
ಚೆನ್ನೈ, ಫೆಬ್ರವರಿ 26: ಅತ್ಯಾಚಾರ ವಿರೋಧಿಸಿದ್ದಕ್ಕೆ 3 ವರ್ಷದ ಮಗುವಿನ ಮುಖವನ್ನು ಬಾಲಕ ವಿರೂಪಗೊಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 16 ವರ್ಷದ ಬಾಲಕ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ, ಮಗು ತಡೆಯಲು ಪ್ರಯತ್ನಿಸಿದ್ದಕ್ಕೆ ಕೋಪಗೊಂಡು ಆಕೆಯ ಮುಖವನ್ನು ವಿರೂಪಗೊಳಿಸಿದ್ದಾನೆ. ಮೈಲಾಡುತುರೈ ಜಿಲ್ಲೆಯ ಸೀರ್ಕಾಳಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಅಂಗನವಾಡಿಯಿಂದ ಮಗು ಮನೆಗೆ ಹಿಂದಿರುಗುತ್ತಿದ್ದಾಗ, 16 ವರ್ಷದ ಬಾಲಕ ಆಕೆಗೆ ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಆಕೆ ಸಹಾಯಕ್ಕಾಗಿ ಕೂಗಿದಾಗ ಆಕೆಯ ಮುಖವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ್ದಾನೆ. ಪದೇ ಪದೇ ಮುಖದ ಮೇಲೆ ಹಲ್ಲೆ ನಡೆಸಿ ಕಣ್ಣುಗಳಿಗೂ ತೀವ್ರವಾಗಿ ಗಾಯ ಮಾಡಿದ್ದಾನೆಂದು ತಿಳಿದುಬಂದಿದೆ.
ದಾಳಿಯಿಂದಾಗಿ ಮಗು ಪ್ರಜ್ಞೆ ಕಳೆದುಕೊಂಡಿತ್ತು, ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆಕೆಯನ್ನು ಹುಡುಕುತ್ತಿದ್ದ ಪೋಷಕರು ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆಕೆ ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮತ್ತಷ್ಟು ಓದಿ: ಮಾಜಿ ಗರ್ಲ್ಫ್ರೆಂಡ್ಗೆ ಬೇರೊಬ್ಬನ ಜತೆ ಸಂಬಂಧ, ಸ್ನೇಹಿತರ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ
ಬಾಲಕಿಯ ಪೋಷಕರ ದೂರಿನ ಆಧಾರದ ಮೇಲೆ 16 ವರ್ಷದ ಬಾಲಕಿಯನ್ನು ಅಖಿಲ ಮಹಿಳಾ ಪೊಲೀಸ್ ಠಾಣೆ ಬಂಧಿಸಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇತ್ತೀಚೆಗಷ್ಟೇ ತಮಿಳುನಾಡಿನ ಕೃಷ್ಣಾಪುರದ 15 ವರ್ಷದ ಬಾಲಕಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ನೇಹಿತನಾಗಿದ್ದ ಹುಡುಗನ ದಾಳಿಯಿಂದ ತಪ್ಪಿಸಿಕೊಂಡು ಗಂಟಲಿನ ಮೇಲೆ ಹಲವಾರು ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಒಂದು ದಿನದ ಬಳಿಕ ಈ ಘಟನೆ ಸಂಭವಿಸಿದೆ.
10 ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಅದೇ ಪ್ರದೇಶದ 12 ನೇ ತರಗತಿಯ ವಿದ್ಯಾರ್ಥಿ ಜತೆ ಇನ್ಸ್ಟಾಗ್ರಾಂ ಮೂಲಕ ಸ್ನೇಹ ಬೆಳದಿತ್ತು. ಫೆಬ್ರವರಿ 23 ರ ರಾತ್ರಿ 10 ಗಂಟೆ ಸುಮಾರಿಗೆ ಆಕೆಯನ್ನು ಮನೆಯಿಂದ ಹೊರಗೆ ಕರೆದಿದ್ದ. ಆಕೆ ಹೊರಗೆ ಬಂದಾಗ, ಚಾಕುವಿನಿಂದ ಹಲ್ಲೆ ನಡೆಸಿ, 12 ಗ್ರಾಂ ಚಿನ್ನದ ಸರವನ್ನು ದೋಚಿದ್ದ. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ