Tomato Price Hike: ಟೊಮೆಟೊ ಕೃಷಿಯಿಂದ 1.8 ಕೋಟಿ ರೂ. ಗಳಿಸಿದ ತೆಲಂಗಾಣದ ರೈತ!
ಮಹಿಪಾಲ್ ರೆಡ್ಡಿ ಏಪ್ರಿಲ್ ತಿಂಗಳಲ್ಲಿ ಟೊಮೆಟೊ ಬೀಜಗಳನ್ನು ಬಿತ್ತಿದ್ದರು. ಬೇಸಿಗೆಯ ಕಾರಣ ಫಸಲು ಹಾಳಾಗಬಾರದು ಎಂಬ ಉದ್ದೇಶದಿಂದ ಬಲೆಗಳನ್ನು ಹಾಕಿ ಕೃಷಿ ಮಾಡಿದ್ದರು. ಟೊಮೆಟೊ ಬೆಳೆ ಕಟಾವಿಗೆ ಸಿದ್ಧವಾದಾಗ ಬೆಲೆ ಗರಿಷ್ಠ ಮಟ್ಟದಲ್ಲಿತ್ತು.
ಮೇದಕ್, ಜುಲೈ 22: ತೆಲಂಗಾಣದ ಮೇದಕ್ (Medak, Telangana) ಜಿಲ್ಲೆಯ ಕೌಡಿಪಲ್ಲಿಯ ರೈತರೊಬ್ಬರು ಟೊಮೆಟೊ (Tomato) ಮಾರಾಟ ಮಾಡಿ 1.8 ಕೋಟಿ ರೂ. ಆದಾಯ ಗಳಿಸಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯದ ರೈತರು ಕಂಗಲಾಗಿದ್ದರ ಬಗ್ಗೆ ವರದಿಗಳನ್ನು ನೋಡಿದ್ದೇವೆ. ಬೆಲೆ ಸಿಗದೆ ಟೊಮೆಟೊವನ್ನು ರಸ್ತೆಬದಿಯಲ್ಲಿ ಎಸೆದು ರೈತರು ಪ್ರತಿಭಟನೆ ಮಾಡಿದ್ದನ್ನೂ ನೋಡಿದ್ದೇವೆ. ಆದರೆ ಈಗ ದೃಶ್ಯ ಉಲ್ಟಾಪಲ್ಟಾ ಆಗಿದೆ. ಈಗ ಟೊಮೆಟೊ ಬೆಳೆದವರಿಗೆ ಹಣವೋ ಹಣ. ಮಾರುಕಟ್ಟೆಯಲ್ಲಿ ಟೊಮೆಟೊಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಟೊಮೆಟೊ ಬೆಳೆದವರಿಗೆ ಕೈತುಂಬಾ ಹಣವೂ ಸಿಗುತ್ತಿದೆ. ಬನ್ಸವಾಡ ಮಹಿಪಾಲ್ ರೆಡ್ಡಿ ಎಂಬ 37 ವರ್ಷದ ರೈತ 8 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಇದುವರೆಗೆ 7,000 ಬಾಕ್ಸ್ ಟೊಮೆಟೊ ಮಾರಾಟ ಮಾಡಿದ್ದಾರೆ. ಅವರು ಪ್ರತಿ ಬಾಕ್ಸ್ಗೆ ಸರಾಸರಿ 2,600 ರೂ.ನಂತೆ ಮಾರಾಟ ಮಾಡಿದ್ದಾರೆ. ರೆಡ್ಡಿ ಅವರು ಕಳೆದ 20 ವರ್ಷಗಳಿಂದ 40 ಎಕರೆ ಜಮೀನಿನಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಅವರು 20 ಎಕರೆ ಜಮೀನನ್ನು ಹೊಂದಿದ್ದಾರೆ ಮತ್ತು ಉಳಿದ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದಿದ್ದಾರೆ.
ಮಹಿಪಾಲ್ ರೆಡ್ಡಿ 10ನೇ ತರಗತಿಯಲ್ಲಿ ಅನುತ್ತೀರ್ಣರಾದ ನಂತರ ಕೃಷಿ ಆರಂಭಿಸಿದ್ದರು. ಈ ಬಾರಿ ಟೊಮೆಟೊ ಮಾರಾಟ ಮಾಡಿ 1.8 ಕೋಟಿ ರೂ. ಆದಾಯ ಗಳಿಸಿದ್ದು, ಇದರಲ್ಲಿ ಲಾಭವೇ 90 ಲಕ್ಷ ರೂ. ಆಗಿದೆ ಎಂದು ‘ಟಿವಿ 9 ತೆಲುಗು’ ವರದಿ ಮಾಡಿದೆ.
ಮಹಿಪಾಲ್ ರೆಡ್ಡಿ ಏಪ್ರಿಲ್ ತಿಂಗಳಲ್ಲಿ ಟೊಮೆಟೊ ಬೀಜಗಳನ್ನು ಬಿತ್ತಿದ್ದರು. ಬೇಸಿಗೆಯ ಕಾರಣ ಫಸಲು ಹಾಳಾಗಬಾರದು ಎಂಬ ಉದ್ದೇಶದಿಂದ ಬಲೆಗಳನ್ನು ಹಾಕಿ ಕೃಷಿ ಮಾಡಿದ್ದರು. ಟೊಮೆಟೊ ಬೆಳೆ ಕಟಾವಿಗೆ ಸಿದ್ಧವಾದಾಗ ಬೆಲೆ ಗರಿಷ್ಠ ಮಟ್ಟದಲ್ಲಿತ್ತು ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ: Tomato Price Hike: ಮಗಳಿಗೆ ಟೊಮೆಟೊದಲ್ಲಿ ತುಲಾಭಾರ ಮಾಡಿಸಿದ ದಂಪತಿ, ಕಣ್ತುಂಬಿಕೊಂಡ ಭಕ್ತರು
ಟೊಮೆಟೊ ಬೆಳೆಯಲು ಎಕರೆಗೆ 2 ಲಕ್ಷ ಖರ್ಚಾಗಿದೆ ಎಂದು ಮಹಿಪಾಲ್ ರೆಡ್ಡಿ ತಿಳಿಸಿದ್ದಾರೆ. ಕೃಷಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ಅನುಭವಗಳಾಗಿವೆ. ಈ ಹಿಂದೆ ಒಂದು ಕೆಜಿ ಟೊಮೆಟೊ ಬೆಲೆ 1 ರೂ.ಗಿಂತ ಕಡಿಮೆ ಇದ್ದ ಕಾರಣ ಟೊಮೆಟೊವನ್ನು ರಸ್ತೆಗೆ ಬಿಸಾಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ